Friday, 22nd November 2024

Bengaluru news: ಪರವಾನಗಿ ಇಲ್ಲದ ಪಿಜಿಗಳಿಗೆ ಬಿಬಿಎಂಪಿ ಬೀಗ

Police News

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ (Bengaluru news) ಪಿಜಿಯಲ್ಲಿ ನಡೆದ ಯುವತಿಯ ಭೀಕರ ಕೊಲೆಯ (Murder case) ಹಿನ್ನೆಲೆಯಲ್ಲಿ, ಬಿಬಿಎಂಪಿ (BBMP) ಅನಧಿಕೃತ ಪಿಜಿಗಳಿಗೆ (Illegal PG) ಬೀಗ ಜಡಿದು ಇನ್ನು ಅಧಿಕೃತ ಪಿಜಿಗಳಿಗೆ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಖಡಕ್ ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದು ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ಸಂಖ್ಯೆಗಿಂತ (ಪಿಜಿ) ಹೆಚ್ಚು ಅನಧಿಕೃತ ಪಿಜಿಗಳು ಕಾರ್ಯಾಚರಣೆ ನಡೆಸುತ್ತಿವೆ. ಬಿಬಿಎಂಪಿ ಕಾಯ್ದೆ ಪ್ರಕಾರ ನಗರದಲ್ಲಿ ಪಿಜಿಗಳನ್ನು ನಡೆಸಲು ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ ನಗರದಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ನಡೆಯುತ್ತಿರುವ ಪಿಜಿಗಳ ಸಂಖ್ಯೆಯೇ ಹೆಚ್ಚಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಒಟ್ಟು 2,193 ಪಿಜಿಗಳು ಬಿಬಿಎಂಪಿ ಪರವಾನಗಿ ಪಡೆದು ನಡೆಸುತ್ತಿದ್ದರೆ 2,320 ಪಿಜಿಗಳು ಯಾವುದೇ ಅನುಮತಿ ಪಡೆಯದೇ ನಡೆಸಲಾಗುತ್ತಿದೆ. ಈ ಪೈಕಿ ಬೆಂಗಳೂರಿನ ಹೊರ ವಲಯಗಳಾದ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ವಲಯ, ಪೂರ್ವ ವಲಯದಲ್ಲಿ ಅತ್ಯಧಿಕ ಸಂಖ್ಯೆಯ ಅನಧಿಕೃತ ಪಿಜಿಗಳಿವೆ.

ಮಾರ್ಗಸೂಚಿ ಬಿಡುಗಡೆ: ನಗರದಲ್ಲಿರುವ ಎಲ್ಲ ಪಿಜಿಗಳಿಗೆ ಬಿಬಿಎಂಪಿ ಎರಡು ತಿಂಗಳ ಹಿಂದೆ ಮಾರ್ಗಸೂಚಿ ನೀಡಿ ಪಾಲನೆ ಮಾಡುವಂತೆ ಸೂಚಿಸಿತ್ತು. ಈ ಪೈಕಿ ಅಧಿಕೃತ ಪಿಜಿಗಳ ಪೈಕಿ 1578 ಪಿಜಿಗಳು ಮಾರ್ಗಸೂಚಿ ಅನುಸಾರ ಕಾರ್ಯಾಚರಣೆ ನಡೆಸುತ್ತಿವೆ. 615 ಪಿಜಿಗಳಲ್ಲಿ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಈ ಪೈಕಿ 856 ಪಿಜಿಗಳಿಗೆ ಈವರೆಗೆ ನೋಟಿಸ್ ನೀಡಲಾಗಿದೆ. ಅನಧಿಕೃತ ಪಿಜಿಗಳ ಪೈಕಿ 1674 ಪಿಜಿಗಳು ಮಾರ್ಗಸೂಚಿ ಅನುಸರಿಸುತ್ತಿದ್ದರೆ, 646 ಪಿಜಿಗಳು ಮಾರ್ಗಸೂಚಿ ಪಾಲಿಸದಿರುವುದು ಕಂಡು ಬಂದಿದೆ. ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪಿಜಿಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಬಿಬಿಎಂಪಿಯ ಮಾರ್ಗಸೂಚಿ ಅನುಸರಿಸದ 21 ಪಿಜಿಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಬಂದ್ ಮಾಡಿದ್ದಾರೆ. ಈ ಪೈಕಿ 1 ಅಧಿಕೃತ ವಾಗಿ ಪರವಾನಗಿ ಪಡೆದಿದ್ದು, ಉಳಿದ 20 ಪಿಜಿಗಳು ಅನಧಿಕೃಕವಾಗಿವೆ.

ಪಿಜಿಗಳಿಗೆ ಮಾರ್ಗಸೂಚಿಗಳು

1) ಪಿಜಿಗಳ ಪ್ರವೇಶ, ನಿರ್ಗಮನ ಮತ್ತು ಆವರಣಗಳ ಚಿತ್ರೀಕರಣಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ,

2) ಸಿಸಿಟಿವಿ ವಿಡಿಯೋ ಸಂರಕ್ಷಣೆ ಕಡ್ಡಾಯ. ಪ್ರತಿಯೊಬ್ಬ ವಾಸಿಗೆ ತಲಾ 70 ಚದರ ಅಡಿ ಕನಿಷ್ಠ ಜಾಗ ಇರಬೇಕು.

3) ಕಟ್ಟಡ ಲಭ್ಯವಿರುವ ಸೌಕರ್ಯಕ್ಕೆ ಅನುಗುಣವಾಗಿ ವಾಸಿಗಳ ಸಂಖ್ಯೆ ನಿಗದಿ ಪಡಿಸಬೇಕು.

4) ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡುವುದು. ಸ್ನಾನ ಗೃಹ ಮತ್ತು ಶೌಚಾಲಯಗಳ ಸೇವೆ ಒದಗಿಸಬೇಕು.

5) ಕಡ್ಡಾಯವಾಗಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಿಜಿಗಳಲ್ಲಿ ಅಡುಗೆ ಮನೆ ಹೊಂದಿರಬೇಕು.

6) 3 ತಿಂಗಳ ಅವಧಿಯೊಳಗೆ ಎಫ್‌ಎಸ್‌ಎಸ್‌ಎಐನಿಂದ ಪರವಾನಗಿ ಪಡೆಯಬೇಕು.

7) ಪಿಜಿಗಳಲ್ಲಿ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533, ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 101 ಪ್ರದರ್ಶಿಸುವುದು.

8) ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಇರಬೇಕು. ಪಿಜಿ ಮಾಲೀಕರು ಕಸವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿ ಮಾಡಬೇಕು.

ಇದನ್ನೂ ಓದಿ: Crime News: ಕೋರಮಂಗಲ ಪಿಜಿಯಲ್ಲಿನ ಹತ್ಯೆ ಪ್ರಕರಣ; 1,205 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ