Friday, 22nd November 2024

Hosur Airport: ಹೊಸೂರು ವಿಮಾನ ನಿಲ್ದಾಣಕ್ಕೆ ತಯಾರಿ ಚುರುಕು, 5 ಸ್ಥಳಗಳ ಅಧ್ಯಯನ

hosur airport

ಚೆನ್ನೈ: ಬೆಂಗಳೂರಿನ ಔದ್ಯಮಿಕ (Bangalore news) ಅವಕಾಶಗಳನ್ನು ಕಸಿದುಕೊಳ್ಳಲು ಮುಂದಾಗಿರುವ ತಮಿಳುನಾಡು ಸರ್ಕಾರ (Tamil Nadu Government) ಕಟ್ಟಲು ಹೊರಟಿರುವ ಹೊಸೂರು ವಿಮಾನ ನಿಲ್ದಾಣಕ್ಕೆ (Hosur airport) ತಯಾರಿಗಳನ್ನು ಚುರುಕುಗೊಳಿಸಿದೆ. ಹೊಸೂರು ಮತ್ತು ಸುತ್ತಮುತ್ತಲಿನ ಐದು ಸಂಭಾವ್ಯ ತಾಣಗಳನ್ನು ಅಧ್ಯಯನ ನಡೆಸಲಾಗಿದೆ.

ತಮಿಳುನಾಡು ಡಿಎಂಕೆ ಸರ್ಕಾರದ ಕೋರಿಕೆಯಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಇದನ್ನು ಅಧ್ಯಯನ ಮಾಡಿದೆ. ಇದು ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಹೊಸೂರಿನ ಔದ್ಯಮಿಕ ಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸಲಿದೆ.

ಎಎಐ ಅಧ್ಯಯನ ಮಾಡಿರುವ ಈ ಐದು ಸ್ಥಳಗಳು ಹೊಸೂರಿನ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ​​ಲಿಮಿಟೆಡ್ (ಟಿಎಎಎಲ್‌) ಒಡೆತನದ ಖಾಸಗಿ ಏರ್‌ಸ್ಟ್ರಿಪ್ ಅನ್ನು ಒಳಗೊಂಡಿದೆ. ಇದು ಬೆಂಗಳೂರು ಸಮೀಪದ ಕೈಗಾರಿಕಾ ಪಟ್ಟಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯ ಆರಂಭಿಕ ಹಂತಗಳಲ್ಲಿ ಒಂದೆನಿಸಿದೆ.

ತಮಿಳುನಾಡು ರಾಜಧಾನಿಗೆ ಎರಡನೇ ವಿಮಾನ ನಿಲ್ದಾಣ ಹೊಂದಲು, ಚೆನ್ನೈ ಮತ್ತು ಸುತ್ತಮುತ್ತಲಿನ ನಾಲ್ಕು ಸ್ಥಳಗಳ ಸಮೀಕ್ಷೆಯನ್ನು ಎಎಐ ನಡೆಸಿದೆ. ಹೊಸ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರವು ಆಯ್ಕೆ ಮಾಡಿರುವ ಪರಂದೂರ್ ಕೂಡ ಎಎಐ ಸೂಚಿಸಿದ ಸ್ಥಳಗಳಲ್ಲಿ ಒಂದೆನಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಕೃಷ್ಣಗಿರಿ ಜಿಲ್ಲೆಯಲ್ಲಿ ಒಟ್ಟು ಐದು ಸ್ಥಳಗಳನ್ನು ಎಎಐ ಸಮೀಕ್ಷೆ ಮಾಡಿದೆ. ಎಎಐ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜೂನ್ 27ರಂದು ವಿಧಾನಸಭೆಯಲ್ಲಿ ಹೊಸೂರು ವರ್ಷಕ್ಕೆ ಸುಮಾರು 3 ಕೋಟಿ ಪ್ರಯಾಣಿಕರು ಪ್ರಯಾಣಿಸಬಹುದಾದ, 2,000 ಎಕರೆ ಪ್ರದೇಶದಲ್ಲಿ ತನ್ನದೇ ಆದ ವಿಮಾನ ನಿಲ್ದಾಣ ಹೊಂದಲಿದೆ ಎಂದು ಘೋಷಿಸಿದ್ದರು.

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯಲ್ಲಿ 2033ರವರೆಗೆ ಯಾವುದೇ ವಿಮಾನ ನಿಲ್ದಾಣವನ್ನು ನಿರ್ಮಿಸಬಾರದು ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಜತೆಗೆ ಆಗಿರುವ ರಿಯಾಯಿತಿ ಒಪ್ಪಂದವನ್ನು ಸರ್ಕಾರ ನೆನಪಿನಲ್ಲಿಟ್ಟುಕೊಂಡಿದೆ. ಬಿಐಎಎಲ್‌ನೊಂದಿಗೆ ತಮಿಳುನಾಡು ಸರ್ಕಾರ ಮತ್ತು ಟಿಎಎಎಲ್‌ ಕಳೆದ ಎರಡು ವರ್ಷಗಳಿಂದ ಸಂಪರ್ಕದಲ್ಲಿವೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Pralhad Joshi : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು; ಪ್ರಲ್ಹಾದ್ ಜೋಶಿ