ದೇಹದ (Health Tips) ತೂಕ (weight) ಹೆಚ್ಚಾಗುವುದು ಅಪಾಯಕಾರಿಯಾಗಿರುತ್ತದೆ. ಒಮ್ಮೆ ಹೆಚ್ಚಾದ ತೂಕವನ್ನು ಇಳಿಸುವುದು ಬಹು ಕಷ್ಟದ ಕೆಲಸವೂ ಹೌದು. ಕೆಲವರು ಬೇಗನೆ ದೇಹದ ತೂಕ ಇಳಿಸಬೇಕು ಎಂದು ಮಾಡುವ ಕಸರತ್ತುಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತೂಕ ಇಳಿಸುವ ಹೊಸ ವಿಧಾನವೊಂದು ಟ್ರೆಂಡಿಂಗ್ ನಲ್ಲಿದೆ. ಅದುವೇ 30-30-30 ನಿಯಮ.
30-30-30 ನಿಯಮ ಏನು?
ಈ ನಿಯಮವು ಬೆಳಗ್ಗೆ ಎದ್ದ 30 ನಿಮಿಷಗಳಲ್ಲಿ 30 ಗ್ರಾಂ ಪ್ರೋಟೀನ್ ಅನ್ನು ತಿನ್ನಲು ಮತ್ತು ಅನಂತರ 30 ನಿಮಿಷಗಳ ನಿಧಾನಗತಿಯ ವ್ಯಾಯಾಮವನ್ನು ಒಳಗೊಂಡಿರುತ್ತದೆ.
ಪ್ರಯೋಜನಗಳೇನು?
30-30-30 ನಿಯಮ ಪಾಲನೆಯಿಂದ ದೇಹದ ತೂಕವನ್ನು ಬಹುಬೇಗನೆ ಇಳಿಸಬಹುದು ಎನ್ನಲಾಗುತ್ತದೆ. ಹೊಸ ಆಹಾರಕ್ರಮ ಅಥವಾ ಹೊಸ ವ್ಯಾಯಾಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿರುವವರು ಈ ಬಗ್ಗೆ ಪ್ರಯೋಗ ಮಾಡಿ ನೋಡಬಹುದು. 30-30-30 ನಿಯಮದ ಪ್ರಕಾರ ಬೆಳಗ್ಗೆ ಒಂದೆರಡು ಬೇಯಿಸಿದ ಮೊಟ್ಟೆ ಅಥವಾ ಒಂದು ಗ್ಲಾಸ್ ಹಾಲು ಕುಡಿಯುವದರಿಂದ ದಿನಚರಿ ಪ್ರಾರಂಭಿಸಿ, ಬಳಿಕ 30 ನಿಮಿಷಗಳ ನಡಿಗೆ ಪ್ರಯೋಜನಕಾರಿಯಾಗಿದೆ.
ಎದ್ದ ತಕ್ಷಣ ಪ್ರೊಟೀನ್ ತಿನ್ನಬೇಕೇ?
ಉಪಾಹಾರ ಸೇವನೆಗೆ ಯಾವುದೇ ಸಮಯ ಎಂದಿರುವುದಿಲ್ಲ. ಆದರೆ ಊಟದಲ್ಲಿ ಪ್ರೊಟೀನ್ ಸೇರಿಸುವುದು ಟೈಪ್ 2 ಮಧುಮೇಹ, ಸ್ಥೂಲಕಾಯತೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಕೊಡುತ್ತದೆ. ಆದರೆ ಬೆಳಗಿನ ಉಪಾಹಾರದಲ್ಲಿ ಸಕ್ಕರೆ ಮತ್ತು ಹೆಚ್ಚಿನ ಪ್ರೊಟೀನ್ ಸೇವನೆಯನ್ನು ಕಡಿಮೆ ಮಾಡುವುದು ದೇಹದ ಶಕ್ತಿಯ ಮಟ್ಟ ಸಮತೋಲನಕ್ಕೆ ಸಹಾಯ ಮಾಡುತ್ತದೆ.
ಚಯಾಪಚಯ ಕ್ರಿಯೆಯಲ್ಲಿ ಪ್ರೊಟೀನ್ ಹೆಚ್ಚಿನ ಶಕ್ತಿಯನ್ನು ಉಂಟು ಮಾಡುತ್ತದೆ. ಇದು ನೇರವಾಗಿ ಸ್ನಾಯುಗಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ಪ್ರೊಟೀನ್ ಹೆಚ್ಚು ಸಂತೃಪ್ತ ಭಾವನೆಯನ್ನು ಕೊಡುತ್ತದೆ. ಆದರೆ ಹೆಚ್ಚಿನ ಪ್ರೊಟೀನ್ ಸೇವನೆ ಮೂತ್ರಪಿಂಡಗಳಿಗೆ ಹೆಚ್ಚಿನ ಹೊರೆ ಉಂಟು ಮಾಡುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಮಟ್ಟವೂ ಹೆಚ್ಚಾಗಿರುತ್ತದೆ. ಆಹಾರದಲ್ಲಿ ಬದಲಾವಣೆ ಮಾಡಿ ದೇಹದ ತೂಕ ಇಳಿಸಬೇಕೆಂದಾದರೆ ಆಹಾರ ತಜ್ಞರೊಂದಿಗೆ ಚರ್ಚಿಸುವುದು ಬಹುಮುಖ್ಯ.
ವ್ಯಾಯಾಮ
ನಡಿಗೆಯು ಹೆಚ್ಚು ಆಯಾಸ ಉಂಟು ಮಾಡುವುದಿಲ್ಲ. ವಯಸ್ಕರಿಗೆ ಪ್ರತಿ ವಾರ 150 ನಿಮಿಷಗಳ ಕಾಲ ನಡೆಯುವುದು ಅಥವಾ ದಿನಕ್ಕೆ 30 ನಿಮಿಷಗಳ ಕಾಲದ ನಡಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಬೆಳಗ್ಗಿನ ಲಘು ದೈಹಿಕ ಚಟುವಟಿಕೆಯು ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ.
ಲಘು ದೈಹಿಕ ಚಟುವಟಿಕೆಯಲ್ಲಿ ವಾಕಿಂಗ್, ಸೈಕ್ಲಿಂಗ್, ನೃತ್ಯ ಮತ್ತು ಕ್ರೀಡೆಗಳು ಸೇರಿವೆ. ಇದು ದೇಹದ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
30-30-30 ನಿಯಮ ಆರೋಗ್ಯಕರವೇ?
ದೇಹದ ತೂಕ ಇಳಿಸಲು ಮಾಡುವ ಯಾವುದೇ ವೇಗವಾದ ಪ್ರಕ್ರಿಯೆಯು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಿಲ್ಲ. ಶಾಶ್ವತವಾದ ಆರೋಗ್ಯಕರ ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಇದು ಸಾಧ್ಯ.
ನಮ್ಮ ದೇಹಕ್ಕೆ ದೈನಂದಿನ ಅಗತ್ಯಕ್ಕಿಂತ ಶೇ.30ರಷ್ಟು ಕಡಿಮೆ ಕ್ಯಾಲೊರಿಯನ್ನು ಸೇವಿಸುವುದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ನಿಧಾನವಾಗಿ ತೂಕ ಕಡಿಮೆಯಾಗುತ್ತದೆ.
ಅಲ್ಲದೇ ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಹೊಟ್ಟೆಯ ಸುತ್ತಮುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ 30-30-30 ನಿಯಮ ಆರೋಗ್ಯಕರ ಎಂದು ಪರಿಗಣಿಸಬಹುದು. ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲ.
New Experiment: ಮಾನವನ ಹೊಟ್ಟೆಯಲ್ಲಿ ಬ್ಲೇಡ್ ಕೂಡ ಕರಗಬಲ್ಲದು!
ನಮ್ಮ ದೈನಂದಿನ ವ್ಯಾಯಾಮ, ಆಹಾರ ಕ್ರಮವನ್ನು ಬದಲಿಸಬೇಕಾದರೆ ತಜ್ಞರ ಸಲಹೆ ಪಡೆದು ಮಾಡುವುದು ಉತ್ತಮ. ಯಾಕೆಂದರೆ ಇದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಸರಿಯಾಗಿ ಮಾಡುವುದು ಬಹುಮುಖ್ಯವಾಗಿದೆ.