Saturday, 23rd November 2024

Ind vs Ban 3rd T20I: ನಾಳೆ ಭಾರತ-ಬಾಂಗ್ಲಾ ಅಂತಿಮ ಟಿ20

ಹೈದರಾಬಾದ್‌: ಪ್ರವಾಸಿ ಬಾಂಗ್ಲಾದೇಶ ಮತ್ತು ಆತಿಥೇಯ ಭಾರತ ನಡುವಣ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ(Ind vs Ban 3rd T20I) ನಾಳೆ(ಶನಿವಾರ) ಹೈದರಾಬಾದ್‌ನ ‘ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ(Rajiv Gandhi International Cricket Stadium) ನಡೆಯಲಿದೆ. ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಸೂರ್ಯಕುಮಾರ್‌ ಯಾದವ್‌ ಪಡೆ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡುವ ಯೋಜನೆಯಲ್ಲಿದೆ. ವಿಜಯದಶಮಿಯಂದು ಯಾರಿಗೆ ವಿಜಯ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಕಾರಣ ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಕೆಲ ಬದಲಾವಣೆ ಮಾಡಿ, ಮೊದಲೆರಡು ಪಂದ್ಯಗಳನ್ನು ಆಡದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. 2 ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌ ಕೈಬಿಟ್ಟು ಅವರ ಸ್ಥಾನದಲ್ಲಿ ಜಿತೇಶ್‌ ಶರ್ಮಾ ಮತ್ತು ರವಿ ಬಿಷ್ಣೋಯಿ ಆಡಬಹುದು.

ಪಿಚ್‌ ರಿಪೋರ್ಟ್‌

ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂನ ಪಿಚ್‌ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಇಲ್ಲಿ ಇದುವರೆಗೆ 2 ಅಂತಾರಾಷ್ಟ್ರೀಯ ಪಂದ್ಯ ನಡೆದಿದ್ದು ಎರಡೂ ಪಂದ್ಯದಲ್ಲಿಯೂ ಬೃಹತ್‌ ಮೊತ್ತ ದಾಖಲಾಗಿದೆ. ಒಂದು ಪಂದ್ಯದಲ್ಲಿ 200ರನ್‌ ಗಡಿ ದಾಟಿದೆ. 2 ಪಂದ್ಯ ಕೂಡ ಭಾರತವೇ ಗೆದ್ದಿದೆ. ಅದು ಕೂಡ ಚೇಸಿಂಗ್‌ ಮೂಲಕ. ಸೂರ್ಯಕುಮಾರ್‌ ಈ ಮೈದಾನದಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಗೆ ಅಗ್ರಸ್ಥಾನ.

ಇದನ್ನೂ ಓದಿ IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ

ಹವಾಮಾನ ವರದಿ

ಅಕ್ಯುವೆದರ್ ಪ್ರಕಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಹವಾಮಾನವು(IND vs BAN 3rd T20I Weather Report) ಮೋಡ ಕವಿದ ವಾತಾವರಣದಿಂದ ಕೂಡಿಲಿದೆ ಎಂದು ತಿಳಿಸಿದೆ. ಜತೆಗೆ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ನಿರೀಕ್ಷೆ ಮಾಡಲಾಗಿದೆ. ಮಳೆ ಸಾಧ್ಯತೆ ಶೇ. 23 ರಷ್ಟು ಇರಲಿದೆ ಎಂದು ತಿಳಿಸಿದೆ.

ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್ ಶರ್ಮಾ, ಜಿತೇಶ್‌ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಬಾಂಗ್ಲಾದೇಶ: ಪರ್ವೇಜ್ ಹೊಸೈನ್ ಎಮಾನ್, ಲಿಟ್ಟನ್ ದಾಸ್ (ವಿ.ಕೀ), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದೋಯ್‌, ಮಹ್ಮುದುಲ್ಲಾ, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರೆಹಮಾನ್.