ವಿದ್ಯಮಾನ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಯಾವ ಪಕ್ಷದ ನಾಯಕರಿರಲಿ, ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿದರೆ ಅವರಿಗೆ ಶಿಕ್ಷೆಯಾಗಬೇಕು. ಆದರೆ, ಪರಸ್ಪರರ ಹಗರಣ-ಅವ್ಯವಹಾರಗಳ ಮಾಹಿತಿಯಿದ್ದರೂ, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಾಯಕರು ಗಳು ಇಷ್ಟು ದಿನ ಸುಮ್ಮನಿದ್ದು, ತಮ್ಮ ಬುಡಕ್ಕೆ ಬರುವವರೆಗೆ ಆನಂದದಿಂದ ಸಂಸಾರ ಸಾಗಿಸುತ್ತಿದ್ದರಲ್ಲಾ ಎಂಬುದು ಅಚ್ಚರಿಯುಂಟು ಮಾಡಿದೆ.
ಕಳೆದ ಕೆಲ ತಿಂಗಳುಗಳಿಂದ ಕರ್ನಾಟಕದ ರಾಜಕೀಯವು ವಿಲಕ್ಷಣವಾಗಿ ಸಾಗುತ್ತಿದೆ. ರಾಜಕಾರಣಿಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವ ಹಾಗೂ ತಂತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲೇ ವ್ಯಸ್ತರಾಗಿ ರುವಂತೆ ತೋರುತ್ತಿದೆ. ಹಾಗೆ ನೋಡಿದರೆ, ಈ ಎಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆಯೇನೋ ಎನಿಸುತ್ತದೆ; ಏಕೆಂದರೆ, ಒಬ್ಬರ ಬಂಡವಾಳವನ್ನು ಇನ್ನೊಬ್ಬರು ಬಿಚ್ಚಿಡುವ, ಒಬ್ಬರ ಹಗರಣವನ್ನು ಇನ್ನೊಬ್ಬರು ಹೊರ ತರುವ ಮೂಲಕ ಇವರೆಲ್ಲಾ ಒಂದು ರೀತಿಯ ಸ್ವಚ್ಛತಾ ಕಾರ್ಯಕ್ರಮವನ್ನು ಜಾರಿಯಲ್ಲಿಟ್ಟಂತಿದೆ!
ಇದು ಆಗೊಮ್ಮೆ ಈಗೊಮ್ಮೆಯಾದರೂ ನಡೆದರೆ, ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಸ್ವಲ್ಪವಾದರೂ ಶುದ್ಧೀ ಕರಣವಾಗಬಹುದೇನೋ? ಇಲ್ಲದಿದ್ದರೆ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಪರಸ್ಪರ ಒಳಗೊಳಗೇ ಹೊಂದಾಣಿಕೆ ಮಾಡಿಕೊಂಡು, ಜನರ ಮುಂದೆ ಮಾತ್ರ ಹಾವು-ಮುಂಗುಸಿಯಂತೆ ಕಚ್ಚಾಡುವ ನಾಟಕ ಹಾಗೂ ಈ ರಾಜಕಾರಣಿಗಳ ಒಳಗುಟ್ಟು ನಮಗೆ ತಿಳಿಯುತ್ತಲೇ ಇರಲಿಲ್ಲವೇನೋ!
ಸೂಕ್ಷ್ಮವಾಗಿ ನೋಡಿದರೆ, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಕರ್ನಾಟಕ ರಾಜಕಾರಣದ
ಬೃಹನ್ನಾಟಕ ಪ್ರಾರಂಭವಾಗಿರುವುದು ತಿಳಿಯುತ್ತದೆ. ಈ ಚುನಾವಣೆಯಲ್ಲಿ ಜೆಡಿಎಸ್ ಒಂದೊಮ್ಮೆ ಬಿಜೆಪಿ ಜತೆಗೆ
ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ನೊಂದಿಗೆ ಕೈಜೋಡಿಸಿದ್ದಿದ್ದರೆ ಅಥವಾ ಏಕಾಂಗಿಯಾಗಿ ಚುನಾವಣೆ ಎದುರಿಸಿ ದ್ದರೂ ಸಾಕಾಗಿತ್ತು, ಕಾಂಗ್ರೆಸ್ನವರಿಗೆ ದೇವೇಗೌಡರು ಇಂದಿಗೂ ಪೂಜ್ಯರಾಗೇ ಇರುತ್ತಿದ್ದರು. ಮಾತ್ರವಲ್ಲ,
ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ರಾಜ್ಯದ ಯುವ ‘ಐಕಾನ್’ಗಳಾಗಿ ಮಿಂಚುತ್ತಿರಬಹುದಾಗಿತ್ತು,
ರೇವಣ್ಣ ದಂಪತಿ ತಮ್ಮ ಹಾಸನದ ದರ್ಬಾರನ್ನು ನಿಶ್ಚಿಂತೆಯಿಂದ ಮುಂದುವರಿಸಬಹುದಾಗಿತ್ತು. ಆದರೆ ಹಾಗಾಗಿಲ್ಲ. ರಾಜ್ಯದಲ್ಲಿ ಒಟ್ಟಿಗೆ ಸರಕಾರ ನಡೆಸಿ ಕಹಿ ಅನುಭವಿಸಿದ್ದ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಸಹವಾಸ ಸಾಕಾಗಿತ್ತು.
ದೇವೇಗೌಡರಿಗೆ, ಕೇಂದ್ರದಲ್ಲಿ ಮೋದಿಯವರು ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತವೆಂಬುದು ಗೊತ್ತಿತ್ತು ಮತ್ತು ಕುಮಾರಸ್ವಾಮಿಯವರನ್ನು ಕೇಂದ್ರ ಮಂತ್ರಿಯನ್ನಾಗಿಸಿ, ಮುಳುಗುತ್ತಿದ್ದ ‘ಜೆಡಿಎಸ್’ ಎಂಬ ಹಡಗನ್ನು ದಡ ಸೇರಿಸಬೇಕಾಗಿತ್ತು. ಹಾಗಾಗಿ ಅವರು ಸ್ವಾಭಾವಿಕವಾಗಿ ಎನ್ಡಿಎ ಮೈತ್ರಿಕೂಟವನ್ನು ಸೇರಲು ನಿರ್ಧರಿಸಿ ಬಿಟ್ಟರು. ನಿರೀಕ್ಷೆಯಂತೆ ಎರಡೂ ಪಕ್ಷಗಳ ಮೈತ್ರಿಯಿಂದಾಗಿ ಮತಗಳ ಕ್ರೋಡೀಕರಣವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ದೊಡ್ಡಪೆಟ್ಟು ಬಿತ್ತು. ರಾಜ್ಯದ ಜನಪ್ರಿಯ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವುದರೊಳಗೆ ನಡೆದ ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸುಂಟರಗಾಳಿಗೆ ಅದು ಸಿಲುಕಿ ದಿಕ್ಕಾಪಾಲಾಯಿತು.
ಅಧಿಕಾರವಿರುವ ರಾಜ್ಯದಲ್ಲಿ ಕಾಂಗ್ರೆಸ್ಗೆ 28ಲ್ಲಿ 9 ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. 20ಕ್ಕೂ
ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ, ತಮ್ಮ ಮೇಲೆ ಬಹಳ
ನಿರೀಕ್ಷೆಯಿಟ್ಟಿದ್ದ ‘ಕೈ’ ಹೈಕಮಾಂಡ್ಗೆ ಏನು ಉತ್ತರ ಕೊಡುವುದೆಂದು ಗೊತ್ತಾಗಲಿಲ್ಲ. ಅದರಲ್ಲೂ, ಕರ್ನಾಟಕ ದವರೇ ರಾಷ್ಟ್ರಮಟ್ಟದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿರುವಾಗ ಈ ಸೋಲು ಮುಜುಗರ ಉಂಟು ಮಾಡುವಂಥದ್ದೇ ಆಗಿತ್ತು. ‘ಪಂಚ ಗ್ಯಾರಂಟಿ’ಗಳ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಲೋಕಸಭಾ ಚುನಾವಣೆ ಯಲ್ಲಿ ಅದು ಮೂರುಕಾಸಿನ ಕೆಲಸಕ್ಕೂ ಬರಲಿಲ್ಲ. ‘ಅಭಿಮಾನಕ್ಕೆ ಬಿದ್ದ ಈ ಪೆಟ್ಟನ್ನು ಸಹಿಸಿಕೊಳ್ಳುವುದಾದರೂ ಹೇಗೆ?’ ಎಂಬ ಪ್ರಶ್ನೆಯು ಆಗ ಪ್ರಾಯಶಃ ಕಾಂಗ್ರೆಸ್ಸಿಗರನ್ನು ಕಾಡಿದ್ದಿರಬೇಕು!
ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗಮನಿಸಬೇಕು. ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ದೇವೇಗೌಡರ ಪೌರೋಹಿತ್ಯದಲ್ಲಿ ನಡೆದ ಜೆಡಿಎಸ್-ಬಿಜೆಪಿಗಳ ಮೈತ್ರಿಯೇ 20 ಸ್ಥಾನ ಗೆಲ್ಲುವ ತಮ್ಮ ಯೋಜನೆಗೆ ದೊಡ್ಡ ಆಘಾತ ನೀಡಬಹುದು ಎಂಬ ಅಭಿಪ್ರಾಯಕ್ಕೆ ಬಂದ ರಾಜ್ಯ ಕಾಂಗ್ರೆಸ್ಸಿನ ಧುರೀಣರು, ಚುನಾವಣೆಯ ಹೊಸ್ತಿಲಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅವರ ಕರ್ಮಕಾಂಡವನ್ನು ಬಯಲಿಗೆಳೆಯುವ ಮೂಲಕ ಜೆಡಿಎಸ್ ಕುಟುಂಬಕ್ಕೂ, ವಯೋವೃದ್ಧ ದೇವೇಗೌಡರಿಗೂ ಮರ್ಮಾಘಾತ ನೀಡಿಬಿಟ್ಟರು.
ಒಟ್ಟಿಗೆ ಅಧಿಕಾರ ನಡೆಸುವಾಗ ಕಾಂಗ್ರೆಸ್ಸಿಗರಿಗೆ ‘ಸೂರಜ್-ಪ್ರಜ್ವಲ್ ಪ್ರಕರಣ’ ಗೊತ್ತೇ ಇರಲಿಲ್ಲ ಅಂತೇನಲ್ಲ. ಇದು ‘ನೀವು ನಮ್ಮ ಜತೆಗಿದ್ದಿದ್ದರೆ ನಾವೂ ನಿಮ್ಮ ಜತೆಗಿರುತ್ತಿದ್ದೆವು; ನೀವು ನಮ್ಮನ್ನು ಬಿಟ್ಟುಹೋಗಿ ಪೆಟ್ಟುಕೊಡುವು ದಾದರೆ, ನಾವೂ ನಿಮ್ಮನ್ನು ಸುಮ್ಮನೆ ಬಿಡಲಾಗುವುದಿಲ್ಲ’ ಎನ್ನುವ ಸಂದೇಶವನ್ನು ರವಾನಿಸಿರಲಿಕ್ಕೆ ಸಾಕು ಎಂಬುದು ಜನಾಭಿಪ್ರಾಯ. ‘ಹಾಗಲ್ಲದಿದ್ದಿದ್ದರೆ ಹೀಗೆಲ್ಲಾ ಆಗಲಿಕ್ಕೆ ಸಾಧ್ಯವೇ ಇರಲಿಲ್ಲ’ ಎಂಬುದು ಜೆಡಿಎಸ್ನವರ ಅಭಿಪ್ರಾಯ.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವಿದೆ ಎನ್ನಲಾಗುವ ‘ಮುಡಾ’ ಹಗರಣವನ್ನು ಜನರಿಗೆ ತಲುಪಿಸುವ ಉದ್ದೇಶದ, ಬೆಂಗಳೂರಿನಿಂದ ಮೈಸೂರಿನವರೆಗಿನ ಮಿತ್ರಪಕ್ಷಗಳ ಜಂಟಿ ಪಾದಯಾತ್ರೆ ಪ್ರಕಟ ವಾಗುವವರೆಗೆ, ರಾಜ್ಯ ರಾಜಕಾರಣದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ಸಂಬಂಧ ಒಂದು ಮಟ್ಟಿಗೆ ಸುಸೂತ್ರವಾಗಿಯೇ ಇತ್ತು; ಉಭಯ ಪಕ್ಷಸ್ಥರೂ ಒಬ್ಬರಿಗೊಬ್ಬರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು.
‘ನಾವು ಹೊಡೆದ ಹಾಗೆ ಮಾಡುತ್ತೇವೆ, ನೀವು ಅತ್ತ ಹಾಗೆ ಮಾಡಿ’ ಎನ್ನುವಂತೆ ಸಾಗಿತ್ತು ಅವರ ಸಹಜೀವನ.
ಹಾಗೆ ನೋಡಿದರೆ, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣವೂ ಸರಕಾರವನ್ನು ಅಷ್ಟೊಂದು ಬಾಽಸಿರಲಿಲ್ಲ ಎನ್ನಬಹುದು. ಈ ಹಗರಣದ ತನಿಖೆಗೆ ರಾಜ್ಯ ಸರಕಾರವು ರಚಿಸಿದ್ದ ಎಸ್ಐಟಿಯು, ಸಚಿವ ನಾಗೇಂದ್ರ ಮತ್ತು
ನಿಗಮದ ಅಧ್ಯಕ್ಷರನ್ನು ಬಹಳ ದಿನಗಳವರೆಗೆ ಕರೆದು ಮಾತಾಡಿಸುವ ಗೋಜಿಗೂ ಹೋಗಿರಲಿಲ್ಲ, ವಿಪಕ್ಷದವರೂ
ಆ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ‘ಇ.ಡಿ’ ಎಂಬುದು ಸುಮ್ಮನಿರಬೇಕಲ್ಲ!
ಹಗರಣ ಒಳಗೊಂಡಿರುವ ಮೊತ್ತವನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು, ಸಚಿವ ನಾಗೇಂದ್ರರನ್ನು ಬಂಧಿಸಿ ವಿಚಾರಣೆಗೆ ಶುರುವಿಟ್ಟುಕೊಂಡುಬಿಟ್ಟಿತು. ಅದಿಲ್ಲದಿದ್ದರೆ, ನಾಗೇಂದ್ರರೂ, ನಿಗಮದ ಅಧ್ಯಕ್ಷರಾದ ದದ್ದಲ್ ಅವರೂ ಎಸ್ಐಟಿ ತನಿಖೆಯಲ್ಲಿ ಇಷ್ಟೊತ್ತಿಗೆ ‘ಕ್ಲೀನ್ಚಿಟ್’ ತೆಗೆದುಕೊಂಡು ಬಂದು, ‘ಇದು ಅಽಕಾರಿಗಳಿಂದ ಆದ ತಪ್ಪು’ ಎಂದು ತಿಪ್ಪೆ ಸಾರಿಸಿಬಿಡುತ್ತಿದ್ದರೇನೋ! (ಹಗರಣದಲ್ಲಿ ಸಚಿವ ನಾಗೇಂದ್ರರ ಯಾವುದೇ ಕೈವಾಡವಿಲ್ಲ ಎಂದು ಈಗಾಗಲೇ ಎಸ್ಐಟಿ ವರದಿ ಪ್ರಕಟವಾಗಿರುವುದನ್ನು ಗಮನಿಸಬಹುದು).
ಆದರೆ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳನ್ನು ನೇರವಾಗಿ ಗುರಿಯಾಗಿಸಿ, ಅವರ ರಾಜೀನಾಮೆ ನಿರೀಕ್ಷಿಸಿ
ನಡೆಸಿದ ‘ಬೆಂಗಳೂರು-ಮೈಸೂರು ಜಂಟಿ ಪಾದಯಾತ್ರೆ’ ಇದೆಯಲ್ಲಾ ಅದು ರಾಜ್ಯದಲ್ಲಿ ರಾಜಕೀಯ ಬಿರುಗಾಳಿಗೆ
ಕಾರಣವಾಯಿತು. ಅದರಲ್ಲೂ, ಅಧಿಕಾರಾರೂಢ ಕಾಂಗ್ರೆಸ್ಸಿಗರಿಗೆ ಇದು ನುಂಗಲಾರದ ತುತ್ತಾಗಿರುವುದಂತೂ ಸತ್ಯ.
ಅಲ್ಲಿಂದ ಮುಂದಕ್ಕೆ ಶುರುವಾಯಿತು ನೋಡಿ ಮೊಕದ್ದಮೆಗಳ ಮೇಲಾಟ! ‘ನೀವು ನಮ್ಮ ಬಗ್ಗೆ ಮಾತಾಡುವು ದಾದರೆ, ನಿಮ್ಮ ಬಗ್ಗೆ ಮಾತಾಡಲು ನಮಗೆ ನೂರು ವಿಷಯಗಳಿವೆ’ ಎನ್ನುವ ತೆರದಲ್ಲಿ ವಿಪಕ್ಷಗಳ ನಾಯಕರುಗಳ ಒಂದೊಂದೇ ಹಗರಣಗಳನ್ನು ಹೆಕ್ಕಿ ತೆಗೆದು ಬಯಲಿಗೆಳೆಯಲಾಯಿತು.
ಲೋಕಸಭಾ ಚುನಾವಣೆಗೂ ಮುನ್ನವೇ ದಾಖಲಾಗಿದ್ದ ಯಡಿಯೂರಪ್ಪನವರ ಮೇಲಿನ ‘ಪೋಕ್ಸೋ’ ಪ್ರಕರಣಕ್ಕೆ
ವೇಗ ದಕ್ಕಿತು. ಜೆಡಿಎಸ್ ಮುಖಂಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ‘ಡಿನೋಟಿಫಿಕೇಷನ್’
ಪ್ರಕರಣ ಈಚೆಗೆ ಬಂತು. ಇವರ ಮೇಲೆ ಸುಲಿಗೆ ಮತ್ತು ಜೀವಬೆದರಿಕೆಯ ಮತ್ತೊಂದು ಆರೋಪವೂ ಹೊರಬಂದು ಎಫ್ಐಆರ್ ಕೂಡ ದಾಖಲಾಯಿತು. ಈಗ, ವಿಪಕ್ಷ ನಾಯಕ ಆರ್.ಅಶೋಕ್ ಭಾಗಿಯಾಗಿದ್ದಾರೆ ಎನ್ನಲಾಗುವ ಭೂಹಗರಣವೊಂದು ಈಚೆಗೆ ಬಂದು ಭಾರಿ ಸುದ್ದಿಮಾಡುತ್ತಿದೆ. ವಿಜಯೇಂದ್ರರ ವಿರುದ್ಧವೂ ಏನಾದರೂ ಹಗರಣ ವು ಯಾವುದೇ ಕ್ಷಣಕ್ಕೆ ಹೊರಬಂದರೆ ಜನರು ಅಚ್ಚರಿಪಡಬೇಕಿಲ್ಲ. ಬಿಜೆಪಿ ಕಾಲದ ‘ಕೋವಿಡ್’ ಅವ್ಯವಹಾರಗಳ ಕುರಿತಾದ ತನಿಖೆಯೂ ಏಕಾಏಕಿ ಆರಂಭವಾಗಿಬಿಟ್ಟಿದೆ. ಚುನಾವಣಾ ಬಾಂಡ್ ವಿಷಯದಲ್ಲಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ರ ಮೇಲೂ ದೂರು ದಾಖಲಾಯಿತು.
ಅಧಿಕಾರಕ್ಕೆ ಬಂದ ಒಂದು ವರ್ಷದಿಂದ ಸಮಾಧಾನದಿಂದಿದ್ದ ಆಡಳಿತ ಪಕ್ಷವು, ವಿಪಕ್ಷಗಳ ವಿರುದ್ಧ ಏಕಾಏಕಿ ಹಗರಣಗಳ ಮಳೆ ಸುರಿಸಿ ಸಮರ ಸಾರಿಬಿಟ್ಟಿತು. ವಿರೋಧ ಪಕ್ಷದಲ್ಲಿದ್ದಾಗ ‘40 ಪರ್ಸೆಂಟ್ ಸರಕಾರ’ ಎಂದು ಬಿಜೆಪಿ ಸರಕಾರವನ್ನು ವಾಚಾಮಗೋಚರವಾಗಿ ದೂಷಿಸಿ, ‘ಮುಂದೆ ನಾವು ಅಧಿಕಾರಕ್ಕೆ ಬಂದರೆ ಒಂದೊಂದು ಹಗರಣ ವನ್ನೂ ಹೊರತೆಗೆದು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದವರಿಗೆ, ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳು ಅವರ ಸರಕಾರದ ಮೇಲೆಯೇ ಏರಿ ಬರುವವರೆಗೆ ತಾವು ಹಾಗೆಂದಿದ್ದು ಮರೆತೇ ಹೋಗಿತ್ತು. ಕೋವಿಡ್ ಸಮಯದಲ್ಲಿ 10 ಸಾವಿರ ಕೋಟಿ ರು. ‘ಅಪರಾತಪರಾ’ ಆಗಿದೆ ಎನ್ನುವ ಕಾಂಗ್ರೆಸ್ಸಿ ಗರಿಗೆ, ತಾವು ಅಧಿಕಾರಕ್ಕೆ ಬಂದ ಮೇಲೆ ಅದು ಪ್ರಮುಖ ವಿಷಯವಾಗಿ ಕಾಣಲೇ ಇಲ್ಲ, ಇದಕ್ಕೆ ಏನನ್ನುವುದು? ಇನ್ನು, ಮುನಿರತ್ನ ಅವರ ವಿಷಯಕ್ಕೆ ಬರುವುದಾದರೆ, ಜಾತಿನಿಂದನೆಯ ಆರೋಪದಲ್ಲಿ ಅವರನ್ನು ರಾತ್ರೋರಾತ್ರಿ ಬಂಧಿಸಿ ವಿಚಾರಣೆ ನಡೆಸಲಾಯಿತು.
ಈ ಕೇಸಿನಲ್ಲಿ ಇನ್ನೇನು ಜಾಮೀನು ಸಿಕ್ಕಿ ಹೊರಬಂದರು ಎನ್ನುವುದರೊಳಗೆ ಮತ್ತೊಂದು ಅತ್ಯಾಚಾರ ಕೇಸಿ ನಿಂದಾಗಿ ಅವರು ಜೈಲಿನಲ್ಲೇ ಉಳಿಯುವಂತಾಯಿತು. ಮೊದಲು ಕಾಂಗ್ರೆಸ್ ನಲ್ಲೇ ಇದ್ದವರು, ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರವನ್ನು ಕೆಡವಿ ತತಲವಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಮಂತ್ರಿಯಾಗಿ ಮಿಂಚಿದವರು, ಡಿ.ಕೆ.ಸುರೇಶ್ ಅವರ ಅಭ್ಯರ್ಥಿಯೆಂದೇ ಬಿಂಬಿಸಲಾಗಿದ್ದ ಕುಸುಮಾರನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯಾಸದಿಂದ ಸೋಲಿಸಿ ದ್ದಲ್ಲದೆ ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್.ಮಂಜುನಾಥರ ಗೆಲುವಿಗೆ ಶ್ರಮಿಸಿ ಡಿ.ಕೆ.ಸುರೇಶರ ಅನಿರೀಕ್ಷಿತ ಸೋಲಿಗೆ ಕಾರಣರಾದವರು ಈ ಮುನಿರತ್ನ. ಅಂದಮೇಲೆ ಅವರನ್ನು ಸುಮ್ಮನೆ ಬಿಡಲುಂಟೇ? ಮುನಿರತ್ನ ಅಪರಾಧಿ ಹೌದೋ ಅಲ್ಲವೋ ಎಂಬುದನ್ನು ನ್ಯಾಯಾಲಯವೇ ಹೇಳಬೇಕು; ಆದರೆ, ಅವರ ವಿಷಯವೆಲ್ಲಾ ಇದ್ದಕ್ಕಿದ್ದ ಹಾಗೆ ಈಗ ಬೆಳಕಿಗೆ ಬರುವುದಕ್ಕೆ ಕಾರಣವೇನಿರಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಯಾಗುತ್ತಿರುವುದಂತೂ ಸತ್ಯ.
ನಾಗೇಂದ್ರ, ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿರತ್ನ, ಅಶೋಕ್ ಮುಂತಾದವರು ನಿಜಕ್ಕೂ ತಪ್ಪು ಮಾಡಿ ದ್ದಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ; ಅದನ್ನು ತನಿಖೆಯ ನಂತರ ತೀರ್ಮಾನಿಸಲು ನೆಲದ ಕಾನೂನುಗಳಿವೆ ಮತ್ತು ಅಂತಿಮವಾಗಿ ಕಾನೂನನ್ನು ಎಲ್ಲರೂ ಗೌರವಿಸಲೇಬೇಕಾಗುತ್ತದೆ. ಈ ಕುರಿತು ಸದ್ಯಕ್ಕೆ ನಾವು ಹೆಚ್ಚು ಚರ್ಚಿಸುವುದು ಸಮಂಜಸವಲ್ಲ. ರಾಜ್ಯದ ಜನರಿಗೆ ವ್ಯಕ್ತಿಗಳು ಮುಖ್ಯವಾಗುವುದೂ ಇಲ್ಲ. ಅದು ಯಾವ ಪಕ್ಷದ ಯಾವುದೇ ನಾಯಕರಿರಲಿ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿದರೆ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗಬೇಕು ಎಂಬುದು ಸ್ವಾಭಾವಿಕವಾಗಿ
ಜನಾಭಿಪ್ರಾಯವಾಗಿರುತ್ತದೆ.
ಆದರೆ, ಎಲ್ಲರ ಮೇಲೂ ಇಷ್ಟೊಂದು ಆಪಾದನೆಗಳು, ಸಂಶಯಗಳು ಇದ್ದರೂ, ಪರಸ್ಪರರ ಹಗರಣ- ಅವ್ಯವಹಾರ ಗಳ ಮಾಹಿತಿಯಿದ್ದರೂ, ಬಿಜೆಪಿ-ಕಾಂಗ್ರೆಸ್ -ಜೆಡಿಎಸ್ ನಾಯಕರುಗಳು ಇಷ್ಟು ದಿನದಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಂಡು, ತಮ್ಮ ಬುಡಕ್ಕೆ ಬರುವವರೆಗೆ ಆನಂದದಿಂದ ಸಂಸಾರ ಸಾಗಿಸುತ್ತಿದ್ದರಲ್ಲಾ ಎಂಬುದು ರಾಜ್ಯದ ಜನರಿಗೆ ಅಚ್ಚರಿಯುಂಟುಮಾಡಿದೆ. ಹಾಗಾದರೆ, ಇಲ್ಲಿಯವರೆಗೂ ಇವರೆಲ್ಲರೂ ಒಟ್ಟಾಗಿ ಕರ್ನಾಟಕವನ್ನು ದೋಚುವ ಯತ್ನದಲ್ಲಿದ್ದರೇ? ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತದೆ. ನಡೆದಿದೆ ಎನ್ನಲಾದ, ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳು ಬೆಳಕಿಗೆ ಬರುವವರೆಗೆ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆಯೆನ್ನಲಾದ ಹಗರಣಗಳ ಬಗ್ಗೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿಲ್ಲವೇಕೆ? ಎಂಬ ಪ್ರಶ್ನೆಗೆ ಸರಳ ಉತ್ತರವನ್ನು ರಾಜ್ಯದ ಜನರೇ ಕಂಡುಕೊಳ್ಳುತ್ತಿದ್ದಾರೆ.
ವಿವಿಧ ಪಕ್ಷಗಳಲ್ಲಿನ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಮಾಡಿಕೊಳ್ಳುವ ಇಂಥ ಅಪವಿತ್ರ ಹೊಂದಾ ಣಿಕೆಯ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ ಕರ್ನಾಟಕದ ಜನರು ಎನ್ನುವುದನ್ಜು ರಾಜಕಾರಣಿಗಳು ಅರಿಯುವುದೊಳಿತು. ಈಗ ನಡೆಯುತ್ತಿರುವಂತೆ ಒಳ ಒಪ್ಪಂದ ಮಾಡಿಕೊಳ್ಳದೆ, ಅನ್ಯ ಪಕ್ಷದವರ ಹಗರಣಗಳನ್ನೆಲ್ಲ ಬಯಲಿಗೆ ತಂದು, ಅವಕ್ಕೆ ತಾರ್ಕಿಕ ಅಂತ್ಯ ನೀಡಲಿ ಎಂಬುದು ಮಾತ್ರ ರಾಜ್ಯದ ಜನರ ಆಶಯವಾಗಿದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Vinayak B Amblihond Column: ಶಾಸ್ತ್ರ ಮತ್ತು ಶಿಷ್ಟಾಚಾರಗಳಲ್ಲಿ ಅಂತರವಿರುತ್ತದೆ