Sunday, 27th October 2024

Yagati Raghu Nadig Column: ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕ್ಕೊಂಡೇನೇ ಮೂರ್ಖ !

ರಸದೌತಣ

ಯಗಟಿ ರಘು ನಾಡಿಗ್

  • ಫಟಿಂಗನೊಬ್ಬನ ಕೊನೆಯ ಅಶ್ರಯತಾಣವೇ ರಾಜಕೀಯ ಕ್ಷೇತ್ರ ಎಂಬುದು ರಾಜಕಾರಣದ ಕುರಿತಾಗಿ ಕೇಳಿಬರುವ ಚರ್ವಿತ-ಚರ್ವಣ ವ್ಯಾಖ್ಯಾನ. ಇದನ್ನು ಹೇಳಿದ್ದು ಐರಿಷ್ ನಾಟಕಕಾರ, ವಿಮರ್ಶಕ ಹಾಗೂ ರಾಜಕೀಯ ಹೋರಾಟಗಾರ ಜಾರ್ಜ್ ಬರ್ನಾರ್ಡ್ ಷಾ. ರಾಜಕೀಯ ಕ್ಷೇತ್ರದ ಕುರಿತಾದ ಈ ಮಾತು ಕೊಂಚ ಕಠೋರವಾಗಿ ಕೇಳಿಸುವುದುಂಟು, ನಿಂದನಾತ್ಮಕ ಎನಿಸುವುದೂ ಉಂಟು. ಆದರೆ, ವರ್ತಮಾನದ ಕೆಲ ರಾಜಕಾರಣಿಗಳ ಒಂದಷ್ಟು ನವರಂಗಿ ಆಟಗಳನ್ನು ನೋಡಿದಾಗ, “ಆ ಮಹಾನುಭಾವ ಎಂಥಾ ದಿಟವಾದ
    ಮಾತು ಹೇಳಿದ್ದಾನಪ್ಪಾ” ಎಂದು ತಲೆದೂಗಲೇಬೇಕಾಗುತ್ತದೆ!
  • ರಾಜಕಾರಣದ ಕುರಿತಾದ ಮೇಲಿನ ವ್ಯಾಖ್ಯಾನವನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ.
    ಆದರೆ ಕೆಲ ರಾಜಕಾರಣಿಗಳು ದಶಕಗಳಿಂದ ಹೇಳಿಕೊಂಡು ಬಂದಿರುವ ಮಾತನ್ನೇ ನಂಬಿಕೊಂಡು ನಮ್ಮಂಥ ಜನಸಾಮಾನ್ಯರು ‘ಮಂಗ್ಯಾ’ ಆಗಿಬಿಟ್ಟಿದ್ದೇವಾ? ಅಥವಾ ಅವರು ನಮ್ಮನ್ನು ‘ಮಂಗ್ಯಾ’ ಮಾಡಿಬಿಟ್ಟಿದ್ದಾರಾ? ಎಂಬ ಸಂದೇಹ ಹಲವರಲ್ಲಿ ಇಣುಕುವುದುಂಟು. ಈ ಮಾತಿಗೆ ಪುಷ್ಟಿ ನೀಡುವಂಥ ನಿದರ್ಶನಗಳು ಸಾಕಷ್ಟಿವೆ. ‘ಪಕ್ಷದ ತತ್ವ-ಸಿದ್ಧಾಂತ’ ಎನ್ನುವ ತೀರಾ ಗಹನ ಸಂಗತಿಗಳ ತಂಟೆಗೆ ಹೋಗುವುದೇ ಬೇಡ, ಸರಳವಾಗಿರುವ ಕೆಲವನ್ನಷ್ಟೇ ಪರಿಗಣಿಸಿ ನೋಡೋಣ. ಕೆಲ ಪುಢಾರಿಗಳು ವೇದಿಕೆಯೇರಿದಾಗ, “ನಮ್ಮದು ನೂರಾರು ಎಕರೆ ತೆಂಗಿನ ತೋಟವಿದೆ, ದೇವರ ಕೃಪೆಯಿಂದ ಸಾಕಷ್ಟು ಆಸ್ತಿಯಿದೆ.
  • ನಾನು ಕೂತು ಉಂಡರೂ ಯಾರೂ ಕೇಳೋರಿಲ್ಲ. ಮನಸ್ಸು ಮಾಡಿದ್ದರೆ ಒಳ್ಳೇ ಕಂಪನಿಗೆ ಕೆಲಸಕ್ಕೆ ಸೇರಿ ಲಕ್ಷ ಲಕ್ಷ ದುಡೀತಿದ್ದೆ. ಆದರೆ ‘ಜನಸೇವೆ’ ಮಾಡಬೇಕೆಂಬ ಒಂದೇ ಉದ್ದೇಶದಿಂದ ರಾಜಕೀಯಕ್ಕೆ ಬಂದೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ” ಎಂದು ಒಂದೇ ಸಮನೆ ತೌಡು ಕುಟ್ಟುವುದುಂಟು. ಈ ಪಾಯಿಂಟನ್ನೇ ಪಟ್ಟಾಗಿ ಹಿಡಿದುಕೊಂಡರೆ, “ರಾಜಕೀಯ ಕ್ಷೇತ್ರವು ಒಂದು ವೃತ್ತಿಯೋ ಅಥವಾ ಸೇವೆಯೋ?” ಎಂಬ ಪ್ರಶ್ನೆ ಟಣ್ಣನೆ ಜಿಗಿಯುತ್ತದೆ. ಕೆಲವರು ಹೇಳಿಕೊಳ್ಳುವ ಹಾಗೆ ರಾಜಕೀಯವು ಸೇವೆಯೇ ಆಗಿದ್ದರೆ, ಅದು ಉಚಿತ ರೂಪದಲ್ಲಿ ಇರಬೇಕಲ್ಲವೇ? ಪುಢಾರಿಗಳು ತಾವು ಮಾಡುವ ‘ರಾಜಕೀಯ ಸೇವೆ’ಗೆಂದು ಬಂಗಲೆ, ಗೂಟದ ಕಾರು, ಆಳು-ಕಾಳು, ಸಂಬಳ-ಸಾರಿಗೆ, ತರಹೇವಾರಿ ಭತ್ಯೆಗಳು, ವಿದೇಶ ಪ್ರವಾಸದ ಅವಕಾಶ, ನಿಗದಿತ ಸೇವಾವಧಿ ಪೂರೈಸಿದರೆ ಪಿಂಚಣಿ ಇತ್ಯಾದಿ ‘ಭಾಗ್ಯ’ಗಳನ್ನು ಪಡೆಯುವುದೇಕೆ? (ಈ ಪ್ರಶ್ನೆಗೆ ಅವರು, “ಇವೆಲ್ಲಾ ಸೇವಾಶುಲ್ಕ ಕಣ್ರೀ” ಎಂದರೂ ಅಚ್ಚರಿಯಿಲ್ಲ!).
  • “ರಾಜಕೀಯವೆಂದರೆ ಸೇವೆ ಎಂದು ಒಂದೊಮ್ಮೆ ಹೇಳಿಬಿಟ್ಟರೆ ಮಾತಿನಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತೆ,
    ಆದ್ದರಿಂದ ಇದನ್ನೊಂದು ವೃತ್ತಿ ಎಂದುಬಿಡೋಣ” ಎಂದು ಕೆಲ ವಿತಂಡವಾದಿ ಪುಢಾರಿಗಳು ರೂಟು ಬದಲಿಸಬಹುದು. ಆಗಲೂ ಪ್ರಶ್ನೆ ತಪ್ಪಿದ್ದಲ್ಲ. ರಾಜಕೀಯವು ಇವರು ಹೇಳಿದಂತೆ ವೃತ್ತಿಯೇ ಎಂದಾದಲ್ಲಿ, ಆ ವೃತ್ತಿಯೊಳಗೆ ತೂರಿಕೊಳ್ಳಲು ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಒಂದಷ್ಟು ಅರ್ಹತೆ-ಯೋಗ್ಯತೆಗಳು ಇರಬೇಕಲ್ಲವೇ? ಸರಕಾರಿ ಕಚೇರಿಯಲ್ಲಿ ಕೆಳಹಂತದ ನೌಕರನಾಗಿ ಸೇರಿಕೊಳ್ಳುವುದಕ್ಕೂ ನಿಗದಿತ ವಿದ್ಯಾರ್ಹತೆಯಿದೆ. ಕೆಲವು ಹುದ್ದೆಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ ಇತ್ಯಾದಿ
    ಗಳಿರುತ್ತವೆ, ಸೇವಾವಽಯ ನಂತರ ‘ವೃತ್ತಿಯಿಂದ ನಿವೃತ್ತಿ’ ಎಂಬುದಿರುತ್ತದೆ. ಆದರೆ ಕೆಲ ಪುಢಾರಿಗಳು ಈ ಯಾವ ಹಂತವನ್ನೂ ಹಾದುಹೋಗುವುದಿಲ್ಲ ಅಥವಾ ಪುಢಾರಿಯಾಗುವುದಕ್ಕೆ ಇಂಥ ಯಾವ ಷರತ್ತು-ನಿಬಂಧನೆಗಳೂ ಇಲ್ಲ.
  • ಜತೆಗೆ ಅವರು ನಿವೃತ್ತಿಗೆ ಅತೀತರು! ಹೀಗಿರುವಾಗ ರಾಜಕೀಯವನ್ನು ‘ವೃತ್ತಿ’ ಎಂದು ಕರೆಯಲಾದೀತೇ?
    ಹುಡುಕುತ್ತ ಹೋದರೆ ಈ ಥರದ ದ್ವಂದ್ವಗಳು ಸಾಕಷ್ಟು ಸಿಗುತ್ತವೆ. ಹೀಗಾಗಿ, “ರಾಜಕೀಯವೆಂದರೆ ಸೇವೆಯೂ
    ಅಲ್ಲದ, ವೃತ್ತಿಯೂ ಅಲ್ಲದ ಒಂದು ತ್ರಿಶಂಕು ಸ್ವರ್ಗ” ಎಂಬ ತೀರ್ಮಾನಕ್ಕೆ ಕೆಲವರು ಬಂದರೆ ಅದೇನೂ
    ಅಚ್ಚರಿಯಲ್ಲ. ಆದರೆ, ಇಂಥ ‘ತ್ರಿಶಂಕು ಸ್ವರ್ಗ’ವನ್ನು ಸೃಷ್ಟಿಸಿದ ‘ವಿಶ್ವಾಮಿತ್ರ’ರು ಯಾರು? ಎಂಬುದು
    ಮಿಲಿಯನ್ ಡಾಲರ್ ಪ್ರಶ್ನೆ!!
  • ಇನ್ನು, ಒಮ್ಮೆ ಜನಪ್ರತಿನಿಧಿಯಾಗಿಬಿಟ್ಟರೆ ಅಂಥ ಪುಣ್ಯ ಪುರುಷರಿಗೆ (ಕೆಲವೊಮ್ಮೆ ‘ಪುಣ್ಯಸ್ತ್ರೀ’ಯರಿಗೆ!)
    ಸಂಬಳ-ಸಾರಿಗೆ ಸೇರಿದಂತೆ ಸಿಗುವ ಹತ್ತು ಹಲವು ಭತ್ಯೆಗಳು ಮತ್ತು ಸೌಲಭ್ಯಗಳ ವಿವರವನ್ನು ಪ್ರೊಜೆಕ್ಟರ್‌ಗೆ
    ಉಣಿಸಿದರೆ ಬಿಂಬಿತವಾಗುವುದೇ ಒಂದು ಭರ್ಜರಿ ಸಿನಿಮಾಸ್ಕೋಪ್ ಮತ್ತು ಈಸ್ಟ್‌ಮನ್ ಕಲರ್ ‘ರಾಜಕೀಯ
    ಚಿತ್ರಾನ್ನ’! ಅದರಿಂದ ಒಂದು ಅಗುಳನ್ನಷ್ಟೇ ಹೆಕ್ಕಿ ಹಿಸುಕಿ ನೋಡೋಣ. ಪ್ರತಿಯೊಬ್ಬ ಜನಪ್ರತಿನಿಽಗೂ ದೂರವಾಣಿ ಕರೆಗಳಿಗೆಂದೇ ಗಣನೀಯ ಮೊತ್ತವನ್ನು ನೀಡಲಾಗುತ್ತದೆ.
  • ಈಗಂತೂ ಮೊಬೈಲ್ ಫೋನಿಲ್ಲದ ವ್ಯಕ್ತಿಗಳಿಲ್ಲ, ಅವು ಪ್ರವೇಶಿಸದ ಜಾಗಗಳಿಲ್ಲ. ತಿಂಗಳಿಗೊಮ್ಮೆ ೩೫೦-೪೦೦
    ರುಪಾಯಿ ಕೊಟ್ಟು ರೀಚಾರ್ಜ್ ಮಾಡಿಸಿಬಿಟ್ಟರೆ, ತಿಂಗಳು ಪೂರ್ತಿ ‘ಅನ್‌ಲಿಮಿಟೆಡ್’ ಮಾತಾಡುವ ಸೌಲಭ್ಯವನ್ನು ಮೊಬೈಲ್ ಸೇವಾ ಕಂಪನಿಗಳು ಒದಗಿಸಿಬಿಟ್ಟಿವೆ. ಹೀಗೆ ೪೦೦ ರುಪಾಯಿಯೊಳಗೆ ಆಗಿಹೋಗುವ ಕೆಲಸಕ್ಕೆ ಜನಪ್ರತಿನಿಧಿಗಳಿಗೆ ಸಾವಿರಾರು ರುಪಾಯಿ ಭತ್ಯೆಯನ್ನೇಕೆ ಕೊಡಬೇಕು ಎಂಬುದು ‘ಬಡ ಬೋರೇಗೌಡ’ನ ಪ್ರಶ್ನೆ!
  • ಇನ್ನು, ಏನೋ ಒಂದು ನವರಂಗಿ ನಾಟಕವಾಡಿ ಜನಪ್ರತಿನಿಧಿ ಎನಿಸಿಕೊಂಡುಬಿಡುವ ಕೆಲವರು, ತಮಗಿರುವ ಹೊಣೆಗಾರಿಕೆಯ ನಿಭಾವಣೆಗೆ ತಕ್ಕಂಥ ವಿದ್ಯಾರ್ಹತೆ, ಕಾರ್ಯದಕ್ಷತೆ, ವಿಷಯಜ್ಞಾನ ಇತ್ಯಾದಿಯನ್ನು
    ಹೊಂದಿದ್ದಾರೆಯೇ? ಅವರದ್ದು ಅಪರಾಽಕ ಹಿನ್ನೆಲೆಯೇ? ಎಂದೆಲ್ಲಾ ಜಾಲಾಡುತ್ತಾ ಹೋದರೆ, ಅಂಥ ವ್ಯರ್ಥ
    ಕಸರತ್ತಿಗೆ ಇಳಿದವರು ನಿಜಕ್ಕೂ ನಿಬ್ಬೆರಗಾಗಬೇಕಾಗುತ್ತದೆ.
  • ಸಂಖ್ಯಾಬಲವೇ ಮುಖ್ಯವಾಗಿರುವ ನಮ್ಮ ಆಳುಗ ವ್ಯವಸ್ಥೆಯಲ್ಲಿ ಇಂಥ ಕೆಲವೊಂದು ‘ರಾಜಿ-ಹೊಂ
    ದಾಣಿಕೆ’ಗಳೂ ಅನಿವಾರ್ಯ ಎಂಬ ನಿಲುವನ್ನು ಮನಸ್ಸಿಲ್ಲದೆ ತಳೆಯಬೇಕಾಗುತ್ತದೆ. ಇದನ್ನು ಹೆಚ್ಚು
    ವಿವರಿಸುವ ಅಗತ್ಯವಿಲ್ಲ, ಕೆಲ ಪುಢಾರಿಗಳ ನಿತ್ಯನಾಟಕ, ಆಟಾಟೋಪಗಳನ್ನು ನೋಡುವ ಜನರಿಗೆ ಈ ಬಗ್ಗೆ ಸಾಕಷ್ಟು ಗೊತ್ತಿದೆ.
  • ಆದರೂ, ಅದನ್ನು ಸೂಚ್ಯವಾಗಿ ಹೇಳುವ ಒಂದು ಲಘು ಪ್ರಸಂಗವಿಲ್ಲಿದೆ ನೋಡಿ: ಕಚ್ಚೆ ಪಂಚೆ, ಬಿಳೀಜುಬ್ಬಾ, ಗಾಂಧಿ ಟೋಪಿ, ದಪ್ಪ ಮಸೂರದ ಕನ್ನಡಕ ಧರಿಸಿದ್ದ ವಯೋವೃದ್ಧರೊಬ್ಬರು ವಾಹನ ದಟ್ಟಣೆಯಿದ್ದ ಮಹಾನಗರಿಯ ರಸ್ತೆಯೊಂದನ್ನು ದಾಟುವ ಹರಸಾಹಸದಲ್ಲಿದ್ದರು. ಟ್ರಾಫಿಕ್ ಪೊಲೀಸ್ ಆಗಲೀ, ನಿಯಂತ್ರಕ ದೀಪಗಳಾಗಲೀ ಇಲ್ಲದ ಕಾರಣ ಅವರು ರಸ್ತೆ ದಾಟಲು ಭಾರಿ ಕಷ್ಟಪಡುತ್ತಿದ್ದರು.
  • ನೋಡ ನೋಡುತ್ತಿದ್ದಂತೆಯೇ, ವೇಗವಾಗಿ ಸಾಗಿಬಂದ ಗೂಟದ ಕಾರೊಂದು ಅವರ ಪಕ್ಕದಲ್ಲೇ ನಿಂತಿತು. ತೆಲುಗು ನಟ ಚಿರಂಜೀವಿಯವರ ಚಿತ್ರಗಳಲ್ಲಿರುವಂತೆ ಕಾರಿನ ಬಾಗಿಲು ‘ಝರಕ್’ ಎಂದು ತೆರೆದುಕೊಂಡಿತು. ಖಾದಿವಸದೊಳಗೆ ತಮ್ಮ ಗಜದೇಹವನ್ನು ತೂರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಾಂಬೂಲ ಮೆದ್ದು ಕೆಂಪಗಾಗಿದ್ದ ಹಲ್ಲುಬೀರುತ್ತಾ, ಹಿಂದಿನ ರಾತ್ರಿಯ ‘ಹ್ಯಾಂಗೋವರ್’ನಲ್ಲಿದ್ದ ಕೆಂಗಣ್ಣುಗಳನ್ನು
    ಕಷ್ಟಪಟ್ಟು ಅಗಲಿಸಿಕೊಂಡು ಕಾರಿನಿಂದ ಕೆಳಗಿಳಿದು ಆ ವಯೋವೃದ್ಧರಿಗೆ “ನಮಸ್ಕಾರ ಸಾ…” ಎಂದರು.
    ಕಾರಣ, ಆ ವಯೋವೃದ್ಧರು ನಿವೃತ್ತಿಯ ಅಂಚಿನಲ್ಲಿದ್ದ ಶಿಕ್ಷಕರು. ತಬ್ಬಿಬ್ಬಾದ ಶಿಕ್ಷಕರು “ನಮಸ್ಕಾರ, ನಮಸ್ಕಾರ” ಎಂದಷ್ಟೇ ಹೇಳಿ ಸುಮ್ಮನೇ ನಿಂತುಬಿಟ್ಟರು.
  • ಗೂಟದ ಕಾರಿನ ವ್ಯಕ್ತಿ, “ನಮಸ್ಕಾರ ಸಾ… ನಾನು ಒಂದ್ ಕಾಲದಾಗೆ ನಿಮ್ ಸಿಸ್ಯ ಆಗಿದ್ದೋನು. ಅಕ್ಸರ,
    ಕಾಗುಣ್ತ ನೆಟ್ಟಗೆ ಬರಿಯಾಕ್ಕೆ ಬರಲ್ಲ ಅಂತಂದು ನೀವು ನಂಗೆ ರೂಲ್‌ದೊಣ್ಣೇಲಿ ಶಾನೆ ಹೊಡೀತಿದ್ರಿ. ಪುಣ್ಯಾತ್ಮರಾದ ನಿಮ್ ಕೈ ಏಟು ತಿಂದಿದ್ದಕ್ಕೋ ಏನೋ, ನೋಡಿ ಈಗ ಸೊಗಸಾಗೇ ಬದುಕು ಸಾಗಿಸ್ತಿವ್ನಿ…” ಅಂದರು. ಅದಕ್ಕೆ ಶಿಕ್ಷಕರು, “ಹೌದೇನಪ್ಪಾ ಸಂತೋಷ. ಈ ಉರಿಬಿಸಿಲಿನ ಝಳಕ್ಕೆ ನನ್ನ ಕಣ್ಣು ಸ್ವಲ್ಪ ಮಂಜಾಯ್ತು, ಹಾಗಾಗಿ ಗೊತ್ತಾಗ್ಲಿಲ್ಲ. ಅಂದ್ಹಾಗೆ ಏನು ಕೆಲಸ ಮಾಡ್ಕೊಂಡಿದ್ದೀಯಪ್ಪಾ?” ಎಂದು ಕೇಳಿದರು.
  • ಅದಕ್ಕೆ ಆ ಖಾದಿಧಾರಿ, “ಏನ್ ಸಾ, ಇಂಗೆ ಕೇಳಿಬುಟ್ರಿ? ನಾನು ಈ ರಾಜ್ಯದ ಎಜುಕೇಸನ್ ಮಿನಿಟ್ರು ಸಾ” ಎಂದರು. ಶಿಕ್ಷಕರಿಗೆ ಲಘುವಾಗಿ ಹೃದಯಾಘಾತವಾದಂತಾಯ್ತು!
  • ಎದೆಯನ್ನು ಎಡಗೈಯಲ್ಲಿ ಅವುಚಿ ಹಿಡಿದುಕೊಂಡೇ, “ಹೌದೇ? ಒಂದು ಉಪಕಾರ ಮಾಡ್ತೀಯಾಪ್ಪಾ?”
    ಎಂದು ಕೇಳಿದರು. ಆಗ ಆ ಪುಢಾರಿ, “ಯೋಳಿ ಸಾ…” ಎಂದರು. ಆಗ ಶಿಕ್ಷಕರು “ನಾನು ಶಾಲೆಯಲ್ಲಿ ನಿನಗೆ
    ಮೇಷ್ಟ್ರಾಗಿದ್ದೆ ಅಂತ ದಯವಿಟ್ಟು ಯಾರ ಹತ್ರಾನೂ ಹೇಳಬೇಡಪ್ಪಾ…” ಎಂದು ಹೇಳಿ ಶಿಷ್ಯನಿಗೆ ಕೈಮುಗಿದರು!
  • ಆ ಪುಢಾರಿಗೆ ಏನು ಹೇಳಬೇಕೆಂದು ತೋಚದೆ ಕೊನೆಗೆ ಏನೋ ಒಂದು ಮಾತಾಡಬೇಕೆಂಬ ಉಮೇದಿನಲ್ಲಿ, “ಅಂದಂಗೆ, ನೀವೀಗ ಎಲ್ಲಿ ಕೆಲಸ ಮಾಡ್ತಾ ಇವ್ರಿ ಸಾ?” ಎಂದು ಕೇಳಿದರು. ಅದಕ್ಕೆ ಶಿಕ್ಷಕರು, “ಈಗಲೂ ನಾಲ್ಕನೇ ಕ್ಲಾಸಿನ ಮಕ್ಕಳಿಗೆ ಪಾಠ ಹೇಳಿಕೊಡ್ತಿದ್ದೀನಿ ಕಣಪ್ಪಾ” ಎಂದರು ವಿನಮ್ರರಾಗಿ. ಈ ಮಾತು ಕೇಳಿ ವಜ್ರಮುನಿ ಶೈಲಿಯಲ್ಲಿ ಗಹಗಹಿಸಿ ನಕ್ಕ ಆ ಪುಢಾರಿ, “ಏನ್ ಸಾ…? ನಾನು ೭ನೇ ಕ್ಲಾಸಿನಾಗೆ ಪೇಲು, ಆದರೆ ಈ ರಾಜ್ಯದ ಎಜುಕೇಸನ್ ಮಿನಿಟ್ರು ಆಗಿವ್ನಿ; ನೀವು ಇದ್ಯಾವಂತ್ರು, ಇನ್ನೂ ೪ನೇ ಕ್ಲಾಸಿನಾಗೇ ಪಾಟ ಯೋಳ್ತಾ ಇದ್ದೀರಾ? ಇಂಗಾದ್ರೆ ಜೀವನದಾಗೆ ಮುಂದೆ ಬರೋದು ಯಾವಾಗ ಸಾ…?” ಎಂದು ಹೇಳಿ ಕಾರನ್ನೇರಿ ‘ಭರ್ರನೆ’
    ಹೊರಟುಹೋದರು. ಆ ಕಾರು ಉಗುಳಿದ ಪೆಟ್ರೋಲ್ ಹೊಗೆ, ಚಕ್ರಗಳು ತೂರಿದ ಧೂಳನ್ನು ಸೇವಿಸಿ ಶಿಕ್ಷಕರು
    ಕೆಮ್ಮಲಾರಂಭಿಸಿದರು!!

ರಾಜಕಾರಣಿಗಳನ್ನು ಸಾರಾಸಗಟಾಗಿ ದೂರುವುದು ಈ ಬರಹದ ಉದ್ದೇಶವಲ್ಲ. ಕೆಲವು ಪ್ರಾತಃಸ್ಮರಣೀಯರೂ ಈ
ಕ್ಷೇತ್ರದಲ್ಲಿ ಆಗಿಹೋಗಿದ್ದಾರೆ. ‘ಮಲೆನಾಡಿನ ಗಾಂಧಿ’ ಎಂದೇ ಹೆಸರಾಗಿದ್ದ ಎಚ್.ಜಿ. ಗೋವಿಂದೇಗೌಡರು, ತಮ್ಮ
‘ಸಮಾಜವಾದಿ’ ಚಿಂತನೆಗಳ ಮೂಲಕ ಜನಮನ ಗೆದ್ದ ಶಾಂತವೇರಿ ಗೋಪಾಲಗೌಡರು, ರಾಜ್ಯದ ಹಳ್ಳಿಹಳ್ಳಿಗಳಲ್ಲಿ
ಬೋರ್‌ವೆಲ್ ಕೊರೆಸಿ ಗ್ರಾಮಸ್ಥರ ನೀರಿನ ದಾಹ ತಣಿಸಿ ‘ನೀರ್ ಸಾಬ್’ ಎಂದೇ ಖ್ಯಾತರಾದ ಅಬ್ದುಲ್ ನಜೀರ್
ಸಾಬ್, ಸರಳತೆ ಮತ್ತು ದಕ್ಷತೆಗಳ ಪ್ರತೀಕವಾಗಿದ್ದ ಜಾರ್ಜ್ ಫೆರ್ನಾಂಡಿಸ್ ಮುಂತಾದ ಮುತ್ಸದ್ದಿಗಳಿಗೆ ಜನ್ಮನೀಡಿದ
ನಾಡು ನಮ್ಮ ಕರ್ನಾಟಕ. ಇಂಥವರ ಪರಂಪರೆ ಇಷ್ಟಕ್ಕೇ ನಿಲ್ಲಬೇಕೇ? ‘ಇವ ನಮ್ಮವ, ಇವ ನಮ್ಮವ’ ಎಂದು
ಕನ್ನಡಿಗರು ಹೆಮ್ಮೆಯಿಂದ ಎದೆತಟ್ಟಿಕೊಂಡು ಹಳಿಕೊಳ್ಳುವಂಥ ಧೀಮಂತ ರಾಜಕಾರಣಿ ಜನಸಾಗರದೊಳಗಿಂದ ಉದ್ಭವಿಸೋದು ಯಾವಾಗ…?