Wednesday, 23rd October 2024

Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ

Narendra Modi

ವಿಯೆಂಟಿಯಾನ್: ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ನಡೆದ ಆಸಿಯಾನ್‌-ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಶೃಂಗಸಭೆ (East Asia Summit)ಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಜಾಗತಿಕವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಯುರೇಷಿಯಾ ಅಥವಾ ಪಶ್ಚಿಮ ಏಷ್ಯಾವಾಗಿರಲಿ ಶಾಂತಿ ಮತ್ತು ಸ್ಥಿರತೆಯನ್ನು ಆದಷ್ಟು ಬೇಗ ಪುನಃಸ್ಥಾಪಿಸಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆಸಿಯಾನ್ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಬಲಪಡಿಸಲು ಲಾವೋಸ್‌ನಲ್ಲಿ ನಡೆದ ಆಸಿಯಾನ್-ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಶೃಂಗಸಭೆಗಳಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ರಾಜತಾಂತ್ರಿಕತೆ ಮತ್ತು ಶಾಂತಿಯುತ ಮಾತುಕತೆಗಳು ಭಿನ್ನಾಭಿಪ್ರಾಯವನ್ನು ಬಗೆಹರಿಸುವ ಏಕೈಕ ಮಾರ್ಗವಾಗಿದೆ ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. “ನಾನು ಬುದ್ಧನ ಭೂಮಿಯಿಂದ ಬಂದಿದ್ದೇನೆ. ಮತ್ತು ಇದು ಯುದ್ಧದ ಯುಗವಲ್ಲ ಎಂದು ನಾನು ಪದೇ ಪದೆ ಹೇಳಿದ್ದೇನೆ. ಸಮಸ್ಯೆಗಳಿಗೆ ಪರಿಹಾರಗಳು ಯುದ್ಧಭೂಮಿಯಿಂದ ಬರಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.

ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ. “ಮಾನವೀಯ ದೃಷ್ಟಿಕೋನವನ್ನು ಇಟ್ಟುಕೊಂಡು, ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡಬೇಕಾಗಿದೆ. ಭಾರತವು ಈ ದಿಕ್ಕಿನಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ” ಎಂದು ಅವರು ಭರವಸೆ ನೀಡಿದ್ದಾರೆ.

ಜಾಗತಿಕ ಶಾಂತಿಗೆ ಭಯೋತ್ಪಾದನೆಯೇ ಸವಾಲು

ಇದೇ ವೇಳೆ ಪ್ರದಾನಿ ಮೋಡಿ ಅವರು ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ. ಜಾಗತಿಕ ಶಾಂತಿಗೆ ಉಗ್ರವಾದ ತೊಡಕಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ. ʼʼಜಾಗತಿಕ ಶಾಂತಿ ಮತ್ತು ಸುರಕ್ಷತೆಗೆ ಭಯೋತ್ಪಾದನೆ ತೊಡಕಾಗಿದೆ. ಇದನ್ನು ಎದುರಿಸಲು ಮಾನವೀಯತೆಯಲ್ಲಿ ನಂಬಿಕೆ ಇರಿಸಬೇಕಾಗಿದೆ. ಸೈಬರ್, ಕಡಲು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಬೇಕಾಗಿದೆ” ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಆಸಿಯಾನ್ ವಲಯದ ದೇಶಗಳೊಂದಿಗೆ ಬಹುಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಭಾರತ ಕೈಗೊಂಡ ಇತರ ಉಪಕ್ರಮಗಳನ್ನೂ ಮೋದಿ ವಿವರಿಸಿದ್ದಾರೆ. “ಕಳೆದ 10 ವರ್ಷಗಳಲ್ಲಿ ಆಸಿಯಾನ್ ಪ್ರದೇಶದೊಂದಿಗಿನ ನಮ್ಮ ವ್ಯಾಪಾರವು ಸುಮಾರು 130 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಂಡಿದೆ. ಇಂದು ಭಾರತವು 7 ಆಸಿಯಾನ್ ದೇಶಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump : ಮೋದಿ ತುಂಬಾ ಒಳ್ಳೆಯವರು ಆದರೆ ಭಾರತದ ತಂಟೆಗೆ ಹೋದರೆ ಬಿಡುವುದಿಲ್ಲ ಎಂದ ಡೊನಾಲ್ಡ್‌ ಟ್ರಂಪ್‌

ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ 2 ದಿನಗಳ ಭೇಟಿಗಾಗಿ ಗುರುವಾರ ಲಾವೋಸ್‌ಗೆ ತೆರಳಿದ್ದಾರೆ.1967ರಲ್ಲಿ ಸ್ಥಾಪಿಸಲಾದ ಆಸಿಯಾನ್‌ನ ಅಧ್ಯಕ್ಷ ಸ್ಥಾನವನ್ನು ಪ್ರಸ್ತುತ ಲಾವೋಸ್ ವಹಿಸಿಕೊಂಡಿದ್ದು, ಪ್ರಧಾನಿ ಸೋನೆಕ್ಸೇ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ಮೋದಿ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಲಾವೋ ಪಿಡಿಆರ್ ಗೃಹ ಸಚಿವ ವಿಲಾವಾಂಗ್ ಬೌಧಖಾಮ್ ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಬಳಿಕ ಮೋದಿ ಅವರು ಉಭಯ ದೇಶಗಳ ನಡುವಿನ ಪಾರಂಪರಿಕ ಮತ್ತು ನಾಗರಿಕ ಬಾಂದವ್ಯದ ಪ್ರತೀಕವಾದ ರಾಮಾಯಣದ ಲಾವೊಂಟಿಯಾನ್‌ ಆವೃತ್ತಿಯನ್ನು ವೀಕ್ಷಿಸಿದ್ದಾರೆ.