Friday, 1st November 2024

Martin Kannada Movie: ಬಹುನಿರೀಕ್ಷಿತ ಮಾರ್ಟಿನ್‌ ಚಿತ್ರ ತೆರೆಗೆ, ಚಿತ್ರಮಂದಿರಗಳ ಮುಂದೆ ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ

martin kannada movie

ಬೆಂಗಳೂರು: ಇಂದು ಧ್ರುವ ಸರ್ಜಾ (Dhruva Sarja) ಅಭಿನಯದ ಮಾರ್ಟಿನ್‌ (Martin Kannada Movie) ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಆಯುಧ ಪೂಜೆಯಂದೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ (Martin Movie) ಕರ್ನಾಟಕ ಸೇರಿದಂತೆ ವಿಶ್ವಾದ್ಯಂತ ರಿಲೀಸ್ ಆಗಿದ್ದು, ಧ್ರುವ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ರಾಜಧಾನಿಯ ನರ್ತಕಿ ಥಿಯೇಟರ್‌ನಲ್ಲಿ ಧ್ರುವ ಸರ್ಜಾ ಬೆಳಗ್ಗೆಯೇ ಅಭಿಮಾನಿಗಳ ಜೊತೆಗೆ ಸಿನೆಮಾ ವೀಕ್ಷಿಸಿ, ಫ್ಯಾನ್ಸ್‌ ಭೇಟಿಯಾದರು.

ಗುರುವಾರವೇ ಬಹಳಷ್ಟು ಕಡೆ ಪೇಯ್ಡ್‌ ಪ್ರೀಮಿಯರ್‌ ಏರ್ಪಡಿಸಲಾಗಿತ್ತು. ತೆಲುಗು ಸಿನಿ ಪ್ರೇಕ್ಷಕರು ಮಾರ್ಟಿನ್‌ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮಾರ್ಟಿನ್‌ ಸಿನಿಮಾ ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಲಿದೆ. 1000 ಕೋಟಿ ರೂ. ಕ್ಲಬ್‌ ಸೇರೋದು ಪಕ್ಕಾ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನೆರೆ ರಾಜ್ಯದಲ್ಲಿ ತಮ್ಮ ಚಿತ್ರಕ್ಕೆ ದೊರೆತ ಪ್ರತಿಕ್ರಿಯೆ ಕಂಡು ಧ್ರುವ ಸರ್ಜಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ಮನೆಯಲ್ಲಿ ಆಯುಧ ಪೂಜೆ ಮುಗಿಸಿ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಧ್ರುವ ಸರ್ಜಾ ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಥಿಯೇಟರ್‌ ಮುಂದೆ ಧ್ರುವ ಸರ್ಜಾ ಕಟೌಟ್‌, ಬಂಟಿಂಗ್ಸ್‌ ಹಾಕಲಾಗಿತ್ತು. ವಾಹವೊಂದರ ಮೇಲೆ ಹತ್ತಿ, ಒಂದೆರಡು ಸ್ಟೆಪ್ಸ್‌ ಹಾಕಿದ ಧ್ರುವ ಫ್ಯಾನ್ಸ್‌ನತ್ತ ಕೈ ಬೀಸಿದರು. ಈ ಸಮಯದಲ್ಲಿ ಅಭಿಮಾನಿಗಳು ಧ್ರುವ ಮೇಲೆ ಹೂವಿನ ಮಳೆ ಸುರಿಸಿದರು. ಅಭಿಮಾನಿಗಳ ಪ್ರೀತಿಗೆ ಧ್ರುವ ಸರ್ಜಾ ಕೈ ಮುಗಿದು ಧನ್ಯವಾದ ಅರ್ಪಿಸಿದರು. ಥಿಯೇಟರ್‌ಗೆ ಹೊರಡುವ ಮುನ್ನ ಧ್ರುವ ಸರ್ಜಾ ಮನೆ ಬಳಿ ಬಂದ ಗೋವಿನ ಪೂಜೆ ಮಾಡಿದರು. ನಂತರ ಜಯನಗರದ ಗಣೇಶ ದೇವಸ್ಥಾನ, ಶಾಸ್ತ್ರಿ ನಗರದ ಉಮಾ ಮಹೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ‌

ಮಾರ್ಟಿನ್ ಸಿನಿಮಾ 13 ಭಾಷೆಯಲ್ಲಿ ಹಾಗೂ 3000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರ್ನಾಟಕದಲ್ಲಿ 350 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮಾರ್ಟಿನ್ ರಾರಾಜಿಸಲಿದ್ದು, ಬೆಳಗ್ಗೆ 10 ಗಂಟೆಯಿಂದ ಎಲ್ಲಾ ಕಡೆ ಮಾರ್ಟಿನ್ ಪ್ರದರ್ಶನ ಅರಂಭ ಆಗಿದೆ. ಮಾರ್ಟಿನ್ ಸಿನಿಮಾದ ಬಜೆಟ್‌ ದೊಡ್ಡಮಟ್ಟದಲ್ಲಿದ್ದು, ಬಹು ಕೋಟಿ ಬಜೆಟ್‌ನ ಈ ಚಿತ್ರವನ್ನ 240 ದಿನ ಚಿತ್ರೀಕರಣ ಮಾಡಿದ್ದಾರೆ. ಸಾಹಸ ದೃಶ್ಯಗಳು ಹೆಚ್ಚು ಇವೆ. ರವಿ ವರ್ಮ ಮತ್ತು ರಾಮ ಲಕ್ಷ್ಮಣ ಫೈಟ್ ಮಾಸ್ಟರ್ ಈ ಚಿತ್ರಕ್ಕೆ ಫೈಟ್ಸ್ ಕಂಪೋಸ್ ಮಾಡಿದ್ದಾರೆ.

ಈ ಚಿತ್ರದಲ್ಲಿ ದೇಶಭಕ್ತಿ ಇದೆ, ಇದರಲ್ಲಿ ಗ್ಯಾಂಗ್‌ಸ್ಟರ್ ಕಥೆ ಕೂಡ ಇದೆ, ಈ ಚಿತ್ರ ತುಂಬಾನೆ ಸ್ಪೆಷಲ್ ಆಗಿದೆ ಎಂಬುದು ಡೈರೆಕ್ಟರ್ ಎ.ಪಿ.ಅರ್ಜುನ್ ಮಾತು. ಇದಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. ಉತ್ತರ ಭಾರತದಲ್ಲಿ ಮಾರ್ಟಿನ್​ ಹಿಂದಿ ವರ್ಷನ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ ಎಂದು ವರದಿಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಸಾವಿರ ಸ್ಕ್ರೀನ್​ಗಳಲ್ಲಿ ಮಾರ್ಟಿನ್ ಆಟ ಶುರುವಾಗಲಿದೆ.

ಬಹುಜನ ನಿರೀಕ್ಷಿಸಿದಂತೆ ಮಾರ್ಟಿನ್ ಚಿತ್ರದಲ್ಲಿ ಹೀರೋ ಹೆಸರು ಮಾರ್ಟಿನ್ ಅಲ್ಲ. ಅರ್ಜುನ್ ಸಕ್ಸೇನಾ ಎಂಬುದು ಹೀರೋ ಹೆಸರು. ಗಜಿನಿ ಚಿತ್ರದಲ್ಲಿ ಹೀರೋ ಹೆಸರು ಕೂಡ ಗಜಿನಿ ಆಗಿರಲಿಲ್ಲ. ಬದಲಾಗಿ ಅದು ವಿಲನ್ ಹೆಸರಾಗಿತ್ತು. ಆ ರೀತಿಯೇ ಇಲ್ಲೂ ಇರಬಹುದು ಎಂಬ ಅರ್ಥದಲ್ಲಿ ಧ್ರುವ ಸರ್ಜಾ ಹೇಳಿಕೊಂಡಿದ್ದರು. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಂದ್ಮೇಲೆ ಯಾವುದೇ ಚಿತ್ರ ಬಂದಿರಲಿಲ್ಲ. ಹಾಗಾಗಿಯೇ ನಿರೀಕ್ಷೆ ಜಾಸ್ತಿ ಇದೆ. ಜೊತೆಗೆ ಮಾರ್ಟಿನ್ ಯಾರು ಅನ್ನೋ ಕುತೂಹಲ ಕೂಡ ಇದೆ.

ಇದನ್ನೂ ಓದಿ: Martin Movie: ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ʼಮಾರ್ಟಿನ್ʼ ಚಿತ್ರ ಬಿಡುಗಡೆಗೆ ಡೇಟ್‌ ಫಿಕ್ಸ್‌!