Friday, 22nd November 2024

Noel Tata : ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್‌ ಟಾಟಾ ನೇಮಕ

Noel Tata

ಬೆಂಗಳೂರು: ಟಾಟಾ ಗ್ರೂಪ್‌ನ ಸಮಾಜಸೇವಾ ವಿಭಾಗವಾಗಿರುವ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ (Noel Tata) ಅವರನ್ನು ಅಕ್ಟೋಬರ್ 11ರಂದು ನೇಮಿಸಲಾಗಿದೆ . ಮುಂಬೈನಲ್ಲಿ ನಡೆದ ಸಭೆಯ ಬಳಿಕ ಸರ್ವಾನುಮತದ ನಿರ್ಧಾರ ಕೈಗೊಂಡು ಅವರನ್ನು ನೇಮಕ ಮಾಡಲಾಗಿದೆ. ರತನ್ ಟಾಟಾ ಮದುವೆಯಾಗಲಿಲ್ಲ, ಮಕ್ಕಳಿರಲಿಲ್ಲ. ಜತೆಗೆ ಟ್ರಸ್ಟ್‌ಗೆ ಮುಂದಿನ ಅಧ್ಯಕ್ಷರು ಯಾರು ಎಂಬುದನ್ನೂ ಘೋಷಿಸಿರಲಿಲ್ಲ. 150 ವರ್ಷಗಳಿಗಿಂತಲೂ ಹಳೆಯದಾದ ಟಾಟಾ ಬ್ರಾಂಡ್ ನ ವಿವಿಧ ಸಂಸ್ಥೆಗಳ ಹೋಲ್ಡಿಂಗ್ ಕಂಪನಿಯಾಗಿರುವ ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್ಸ್ 66% ಪಾಲು ಹೊಂದಿರುವುದರಿಂದ ನೋಯೆಲ್ ನೇಮಕ ಮಹತ್ವದ್ದು.

ರತನ್ ಟಾಟಾ ಅವರ ನೀತಿಯನ್ನೇ ಅನುಸರಿಸಿ ನೋಯೆಲ್ ಟಾಟಾ ಅವರನ್ನು ಇಂದು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಸ್ಥೆಯ ಕಾರ್ಪೊರೇಟ್ ವಕೀಲ ಎಚ್ ಪಿ ರಾನಿನಾ ಈ ಬಗ್ಗೆ ಮಾಹಿತಿ ನೀಡಿ, ನೋಯೆಲ್ ಟಾಟಾಗೆ ಸರಿಯಾದ ಆಯ್ಕೆಯಾಗಿದೆ. ಇದು ಸಂಸ್ಥೆಗೆ ತುಂಬಾ ಒಳ್ಳೆಯದು ಎಂದು ಹೇಳಿದರು. ಈ ಮೂಲಕ ನಿರಂತರ ಚಟುವಟಿಕೆ ಮತ್ತು ಸಾಮರಸ್ಯ’ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.

ನೋಯೆಲ್ ಅವರನ್ನು ‘ಸಂವೇದನಾಶೀಲ ವ್ಯಕ್ತಿ’ ಎಂದು ಕರೆದ ಟಾಟಾ ಸನ್ಸ್‌ನ ಮಂಡಳಿಯ ಮಾಜಿ ಸದಸ್ಯ ಆರ್ ಗೋಪಾಲಕೃಷ್ಣನ್, ‘ಟ್ರಸ್ಟ್‌ಗಾಗಿ ಉತ್ತಮ ಕಾರ್ಯವನ್ನು ಮಾಡಲಿದ್ದಾರೆ ಎಂದು ಹೇಳಿದರು. ತಮ್ಮ ವ್ಯವಹಾರ ಮತ್ತು ಉದ್ಯಮಶೀಲತೆಯ ಜಾಣ್ಮೆಯಿಂದ, ನೋಯೆಲ್ ಅವರು ಟ್ರಸ್ಟ್‌ಗೆ ಸಾಕಷ್ಟು ಮೌಲ್ಯ ತುಂಬಲಿದ್ದಾರೆ ಎಂದು ಹೇಳಿದ್ದಾರೆ.

ನೋಯೆಲ್ ಈ ಹಿಂದೆ 2010 ರಿಂದ 2021 ರವರೆಗೆ ಟಾಟಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ಬ ಮುಖ್ಯಸ್ಥರಾಗಿದ್ದರು. ಈ ಸಮಯದಲ್ಲಿ ಸರಕು ವ್ಯಾಪಾರ ಸಂಸ್ಥೆಯ ಆದಾಯವು 500 ಮಿಲಿಯನ್ ಡಾಲರ್‌ನಿಂದ 3 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅವರು ಟಾಟಾ ಸ್ಟೀಲ್ ಲಿಮಿಟೆಡ್ ಮತ್ತು ವೋಲ್ಟಾಸ್ ಲಿಮಿಟೆಡ್ ಸೇರಿದಂತೆ ಹಲವಾರು ಟಾಟಾ ಸಂಸ್ಥೆಗಳ ಮಂಡಳಿಗಳಲ್ಲಿದ್ದಾರೆ. ಅವರ ಮಕ್ಕಳಾದ ಮಾಯಾ, ನೆವಿಲ್ಲೆ ಮತ್ತು ಲೇಹ್ ಕೂಡ ಕುಟುಂಬಕ್ಕೆ ಸಂಬಂಧಿಸಿದ ಕೆಲವು ದತ್ತಿ ಸಂಸ್ಥೆಗಳ ಟ್ರಸ್ಟಿಗಳಾಗಿದ್ದಾರೆ ಎಂದು ಟಾಟಾ ಟ್ರಸ್ಟ್ ವೆಬ್ಸೈಟ್ ತಿಳಿಸಿದೆ.

ಸಿಮೋನ್ ಟಾಟಾ ಅವರ ಪುತ್ರ

67 ವರ್ಷದ ನೋಯೆಲ್ ಟಾಟಾ, ರತನ್ ಅವರ ತಂದೆ ನವಲ್ ಟಾಟಾ ಮತ್ತು ಸಿಮೋನ್ ಟಾಟಾ ಅವರ ಪುತ್ರ. ಈಗಾಗಲೇ ಪ್ರಮುಖ ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಮಂಡಳಿಗಳಲ್ಲಿ ನೋಯೆಲ್ ಮುಂಚೂಣಿಯಲ್ಲಿದ್ದರು.

ಇದನ್ನೂ ಓದಿ: Ratan Tata Death: ತಾಜ್‌ ಹೋಟೆಲ್‌ ಮೇಲೆ ಉಗ್ರರು ದಾಳಿ ನಡೆಸಿದ ಆ 3 ದಿನ ರತನ್‌ ಟಾಟಾ ಏನು ಮಾಡುತ್ತಿದ್ದರು?

2016 ರಲ್ಲಿ ರತನ್ ಟಾಟಾ ಅವರು ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಆಘಾತಕಾರಿ ಪದಚ್ಯುತಗೊಳಿಸಿದಾಗ ಟಾಟಾ ಟ್ರಸ್ಟ್ ಕುರ್ಚಿಯ ನಿಜವಾದ ಪ್ರಭಾವ ಮೊದಲ ಬಾರಿಗೆ ಗೋಚರಿಸಿತು. ಇದು ಭಾರತದ ಅತಿದೊಡ್ಡ ಕಾರ್ಪೊರೇಟ್ ಜಗಳವಾಗಿ ಮಾರ್ಪಟ್ಟಿತ್ತು. ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ವರ್ಷಗಳ ನಂತರ, 1892ರಲ್ಲಿ ನೋಯೆಲ್ ಮತ್ತು ರತನ್ ಅವರ ಮುತ್ತಜ್ಜ ಜಮ್ಸೆಟ್ಜಿ ಟಾಟಾ ಅವರು ಟಾಟಾ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು.