Friday, 22nd November 2024

IND vs AUS Test: ರೋಹಿತ್‌ ಗೈರು; ನಾಯಕತ್ವ ರೇಸ್‌ನಲ್ಲಿ ಕೊಹ್ಲಿ, ಪಂತ್‌

ಮುಂಬಯಿ: ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ(IND vs AUS Test) ಟೆಸ್ಟ್​ ಸರಣಿಯ ಆರಂಭಿಕ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಕಾರಣದಿಂದಾಗಿ ಒಂದು ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್​ ಈಗಾಗಲೆ ಬಿಸಿಸಿಐ ಜತೆಗೆ ಸಂವಹನ ನಡೆಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಪಂದ್ಯದಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆ ಕೂಡ ಜೋರಾಗಿದೆ.

ಮೂಲಗಳ ಪ್ರಕಾರ ರೋಹಿತ್​ ಪತ್ನಿ ರಿತಿಕಾ ಆ ಸಮಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದ ರೋಹಿತ್‌ ಮೊದಲ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆಸೀಸ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿ ನವೆಂಬರ್​ 22ರಂದು ಶುರುವಾಗಲಿದ್ದು, ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದೆ. 2ನೇ ಟೆಸ್ಟ್​ ಡಿಸೆಂಬರ್​ 6ರಿಂದ 10ರವರೆಗೆ ಅಡಿಲೇಡ್​ನಲ್ಲಿ ನಿಗದಿಯಾಗಿದೆ.

ಸದ್ಯಕ್ಕೆ ರೋಹಿತ್‌ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ಮಾಜಿ ನಾಯಕ ವಿರಾಟ್‌ ಕೊಹ್ಲಿ(Virat Kohli), ರಿಷಭ್‌ ಪಂತ್‌(Rishabh Pant), ಸೀಮಿತ ಓವರ್​ ತಂಡದ ಉಪನಾಯಕ ಶುಭಮಾನ್​ ಗಿಲ್​, ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ಕನ್ನಡಿಗ ಕೆ.ಎಲ್‌ ರಾಹುಲ್‌ ರೇಸ್​ನಲ್ಲಿದ್ದಾರೆ.

ಇದನ್ನೂ ಓದಿ Ind vs Ban 3rd T20I: ನಾಳೆ ಭಾರತ-ಬಾಂಗ್ಲಾ ಅಂತಿಮ ಟಿ20

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ 2018-19ರಲ್ಲಿ ಭಾರತ ತಂಡ ಆಸೀಸ್‌ ಪ್ರವಾಸದಲ್ಲಿ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಅದು ಭಾರತ ಆಸೀಸ್‌ ನೆಲದಲ್ಲಿ ಗೆದ್ದ ಮೊದಲ ಸರಣಿ ಗೆಲುವಾಗಿತ್ತು. 2020- 21ರಲ್ಲಿ ವಿರಾಟ್‌ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ಸಾರಥ್ಯದಲ್ಲಿ ಭಾರತ 2-1 ಅಂತರದಿಂದ ಸರಣಿ ಜಯಿಸಿತ್ತು. ರಹಾನೆ ಈಗ ತಂಡದಲ್ಲಿ ಇರದ ಕಾರಣ ವಿರಾಟ್‌ ಕೊಹ್ಲಿಗೆ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗಿದೆ.

ಪಂತ್‌ 2020- 21ರ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಾಬಾದಲ್ಲಿ ನಡೆದ ಅಂತಿಮ ಪಂದ್ಯವನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಟ್ಟಿದ್ದರು. ಒಂದೊಮ್ಮೆ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ಒಪ್ಪದಿದ್ದರೆ ಆಗ ಪಂತ್‌ಗೆ ಈ ಜವಾಬ್ದಾರಿ ಸಿಗುವುದು ಖಚಿತ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಂತ್‌ ನಡೆಸಿದ ಉಪಾಯದಿಂದ ಪಂದ್ಯ ಗೆಲ್ಲಲು ಸಹಕಾರಿಯಾಗಿತ್ತು ಎಂದು ಸ್ವತಃ ರೋಹಿತ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ರೋಹಿತ್‌ ಅವರು ಪಂತ್‌ ಹೆಸರನ್ನು ತಂಡದ ಮ್ಯಾನೆಜ್‌ಮೆಂಟ್‌ಗೆ ಸೂಚಿಸಬಹುದು. ಒಂದು ವೇಳೆ ರೋಹಿತ್​ ಅವರ ಪತ್ನಿ ರಿತಿಕಾ ಆಸ್ಟ್ರೆಲಿಯಾ ಪ್ರವಾಸಕ್ಕೆ ಮೊದಲೇ ಮಗುವಿಗೆ ಜನ್ಮ ನೀಡಿದರೆ ಆಗ ರೋಹಿತ್‌ ಎಲ್ಲ 5 ಟೆಸ್ಟ್​ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರೋಹಿತ್‌ ಲಭ್ಯವಾದರೆ ಇಲ್ಲಿ ಬಿಸಿಸಿಐಗೆ ನಾಯಕನ ಹುಡುಕಾಟದ ಚಿಂತೆ ಇರುವುದಿಲ್ಲ.