ಮೈಸೂರು: ನವರಾತ್ರಿಯ 9ನೇ ದಿನವಾದ ಶುಕ್ರವಾರ ರಾಜ್ಯಾದ್ಯಂತ ಆಯುಧ ಪೂಜೆ (Ayudha Pooja) ಸಂಭ್ರಮ ಮನೆಮಾಡಿದೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ನಾಡಹಬ್ಬ ಆಚರಣೆ (Mysuru Dasara ) ಮಾಡಲಾಗುತ್ತಿದ್ದು, ಅರಮನೆ ಮಂಟಪದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದರು.
ಬೆಳಗ್ಗೆಯಿಂದಲೇ ಅರಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ರಾಜವಂಶಸ್ಥರು ಬಳಸುತ್ತಿದ್ದ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಲಾಯಿತು. ಬಳಿಕ ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಇಟ್ಟು ಪಟ್ಟದ ಆನೆ, ಪಟ್ಟದ ಹಸು ಜತೆಗೆ ಮಂಗಳವಾದ್ಯಗಳ ಮೂಲಕ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಬರಲಾಗಿದೆ.
ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಯಿತು. ನಂತರ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ ಕಲ್ಯಾಣ ಮಂಟಪಕ್ಕೆ ತರಲಾಯಿತು. ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ ಯದುವೀರ್ ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ | Dasara 2024: ವಿಜಯದಶಮಿಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ನೋಡಿ ಕುತೂಹಲಕಾರಿ ವಿಷಯ!
ಬಳಿಕ ಆನೆ ತೊಟ್ಟಿಯಲ್ಲಿ ಪಟ್ಟದ ಹಸು, ಕುದುರೆ, ಆನೆ, ಪಲ್ಲಕ್ಕಿ ಹಾಗೂ ರಾಜರು ಬಳಸುವ ದುಬಾರಿ ಬೆಲೆಯ ಕಾರುಗಳಿಗೆ ಯದುವೀರ್ ಅವರು ಪೂಜೆ ಸಲ್ಲಿಸಿದರು. ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
ಮೈಸೂರು ಅರಮನೆಗೆ ಹಬ್ಬದ ಸಂಭ್ರಮ ದುಪ್ಪಟ್ಟು; ತ್ರಿಶಿಕಾ- ಯದುವೀರ್ ದಂಪತಿಗೆ ಗಂಡು ಮಗು ಜನನ
ಮೈಸೂರು: ಮೈಸೂರು ನಾಡಹಬ್ಬದ (Navaratri 2024) ಸಂಭ್ರಮದಲ್ಲಿರುವಾಗಲೇ ಈ ಉತ್ಸಾಹವನ್ನು ದುಪ್ಪಟ್ಟಾಗಿಸುವ ಇನ್ನೊಂದು ಸ್ವೀಟ್ ನ್ಯೂಸ್ ದೊರೆತಿದೆ. ಹೌದು, ಮಹಾರಾಜ, ಮೈಸೂರು ಸಂಸದ ಯದುವೀರ್ ಒಡೆಯರ್ (Yaduveer Wodeyar) ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ (Trishikha Kumari Devi) ಒಡೆಯರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದು ಯದುವೀರ್- ತ್ರಿಶಿಕಾ ದಂಪತಿಗೆ ಎರಡನೇ ಗಂಡು ಮಗು. ಮೊದಲ ಮಗು ಆದ್ಯವೀರ್‌ಗೆ ಈಗ ಏಳು ವರ್ಷ. ಈಗ ಮತ್ತೊಬ್ಬ ಪುತ್ರ ರಾಜವಂಶಕ್ಕೆ ಬಂದಿದ್ದಾನೆ. ಯದುವೀರ್ ಅವರು ಖಾಸಗಿ ದರ್ಬಾರ್ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ ಎಂಟು ದಿನ ಖಾಸಗಿ ದರ್ಬಾರ್ ನಡೆಸಿರುವ ಯದುವೀರ್ ಅವರು ನಾಳೆ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್ ಒಡೆಯರ್ ಅವರಿಗೆ ತಲುಪಿತು.
ಖಾಸಗಿ ದರ್ಬಾರ್ ಇರುವ ಕಾರಣದಿಂದ ಕಂಕಣಧಾರಿಯಾಗಿರುವ ಯದುವೀರ್ ಅರಮನೆಯಿಂದ ಹೊರಗೆ ಹೋಗುವುದಿಲ್ಲ. ಇಂದು ಖಾಸಗಿ ದರ್ಬಾರ್ ಮುಗಿದ ಬಳಿಕ ಹೊರ ಬರಲಿದ್ದಾರೆ. ಈಗಾಗಲೇ ಎಂಟು ತಿಂಗಳು ಮುಗಿದಿದ್ದರಿಂದ ಹೆರಿಗೆ ದಿನಗಳನ್ನು ತ್ರಿಷಿಕಾ ಎಣಿಸುತ್ತಿದ್ದರು. ಇದರಿಂದ ಈ ಬಾರಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ನವರಾತ್ರಿ ವೇಳೆಯೇ ಮಗು ಆಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು ಎಂದು ಅರಮನೆ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: Trishikha Kumari: ಮೈಸೂರು ಅರಮನೆಯಲ್ಲಿ ಸದ್ಯವೇ ಇನ್ನೊಂದು ಮಗು? ನವರಾತ್ರಿ ಪೂಜೆಯಲ್ಲಿ ತ್ರಿಶಿಕಾ ಲುಕ್
ರಾಜಸ್ಥಾನ ಮೂಲದ ಡುಂಗರ್ ಪುರ್ ಕುಟುಂಬದ ತ್ರಿಷಿಕಾಕುಮಾರಿ ಅವರನ್ನು 2016ರಲ್ಲಿ ಯದುವೀರ್ ಅವರು ವಿವಾಹವಾಗಿದ್ದರು. ಆನಂತರ ಆದ್ಯವೀರ್ ಜನಿಸಿದ್ದ. ಈಗ ಎರಡನೇ ಮಗುವಿನ ಜನನವಾಗಿದೆ. ಯದುವೀರ್ ನಾಲ್ಕು ತಿಂಗಳ ಹಿಂದೆಯಷ್ಟೇ ಮೈಸೂರು ಕೊಡಗು ಸಂಸದರಾಗಿ ಆಯ್ಕೆಯಾಗಿದ್ದಾರೆ.