Saturday, 16th November 2024

Durga Puja : ಹೈದರಾಬಾದ್‌ನ ಬೇಗಂ ಬಜಾರ್‌ ಬಳಿ ದುರ್ಗಾ ಮೂರ್ತಿಗೆ ಹಾನಿ; ಪ್ರತಿಭಟನೆ

Durga Puja

ಹೈದರಾಬಾದ್: ದುರ್ಗಾ ಪೂಜಾ (Durga Puja) ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗೆಯ ಮೂರ್ತಿಗೆ ದುಷ್ಕರ್ಮಿಗಳು ಭಾಗಶಃ ಹಾನಿ ಮಾಡಿರುವ ಘಟನೆ ಇಲ್ಲಿನ ಬೇಗಂ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಭಕ್ತರು ಕೆರಳಿದ್ದು ಪ್ರತಿಭಟನೆ ಭುಗಿಲೆದ್ದಿದೆ. ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಸಹಾಯಕ ಪೊಲೀಸ್ ಆಯುಕ್ತ ಎ.ಚಂದ್ರಶೇಖರ್ ಅವರ ಪ್ರಕಾರ, ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳು ವಿಗ್ರಹದ ಒಂದು ಕೈಗೆ ಹಾನಿ ಮಾಡಿದ್ದಾರೆ. ನಾವು ತನಿಖೆ ಪ್ರಾರಂಭಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದುರ್ಷರ್ಮಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಬಳಿಕ ವಿಗ್ರಹವನ್ನು ಪುನಃಸ್ಥಾಪಿಸಲಾಗಿದೆ. ಪೆಂಡಾಲ್‌ನಲ್ಲಿ ಪೂಜೆ ಮುಂದುವರೆದಿದೆ.

ವಿಧ್ವಂಸಕ ಕೃತ್ಯವು ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರು ನಾಂಪಲ್ಲಿಯಲ್ಲಿ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕಿ ಮಾಧವಿ ಲತಾ ಈ ಕೃತ್ಯವನ್ನು ಖಂಡಿಸಿದ್ದು, ಹಿಂದೂಗಳು ತಮ್ಮ ಪ್ರಾರ್ಥನಾ ಸ್ಥಳಗಳ ಮೇಲೆ ಪದೇ ಪದೇ ದಾಳಿ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Agniveer Death : ನಾಸಿಕ್‌ನಲ್ಲಿ ಶೂಟಿಂಗ್‌ ಅಭ್ಯಾಸದ ವೇಳೆ ಗನ್ ಶೆಲ್ ಸ್ಫೋಟ: ಇಬ್ಬರು ಅಗ್ನಿವೀರರು ಸಾವು

ವಿಧ್ವಂಸಕ ಕೃತ್ಯಗಳಿಗೆ ಎಲ್ಲಾ ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಇದು. ಬಹುಶಃ ಅವರು ನಮ್ಮನ್ನು ಒಡೆಯಲು ಹೊರಟಿದ್ದಾರೆ ಎಂದು ಯೋಚಿಸುತ್ತಿದ್ದಾರೆ. ಆದರೆ ಅವರು ಇಂತಹ ಕೆಲಸಗಳನ್ನು ಮತ್ತೆ ಮತ್ತೆ ನಮ್ಮನ್ನು ಒಂದುಗೂಡಿಸುತ್ತಿದ್ದಾರೆ. ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ ಎಂದು ಅವರು ಹೇಳಿದರು ಬೇಗಂ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.