Monday, 25th November 2024

Ajay Jadeja: ಜಾಮ್ ನಗರ ರಾಜಮನೆತನಕ್ಕೆ ಕ್ರಿಕೆಟಿಗ ಜಡೇಜಾ ಉತ್ತರಾಧಿಕಾರಿ

ಜಾಮ್ ನಗರ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಅಜಯ್​ ಜಡೇಜಾ(Ajay Jadeja) ಅವರಿಗೆ ಜಾಮ್‌ ನಗರದ ರಾಜಮನೆತನವು ಕುಟುಂಬದ ಸಿಂಹಾಸನವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿದೆ. ಪ್ರಸ್ತುತ ಜಾಮ್ ಸಾಹೇಬ್ ಶತ್ರುಸಲ್ಯಸಿಂಹಜಿ ದಿಗ್ವಿಜಯಸಿಂಹಜಿ ಜಡೇಜಾ ರಾಜಮನೆತನಕ್ಕೆ ಸೇರಿದ ಅಜಯ್ ಜಡೇಜಾ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.

ʼಅಜಯ್ ಜಡೇಜಾ ಅವರು ನನ್ನ ಉತ್ತರಾಧಿಕಾರಿ ಮತ್ತು ನವನಗರದ ಮುಂದಿನ ಜೇಮ್ಸಾಹೇಬ್ ಎಂದು ಸ್ವೀಕರಿಸಿದ್ದರಿಂದ ನಾನು ಕೂಡ ವಿಜಯಶಾಲಿಯಾಗಿದ್ದೇನೆ. ಇದು ಜಾಮ್‌ನಗರದ ಜನರಿಗೆ ವರದಾನ. ಧನ್ಯವಾದಗಳು ಅಜಯ್ʼ ಎಂದು ಶತ್ರುಸಲ್ಯಸಿಂಹಜಿ ಹೇಳಿದ್ದಾರೆ.

ಅಜಯ್ ಜಡೇಜಾ ಸೇರಿರುವ ಜಾಮ್‌ನಗರದ ರಾಜಮನೆತನವು ಕ್ರಿಕೆಟ್ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪ್ರತಿಷ್ಠಿತ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಗೆ ಕ್ರಮವಾಗಿ ಜಡೇಜಾ ಅವರ ಸಂಬಂಧಿಕರಾದ ಕೆ.ಎಸ್.ರಂಜಿತ್‌ಸಿನ್‌ಜಿ ಮತ್ತು ಕೆ.ಎಸ್.ದುಲೀಪ್‌ಸಿನ್ಹಜಿ ಹೆಸರಿಡಲಾಗಿದೆ.

ಇದನ್ನೂ ಓದಿ Rishabh Pant: ಗಲ್ಲಿಯಲ್ಲಿ ಕ್ರಿಕೆಟ್‌ ಆಡಿ ಸರಳತೆ ತೋರಿದ ಪಂತ್‌; ವಿಡಿಯೊ ವೈರಲ್‌

ಪಾಕ್​ಗೆ ಸೋಲುಣಿಸಿದ್ದ ಜಡೇಜಾ

ಬೆಂಗಳೂರಿನಲ್ಲಿ ನಡೆದ 1996ರ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್​ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ 25 ಎಸೆತಗಳಲ್ಲಿ 45 ರನ್ ಗಳಿಸಿದ್ದು ಅವರ ಸ್ಮರಣೀಯ ಏಕದಿನ ಇನಿಂಗ್ಸ್​ಗಳಲ್ಲಿ ಒಂದಾಗಿದೆ. ಇದರಲ್ಲಿ ವೇಗದ ಬೌಲಿಂಗ್ ದಿಗ್ಗಜ ವಕಾರ್ ಯೂನಿಸ್ ವಿರುದ್ಧ ಕೊನೆಯ ಎರಡು ಓವರ್​ಗಳಲ್ಲಿ 40 ರನ್ ಗಳಿಸಿದ್ದರು.

ಮ್ಯಾಚ್ ಫಿಕ್ಸಿಂಗ್ ನಿಷೇಧ

ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಐದು ವರ್ಷಗಳ ನಿಷೇಧದಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕೊನೆಗೊಂಡಿತು. ನಂತರ, ಜಡೇಜಾ ನಟನಾಗಿ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದರೂ, ಜಡೇಜಾ ದೆಹಲಿ ಪರ ದೇಶೀಯ ಕ್ರಿಕೆಟ್ ಆಡಲು ಮರಳಿದರು. ನಂತರ ರಾಜಸ್ಥಾನ್ ತಂಡದ ನಾಯಕ ಮತ್ತು ತರಬೇತುದಾರರಾದರು. ಆಟದ ದಿನಗಳು ಮುಗಿದ ನಂತರ, ಜಡೇಜಾ ಕ್ರಿಕೆಟ್ ವೀಕ್ಷಕ ವಿವರಣೆಗೆ ಕಾಲಿಟ್ಟರು. 2015-16 ರ ಋತುವಿನಲ್ಲಿ ದೆಹಲಿ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶಕರಾಗಿದ್ದರು.