Saturday, 26th October 2024

IND vs NZ: ಕಿವೀಸ್‌ ಸರಣಿಗೆ ಶಮಿ ಆಯ್ಕೆಯಾಗದಿರಲು ಕಾರಣವೇನು?

ಮುಂಬಯಿ: ಅನುಭವಿ ವೇಗಿ ಮೊಹಮ್ಮದ್‌ ಶಮಿ(Mohammed Shami) ಅವರ ಟೀಮ್‌ ಇಂಡಿಯಾ ಕಮ್‌ಬ್ಯಾಕ್‌ ಮತ್ತೆ ವಿಳಂಬವಾಗಿದೆ. ನ್ಯೂಜಿಲ್ಯಾಂಡ್‌(IND vs NZ) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಪ್ರಕಟಗೊಂಡ ತಂಡಕ್ಕೆ ಶಮಿ ಆಯ್ಕೆಯಾಗಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ಶಮಿ ಅವರನ್ನು ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ(IND vs AUS Test) ಟೆಸ್ಟ್​ ಸರಣಿಗೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರಿಗೆ ಕಿವೀಸ್‌ ವಿರುದ್ಧದ ಸರಣಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಪೂರ್ತಿ ಫಿಟ್‌ನೆಸ್‌ ಹೊಂದಿರದ ಕಾರಣ ಅವರನ್ನು ಅವಸರದಲ್ಲಿ ಪಂದ್ಯವನ್ನಾಡಿಸಿ ಮತ್ತೆ ಗಾಯಗೊಂಡರೆ ಕಷ್ಟ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದ್ದರಿಂದ ಇಂಥದೊಂದು ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. 

ಮೊಹಮ್ಮದ್‌ ಶಮಿ ಭಾರತದಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿ ಬಳಿಕ ಯಾವುದೇ ಕ್ರಿಕೆಟ್‌ ಸರಣಿ ಆಡಿಲ್ಲ. ವಿಶ್ವ ಕಪ್‌ ಬಳಿಕ ಶಮಿ ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿದ್ದರೂ ಕೂಡ ಸಂಪೂರ್ಣ ಫಿಟ್‌ ಆಗಿಲ್ಲ. ಇದೇ ಕಾರಣದಿಂದ ಅವರನ್ನು ರಣಜಿ ಟ್ರೋಫಿಯ ಪಂದ್ಯದಿಂದಲೂ ಹೊರಗುಳಿಯುವಂತೆ ಬಿಸಿಸಿಐ ಸೂಚನೆ ನೀಡಿತ್ತು. ಒಟ್ಟಾರೆ ಶಮಿ ಆಸೀಸ್‌ ವಿರುದ್ಧದ ಸರಣಿಯಲ್ಲಿ ಆಡುವುದು ಬಹುತೇಕ ಖಚಿತ.

ಈ ಹಿಂದಿನ ಎರಡೂ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಭಾರತ ತಂಡ ಗೆಲುವು ಸಾಧಿಸಿ ಆಸೀಸ್‌ ಪಡೆಯ ಸೊಕ್ಕಡಗಿಸಿದ್ದರು. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ಬಲಿಷ್ಠ ತಂಡವನ್ನೇ ಸಿದ್ಧಪಡಿಸುವ ಯೋಜನೆಯ್ಲಿದೆ. ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಶಮಿ ಅವರ ಪಾತ್ರ ನಿರ್ಣಾಯಕ. ಹೀಗಾಗಿ ಬಿಸಿಸಿಐ ಅವರನ್ನು ಆತುರದಿಂದ ಆಡಿಸಲು ಹಿಂದೇಟು ಹಾಕಿದಂತಿದೆ.

ಇದನ್ನೂ ಓದಿ Mohammed Shami : ಸುಳ್ಳು ಸುದ್ದಿ ಹಬ್ಬಿಸಬೇಡಿ: ಗಾಯದ ಬಗ್ಗೆ ವರದಿಗಳನ್ನು ತಳ್ಳಿಹಾಕಿದ ಶಮಿ

ನ್ಯೂಜಿಲ್ಯಾಂಡ್‌ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಕಿವೀಸ್‌ಗೆ ಸರಣಿ ಗೆಲ್ಲಲೇ ಬೇಕಾದ ಒತ್ತಡವಿದೆ. ಹೀಗಾಗಿ ಈ ಟೆಸ್ಟ್‌ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.

ಮೊದಲ ಪಂದ್ಯ ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ, ಮೂರನೇ ಟೆಸ್ಟ್‌ ನವೆಂಬರ್‌ 1 ರಿಂದ 5ರ ತನಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ನ್ಯೂಜಿಲ್ಯಾಂಡ್‌ ಸರಣಿಗೆ ಭಾರತ ತಂಡ

ರೋಹಿತ್‌ ಶರ್ಮ(ನಾಯಕ) ಜಸ್‌ಪ್ರೀತ್‌ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ಸರ್ಫರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ್ ಜುರೆಲ್, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌ ಸಿಂಗ್‌.