ನವದೆಹಲಿ: ಬಿಸಿಸಿಐ, ಇದೀಗ 14ನೇ ಐಪಿಎಲ್ನತ್ತ ಗಮನಹರಿಸಿದೆ. ಮುಂದಿನ ಆವೃತ್ತಿಗೆ ಮತ್ತೊಂದು ತಂಡ ಸೇರ್ಪಡೆಗೊಳಿ ಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಜತೆಗೆ ದೇಶೀಯ ಕ್ರಿಕೆಟ್ನತ್ತ ಒಲವು ವ್ಯಕ್ತಪಡಿಸಿದೆ.
ಐಪಿಎಲ್-14ಗೆ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಅನುಕೂಲವಾಗುವಂತೆ ದೇಶೀಯ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
ಸವಾಲಾಗಿ ಸ್ವೀಕರಿಸಿ 13ನೇ ಐಪಿಎಲ್ ಆಯೋಜಿಸಿದ್ದ ಬಿಸಿಸಿಐ, ರಣಜಿ ಟ್ರೋಫಿಗೂ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸಂಘಟಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಪಂಚತಾರಾ ಹೋಟೆಲ್ಗೆ ಹತ್ತಿರವಾಗಿರುವ ಮೈದಾನಗಳಿಗೆ ಆದ್ಯತೆ ನೀಡಲಾಗು ತ್ತಿದೆ. ಈ ಕುರಿತು 10 ರಾಜ್ಯ ಘಟಕಗಳನ್ನು ಸಂಪರ್ಕಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಎರಡು ವಾರಗಳ ಅಂತರದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಯೋಜಿಸಿ, ಬಳಿಕ ರಣಜಿ ಟ್ರೋಫಿಗೆ ಚಾಲನೆ ನೀಡಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆ ಟಿ20 ಟೂರ್ನಿ ಆಯೋಜಿಸಲು ಹೆಚ್ಚಿನ ಆಸಕ್ತಿ ತೋರಿದೆ ಎನ್ನಲಾಗಿದೆ.