Saturday, 23rd November 2024

Rishabh Pant: ಡೆಲ್ಲಿ ತಂಡ ತೊರೆಯಲಿದ್ದಾರಾ ಪಂತ್?; ಕುತೂಹಲ ಕೆರಳಿಸಿದ ಟ್ವೀಟ್‌

ನವದೆಹಲಿ: ಐಪಿಎಲ್‌-2025ರ ಆವೃತ್ತಿಗಾಗಿ(IPL 2025) ಆಟಗಾರರ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ರಿಯಾಧ್‌ ಅಥವಾ ಜೆಡ್ಡಾ ನಗರದಲ್ಲಿ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಬಿಸಿಸಿಐ(BCCI) ಆಟಗಾರರ ರೀಟೈನ್‌ ನಿಯಮವನ್ನು ಪ್ರಕಟಿಸಿದೆ. ಈ ಮಧ್ಯೆ ರಿಷಭ್‌ ಪಂತ್‌(Rishabh Pant) ಅವರು ಮಾಡಿರುವ ಟ್ವೀಟ್‌ ಒಂದು ವೈರಲ್‌ ಆಗಿದ್ದು, ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತೊರೆಯಲಿದ್ದಾರಾ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಈ ಹಿಂದೆಯೂ ಕೂಡ ಪಂತ್‌ ಅವರು ಡೆಲ್ಲಿ ತಂಡ ತೊರೆದು ಚೆನ್ನೈ ಅಥವಾ ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಫ್ರಾಂಚೈಸಿ ಪಂತ್‌ ಡೆಲ್ಲಿ ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಸ್ಪಷ್ಟನೆ ನೀಡಿತ್ತು. ಹೀಗಾಗಿ ಪಂತ್‌ ಬೇರೆ ಫ್ರಾಂಚೈಸಿ ಪರ ಆಡಲಿದ್ದಾರೆ ಎನ್ನುವ ಊಹಾಪೋಹಕ್ಕೆ ತೆರೆ ಬಿದ್ದಿತ್ತು. ಆದರೆ ಇದೀಗ ಪಂತ್‌ ಮಾಡಿರುವ ಟ್ವೀಟ್‌ನಿಂದ ಮತ್ತೆ ಗೊಂದಲ ಉಂಟಾಗಿದೆ.

‘ಹರಾಜಿಗೆ ಹೋದರೆ ನಾನು ಮಾರಾಟವಾಗುತ್ತೇನೋ ಇಲ್ಲವೋ? ಮಾರಾಟವಾದರೂ ಎಷ್ಟು ಮೊತ್ತಕ್ಕೆ? ಎಂದು ಪಂತ್ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ ಕಂಡ ನೆಟ್ಟಿಗರು ಪಂತ್‌ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ. ಪಂತ್‌ ಡೆಲ್ಲಿ ತಂಡದ ಪರವೇ ಆಡಬೇಕು ಎನ್ನುವುದು ಅಭಿಮಾನಿಗಳ ಆಶಯ. ಪಂತ್‌ ಯಾವ ಉದ್ದೇಶದಿಂದ ಈ ಟ್ವೀಟ್‌ ಮಾಡಿದ್ದಾರೆ ಎನ್ನುವುದು ಖಚಿತವಾಗಿಲ್ಲ.

ಬಿಸಿಸಿಐ(BCCI) ಈ ಬಾರಿ ಐಪಿಎಲ್(IPL 2025)​ ತಂಡಗಳಿಗೆ ಗರಿಷ್ಠ 5 ಆಟಗಾರರ ರಿಟೇನ್​ಗೆ ಅನುವು ಮಾಡಿಕೊಟ್ಟಿದೆ. ಜತೆಗೆ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಬಳಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಪ್ರತಿ ತಂಡಗಳ ಬಜೆಟ್​ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್​ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್​ ಮಾಡಿದರೆ, ಹರಾಜಿನಲ್ಲಿ 3 ಆರ್​ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.

ಇದನ್ನೂ ಓದಿ Rishabh Pant: ಗಲ್ಲಿಯಲ್ಲಿ ಕ್ರಿಕೆಟ್‌ ಆಡಿ ಸರಳತೆ ತೋರಿದ ಪಂತ್‌; ವಿಡಿಯೊ ವೈರಲ್‌

ಈ ಬಾರಿಯ ಐಪಿಎಲ್‌ ಆಡುವ ಆಟಗಾರರಿಗೆ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.