Sunday, 24th November 2024

Chikkaballapur News: ಕನಿಷ್ಠ ಆಸೆ ಬಿಟ್ಟು ಪರಮಪದವನ್ನು ಪಡೆಯಿರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ: ಜೀವನದಲ್ಲಿ ಹಪಹಪಿಸುವ ಅಲ್ಪ ಆಸೆಗಳಿಂದಾಗಿ ಮರಳಿ ಮರಳಿ ಜನಿಸಬೇಕಾಗುತ್ತದೆ. ಹಾಗಾಗಿ ಕನಿಷ್ಠ ಆಸೆಯನ್ನು ಬಿಟ್ಟು ಪರಮೋಚ್ಚ ಗುರಿಯಡೆಗೆ ಗಮನವಿಟ್ಟಾಗ ಪರಮ ಪದದ ಹಾದಿ ಸುಗಮಗೊಳ್ಳುತ್ತದೆ. ಸಂತೃಪ್ತ ಜೀವನಕ್ಕಾಗಿ ಪರಮ ಪದದ ಧ್ಯೇಯವಿರಲಿ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಯಾಗ ಮಂಟಪ ದಲ್ಲಿ ಚಂಡಿಕಾ ಹೋಮ, ಮಾತೆ ಸಿದ್ಧಿಧಾತ್ರಿ ಆರಾಧನೆ, ದುರ್ಗಾಪೂಜೆ ಮತ್ತು ಮಹಾರುದ್ರ ಯಾಗದ ಸಾನಿಧ್ಯ ವಹಿಸಿ ಮಾತನಾಡಿದರು.

ಅನೇಕ ಜನ್ಮಗಳ ಆಧ್ಯಾತ್ಮಿಕ  ಅನುಷ್ಠಾನಗಳಿಂದಾಗಿ ಮಾನವ ಜನ್ಮ ಪ್ರಾಪ್ತವಾಗುತ್ತದೆ. ಜೀವಿತಾವಧಿಯಲ್ಲಿ ಮಾಡುವ ಯಾವುದೇ ನಿಸ್ವಾರ್ಥ ಕಾರ್ಯಗಳು ವ್ಯರ್ಥವಾಗುವುದಿಲ್ಲ. ನಿಸ್ವಾರ್ಥದಿಂದ ಮಾಡಿದ ಅತಿ ಚಿಕ್ಕ ಕಾರ್ಯವಾದರೂ ಬಹುದೊಡ್ಡ ಫಲವನ್ನು ತಂದು ಕೊಡುತ್ತದೆ. ಆತ್ಮಜ್ಞಾನದ ಅಲ್ಪ ಅರಿವು ಕೂಡ ಮುಕ್ತಿ ಹೊಂದಲು ನೆರವಾಗುತ್ತದೆ. ಶಾಸ್ತ್ರ ಪುರಾಣಗಳ ಅಧ್ಯಯನದಿಂದ  ಆತ್ಮಜ್ಞಾನ ಆತ್ಮ ಸಾಕ್ಷಾತ್ಕಾರಗಳ ಬಗೆಗೆ  ವಿವರ ದೊರೆಯುತ್ತದೆ. ಇವುಗಳನ್ನು ಗುರು ಮುಖೇನ ಅಭ್ಯಾಸ ಮಾಡಿ ಅನುಷ್ಠಾನಕ್ಕೆ ತಂದಾಗ ಆತ್ಮದ ನೈಜ ಸ್ವರೂಪ ತಿಳಿಯುತ್ತದೆ. ಜನ್ಮಕ್ಕೆ ಪೂರ್ವಕೃತ ಕರ್ಮಫಲಗಳೇ ಕಾರಣ. ಕರ್ಮವು ಯಾರನ್ನೂ ಬಿಡುವುದಿಲ್ಲ. ಆತ್ಮ ಸಾಕ್ಷಾತ್ಕಾರವಾದರೆ ಕರ್ಮದ ಫಲ ಬಾಧಿಸುವುದಿಲ್ಲ. ಶಾಸ್ತ್ರಗಳಲ್ಲಿ ಹೇಳುವ ಆಚರಣೆಗಳೆಲ್ಲವೂ ಆತ್ಮ ಸಾಕ್ಷಾತ್ಕಾರ ಪಾಠದ ವಿವಿಧ ಅನುಕ್ರಮಣಿಕೆಗಳು. ಮಹಾತ್ಮರ ಜೀವನ ಮಾದರಿಯನ್ನು ಅನುಸರಿಸಿದಾಗ ಸತ್ಯದರ್ಶನ ವಾಗುತ್ತದೆ.

ಅವರು ಚಂಡಿಕಾಯಾಗಕ್ಕೆ ಮಾನಸ ಗಂಗೋತ್ರಿ ಮತ್ತು ಶ್ರೀ ಸತ್ಯಸಾಯಿ ಉನ್ನತ ವ್ಯಾಸಂಗ ಸಂಸ್ಥೆಯ ವಿಶ್ರಾಂತ ಉಪಕುಲಪತಿ  ಪ್ರೊಫೆಸರ್ ಜೆ ಶಶಿಧರ ಪ್ರಸಾದ್ ದಂಪತಿಗಳು ಹವಿಸ್ಸನ್ನು ಅರ್ಪಿಸಿ ಪೂರ್ಣಾಹುತಿ ಕಾರ್ಯವನ್ನು ನೆರವೇರಿಸಿದರೆ, ಆಶ್ರಮದ ಹಿರಿಯ ದಂಪತಿಗಳು ಮೃತ್ಯುಂಜಯನಾದ  ಮಹಾರುದ್ರನಿಗೆ ಯಜ್ಞಾಹುತಿ ನೀಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ದುರ್ಗಾ ಅರ್ಚಕರು ಮಾತೆ ಸಿದ್ಧಿಧಾತ್ರಿಯನ್ನು ಪಶ್ಚಿಮ ಬಂಗಾಳದ ಸಂಪ್ರದಾಯದಂತೆ ಡಾಕಿ ವಾದನ ಸಮೇತ ಅರ್ಚಿಸಿದರು. ಯಾಗ ಕಾರ್ಯದಲ್ಲಿ ಮಹಾರುದ್ರನಿಗೆ, ಅಷ್ಟೋತ್ತರ, ಅಷ್ಟಕ, ಚತುರ್ವೇದ, ಸಂಗೀತ, ಗದ್ಯಪದ್ಯ, ಶಾಸ್ತ್ರ ಮತ್ತು ಸರ್ವ ವಾದ್ಯ ಸೇವೆಗಳನ್ನು ಸಮರ್ಪಿಸಲಾಯಿತು. ಯಜ್ಞ ಸಭೆಯ ವೇದಿಕೆಯಲ್ಲಿ ಕುಲಾಧಿಪತಿ ಬಿ ಎನ್ ನರಸಿಂಹಮೂರ್ತಿ ಅವರು ಉಪಸ್ಥಿತರಿದ್ದರು. ಸಭಾ ಸದರಲ್ಲಿ ಸಹಸ್ರಾರು ಮಂದಿ ಭಕ್ತ ಜನ ಬಂಧುಗಳು ಭಾಗವಹಿಸಿದ್ದರು.

ಇದನ್ನೂ ಓದಿ: Chikkaballapur_Dasara: ವೈದ್ಯ ಡಾ.ಬಿ.ವಿ.ಮಂಜುನಾಥ್ ಮನೆಯಲ್ಲಿ ೧೬ನೇ ವರ್ಷದ ದಸರಾ ಗೊಂಬೆಪೂಜೆ ಆರಾಧನೆ