ಬೆಂಗಳೂರು: ನಗರದ (Bangalore news) ಟೀ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆಗೆ (Bank Account) ಇದ್ದಕ್ಕಿದ್ದಂತೆ 999 ಕೋಟಿ ರೂ. ಬಂದಿದೆ. ಆಕಸ್ಮಿಕವಾಗಿ ಬಂದ ಈ ಹಣ ವ್ಯಾಪಾರಿಗೆ ಶಾಕ್ ನೀಡಿದೆ. ಅಲ್ಲಿಂದ ನಂತರ ಆ ವ್ಯಾಪಾರಿಗೆ ಆಗಿರುವ ಅನುಭವಗಳು ಬ್ಯಾಂಕ್ ವ್ಯವಹಾರದ ಮೇಲೆಯೇ ಜಿಗುಪ್ಸೆ ಮೂಡುವಂತೆ ಮಾಡಿವೆ. (viral news)
ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ಟೀ ಮಾರುವ ವ್ಯಾಪಾರಿ ಎಸ್.ಪ್ರಭಾಕರ್ ಎಂಬವರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಇದ್ದಕ್ಕಿದ್ದಂತೆ 999 ಕೋಟಿ ರೂ. ಹಣ ಜಮೆಯಾಗಿದೆ. ತಮ್ಮ ಖಾತೆಗೆ ಈ ಹಣ ಜಮೆಯಾಗಿರುವ ಮೆಸೇಜ್ ಕಂಡು ಪ್ರಭಾಕರ್ ಶಾಕ್ ಆಗಿದ್ದಾರೆ. ಮೊದಲಿಗೆ ಇದು ಯಾವುದೋ ಫೇಕ್ ಮೆಸೇಜ್ ಎಂದು ಭಾವಿಸಿದ್ದರು. ನಂತರ ಪರಿಶೀಲಿಸಿದಾಗ ಹಣ ಜಮೆಯಾಗಿರುವುದು ದೃಢಪಟ್ಟಿದೆ. ಪ್ರತಿನಿತ್ಯ ಈ ಖಾತೆಯಿಂದಲೇ ಅವರು ವ್ಯವಹಾರ ಮಾಡುತ್ತಿದ್ದರು.
ಹಣ ಜಮೆಯಾದ ಮರುಕ್ಷಣದಿಂದಲೇ ಪ್ರಭಾಕರ್ ಅವರ ಬ್ಯಾಂಕ್ ಖಾತೆಯನ್ನು ಫ್ರೀಝ್ (ಸ್ಥಗಿತ) ಮಾಡಲಾಗಿದೆ. ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿಯ ಎಡವಟ್ಟಿನಿಂದ ಪ್ರಭಾಕರ್ ಖಾತೆಗೆ 999 ಕೋಟಿ ರೂ. ಜಮೆಯಾಗಿದ್ದರೂ, ಪ್ರಭಾಕರ್ಗೆ ಈಗ ತಮ್ಮ ಖಾತೆಯನ್ನು ಮರಳಿ ಆಕ್ಟಿವೇಟ್ ಮಾಡಿಸಲು ಬ್ಯಾಂಕಿಗೆ ಅಲೆಯುವ ಪರಿಸ್ಥಿತಿ ಬಂದಿದೆ.
ಪ್ರಭಾಕರ್ ಇದೇ ಖಾತೆಯನ್ನು ಪ್ರತಿನಿತ್ಯದ ವ್ಯವಹಾರಕ್ಕೆ ಬಳಸಿಕೊಳ್ಳುವುದರಿಂದ, ಗ್ರಾಹಕರು ಪಾವತಿಸುವ ಹಣವೆಲ್ಲ ಇದೇ ಖಾತೆಗೆ ಜಮೆಯಾಗುತ್ತದೆ. ಇದರಿಂದ ಪ್ರಭಾಕರ್ ವ್ಯಾಪಾರದ ಮೇಲೆ ದುಷ್ಪರಿಣಾಮವಾಗಿದೆ. ಬ್ಯಾಂಕ್ ಸಿಬ್ಬಂದಿ ಇದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರನ್ನು ಪದೇ ಪದೆ ಬ್ಯಾಂಕ್ಗೆ ಅಲೆದಾಡಿಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ಪ್ರಭಾಕರ್ ಅವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ. ವ್ಯಾಪಾರ ಬಿಟ್ಟು ಬ್ಯಾಂಕ್ಗೆ ಅಲೆದಾಡುವ ಪರಿಸ್ಥಿತಿ ಬಂದಿದ್ದು, ಈ ಹಣ ಯಾಕಾದರೂ ಬಂತೋ ಎಂದು ಪ್ರಭಾಕರ್ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಬಂದಿದೆ.
ಘಟನೆ ನಡೆದ ಮೂರು ದಿನ ಕಳೆದರೂ ಬ್ಯಾಂಕ್ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಸದ್ಯ ದಸರಾ ಹಾಗೂ ಶನಿವಾರ-ಭಾನುವಾರ ರಜೆ ಇರುವ ಕಾರಣ ಸೋಮವಾರ ರಿಸರ್ವ್ ಬ್ಯಾಂಕಿಗೆ ಮೇಲ್ ಕಳುಹಿಸಲು ಪ್ರಭಾಕರ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Viral News : ಗರ್ಲ್ಫ್ರೆಂಡ್ ಸುತ್ತಾಡಿಸಲು ಶೋರೂಮ್ನಿಂದ ಕಾರು ಕದ್ದ ಯೂನಿವರ್ಸಿಟಿ ಬಾಯ್ಸ್!