Thursday, 19th September 2024

ಚುನಾವಣಾ ಪ್ರಚಾರವನ್ನು ಹೀಗೂ ಮಾಡಬಹುದು !

ಅಭಿವ್ಯಕ್ತಿ

ಚಂದ್ರಶೇಖರ ಬೇರಿಕೆ

ಇತ್ತೀಚೆಗೆ ತಾನೇ ಕರ್ನಾಟಕದ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಯಿತು. ಎರಡು ಕ್ಷೇತ್ರಗಳಲ್ಲಿ ಒಟ್ಟು 37 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೂ ಈ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳನ್ನು ಹೆಚ್ಚು ಕೇಂದ್ರೀಕರಿಸಿತ್ತು. ಈ ಎರಡು ಕ್ಷೇತ್ರಗಳಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕ್ರಮವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಮುನಿರತ್ನ, ಎಚ್.ಕುಸುಮಾ ಮತ್ತು ಕೃಷ್ಣಮೂರ್ತಿ ಅಭ್ಯರ್ಥಿಗಳಾದರೆ ಶಿರಾ ಕ್ಷೇತ್ರಕ್ಕೆ ಡಾ. ರಾಜೇಶ್ ಗೌಡ, ಟಿ.ಬಿ. ಜಯಚಂದ್ರ ಮತ್ತು ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದರು.

ಇನ್ನೇನು ಚುನಾವಣಾ ಪ್ರಚಾರದಲ್ಲಿ ಮೂರೂ ಪಕ್ಷಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರ ನಿವಾಸ, ಕಚೇರಿ ಮೇಲೆ ನಡೆದ ಸಿಬಿಐ ದಾಳಿ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಚುನಾವಣಾ ಸಂದರ್ಭದಲ್ಲಿ ಸಿಬಿಐ ದಾಳಿ ಮಾಡುವುದು ರಾಜಕೀಯ ಪ್ರೇರಿತ ಮತ್ತು ಇದೊಂದು ಚುನಾವಣಾ ಗಿಮಿಕ್ ಆಗಿದ್ದು, ಇದು ನಮ್ಮನ್ನು ಬೆದರಿಸುವ ತಂತ್ರ ಮತ್ತು ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನ ಎಂದು ಕಾಂಗ್ರೆಸ್ ಅಬ್ಬರಿಸಿದರೆ, ತನಿಖಾ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಸಿಬಿಐ ಕಾನೂನಿನಡಿ ಕ್ರಮ ತೆಗೆದುಕೊಂಡಿದೆ ಎಂದು ಬಿಜೆಪಿಯವರು ಸಮರ್ಥಿಸಿಕೊಂಡರು.

ಜನಪ್ರತಿನಿಧಿ ಗಳಾದವರು ಶುದ್ಧ ಹಸ್ತರಾಗಿರಬೇಕು, ನಾವು ಪ್ರಾಮಾಣಿಕ ವಾಗಿ ಮತ್ತುಸರಿಯಾಗಿ ಕೆಲಸ ಮಾಡಿದ್ದರೆ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧರಾಗಿರಬೇಕು. ಅದನ್ನು ಬಿಟ್ಟು ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ.
ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು ಗೌರವ ಉಳಿಸುತ್ತವೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ಸಿಬಿಐ ದಾಳಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಸಿಬಿಐಯವರು ನಮ್ಮ ಮನೆಯಲ್ಲಿದ್ದ ಪ್ಯಾಂಟ್, ಶರ್ಟ್, ಸೀರೆ, ಪಂಚೆ ಎಲ್ಲಾ ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ನಾನು ಎಂದಿಗೂ ತಪ್ಪು ಮಾಡಿಲ್ಲ, ರಾಜಕಾರಣದ ಕುತಂತ್ರಕ್ಕೆ ಬಗ್ಗಲ್ಲ, ಒತ್ತಡಕ್ಕೆ ಹೆದರುವುದಿಲ್ಲ. ನನ್ನ ಮನಸ್ಸಿಗೆ ಆಗಿರುವ ಗಾಯ, ಅದರ ತೀವ್ರತೆ, ಅದರಿಂದಾಗುವ ನೋವು ನನಗೆ ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರೆ ಸಿಬಿಐ, ಇಡಿ, ಐಟಿಯವರು ಬಿಜೆಪಿ ಬಾಗಿಲು ಕಾಯುವ ನಾಯಿಗಳು ಎಂದರು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್.
ಚುನಾವಣೆಯ ಘೋಷಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರಿಗೆ ಸಂಬಂಧಪಟ್ಟಂತೆ ನೀಡಿದ
ಹೇಳಿಕೆಯ ಬಗ್ಗೆ ಎಚ್.ಡಿ. ಕುಮಾರಸ್ವಾಮಿಯವರು ಪ್ರತಿಕ್ರಿಯಿಸುತ್ತಾ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಒಕ್ಕಲಿಗ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಇವರೇನು ಜಾತಿ ರಕ್ಷಕರೇ? ಹಿಂದೆ ಜಾತಿ ಮೇಲೆ ದಬ್ಬಾಳಿಕೆಯಾದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? ಈಗ ಜಾತಿಯವರೆಲ್ಲ ಒಂದಾಗಬೇಕು, ನಮ್ಮವರಿಗೆ ತೊಂದರೆಯಾಗುತ್ತಿದೆ ಎನ್ನುವುದೆಷ್ಟು ಸರಿ?’ ಎಂದು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಡಿ.ಕೆ.ಶಿವಕುಮಾರ್ ‘ನನಗೆ ಕಾಂಗ್ರೆಸ್ ಪಕ್ಷವೇ ಜಾತಿ. ಅವರು ಸಮುದಾಯದ ಬಗ್ಗೆ ಯಾಕೆ ಪ್ರಸ್ತಾಪಿಸುತ್ತಾರೋ ಗೊತ್ತಿಲ್ಲ, ಅವರು ಏನು ಬೇಕಾದರೂ ಮಾತಾಡಲಿ’ ಎಂದರು. ಬಿಜೆಪಿಯ ಸಿ.ಟಿ. ರವಿಯವರು ‘ಡಿಕೆಶಿಯವರು ಹಾಳೂರಿನಲ್ಲಿ ಉಳಿದ ಗೌಡನಿದ್ದಂತೆ. ಇವರು ಚುನಾವಣೆ ಸಂದರ್ಭದಲ್ಲಿ ಗೌಡ ಜಾತಿಯನ್ನು ಎಳೆದು ತರುತ್ತಿದ್ದಾರೆ’ ಎಂದರು.

ದಿವಂಗತ ಡಿ.ಕೆ. ರವಿಯವರ ಹೆಸರು ಬಳಸಿಕೊಂಡು ರಾಜಕೀಯ ಮಾಡುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ರಾಜರಾಜೇ ಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಉದ್ದೇಶಿಸಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮಹಿಳಾ ನಾಯಕಿಯರ ಪೈಕಿ ಮಾಜಿ ಸಚಿವೆ ಉಮಾಶ್ರೀ, ‘ಕುಸುಮಾ ಅವರು ಡಿ.ಕೆ. ರವಿಯ ವರನ್ನು ಅಧಿಕೃತವಾಗಿ ಸಪ್ತಪದಿ ತುಳಿದು ಮದುವೆಯಾದವರು. ಅವರ ಗಂಡನ ಹೆಸರನ್ನು ಬಳಕೆ ಮಾಡಬಾರದು ಎಂದು ಹೇಳಲು ಶೋಭಾ ಯಾರು? ಶೋಭಾ ಅವರಿಗೆ ತಮ್ಮ ತಂದೆಯನ್ನು ಕಳೆದುಕೊಂಡ ನೋವಿನ ಬಗ್ಗೆ ಅರಿರಬಹುದು, ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಅವರ ನೋವು ಇವರಿಗೆ ಅರ್ಥವಾಗುವುದಿಲ್ಲ’ ಎಂದು ಟೀಕಿಸಿದರು.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ನೀತಿ ಸಂಹಿತೆಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮತ್ತು
ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ಸಾಕಷ್ಟು ಆರೋಪ, ಪ್ರತ್ಯಾರೋಪ, ಸಮರ್ಥನೆಯೂ ನಡೆಯಿತು.
ಪ್ರಚಾರದಲ್ಲಿ ಪಾಲ್ಗೊಂಡ ಡಿಸಿಎಂ ಅಶ್ವತ್ಥ ನಾರಾಯಣ, ‘ಬಿಜೆಪಿಗೆ ಸೇರಲು ಮುನಿರತ್ನ ಒಂದು ರುಪಾಯಿನೂ ಪಡೆದಿಲ್ಲ. ಅವರನ್ನು ಪಕ್ಷದಿಂದ ಯಾರು ಕಳುಹಿಸಿದರು ಎನ್ನುವುದನ್ನು ಡಿಕೆಶಿ ಮತ್ತು ಸಿದ್ಧರಾಮಯ್ಯನವರು ಪ್ರಮಾಣ ಮಾಡಿ ಹೇಳಲಿ. ಡಿಕೆಶಿ ನಿಜವಾದ ಮೀರ್ ಸಾದಿಕ್’ ಎಂದು ಹೇಳುತ್ತಾ ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಸರಕಾರದ ಪತನದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದ್ದು ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಗೂಂಡಾಗಿರಿ, ಕುಟುಂಬ ರಾಜಕಾರಣದಿಂದ ಜನ ಬೇಸೆತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಕನಕಪುರ ಬಂಡೆ ಛಿದ್ರವಾಗಲಿದೆ, ಹುಲಿಯಾ ಕಾಡಿಗೆ ಹೋಗುತ್ತೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ‘ಕಟೀಲ್‌ರನ್ನು ಒಂದಷ್ಟು ದಿನ ಪಕ್ಷದ ಕಚೇರಿ ಯಲ್ಲಿ ಕಸ ಗುಡಿಸಲು ಹೇಳಿ. ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ
ಕಟೀಲ್ ಒಬ್ಬ ಕಾಡು ಮನುಷ್ಯ, ನಾಗರಿಕ ಸಮಾಜದಲ್ಲಿ ಇರಬಾರದು, ನಾಡಿನ ಜನರ ಹಿತದೃಷ್ಟಿಯಿಂದ ಅವರನ್ನು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಡಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ‘ಕಾಡು ಪ್ರಾಣಿಗಿಂತ ಕಾಡು ಮನುಷ್ಯನೇ ವಾಸಿ, ಕಾಡು ಮನುಷ್ಯ ಯಾರಿಗೂ ಹಾನಿಯುಂಟು ಮಾಡುವುದಿಲ್ಲ. ಹೀಗಾಗಿ ಕಾಡು ಪ್ರಾಣಿಯನ್ನು ಕಾಡಿಗೆ ಅಟ್ಟಬೇಕು’ ಎಂದರು. ಸಿದ್ಧರಾಮಯ್ಯನವರ ಕಾಡು ಮನುಷ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ‘ಸಿದ್ಧರಾಮಯ್ಯ ಅವರು ಕಟೀಲ್ ಬಗ್ಗೆ ಬಳಸಿದ ಭಾಷೆ ಒಪ್ಪುವಂತದಲ್ಲ. ಅದು ಕಾಡಿನ ಜನರಿಗೆ ಮಾಡಿರುವಂಥ ಅವಮಾನವಾಗಿದೆ. ಸಿದ್ಧರಾಮಯ್ಯ ಆಸ್ಥಾನ ವಿಧೂಷಕನಂತೆ ವರ್ತಿಸುವುದು ಬಿಟ್ಟು ರಾಜಕೀಯ ಮುತ್ಸದ್ಧಿಯಂತೆ ವರ್ತಿಸಬೇಕು’ ಎಂದರು.

ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ‘ಬಂಡೆ ಪುಡಿಯಾಗಿ ಜಲ್ಲಿ ಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡು ಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಿಸಲು ಸಾಧ್ಯ. ಹೀಗಾಗಿ ನಾನು ಕೇವಲ ಬಂಡೆ ಕಲ್ಲಾಗಿ ಉಳಿಯಲು ಇಚ್ಛಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿ ಕಲ್ಲಾಗುವ ಆಸೆ’ ಎಂದರು.

ಚುನಾವಣಾ ಪ್ರಚಾರದ ನಡುವೆ ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಮಾತಾಡಿದ ಸಿದ್ಧರಾಮಯ್ಯ ‘ನಾನು ಮತ್ತೆ ಮುಖ್ಯ ಮಂತ್ರಿಯಾದರೆ ಅನ್ನಭಾಗ್ಯ ಫಲಾನುಭವಿಗಳಿಗೆ ೧೦ ಕೆ.ಜಿ ಅಕ್ಕಿ ನೀಡುತ್ತೇನೆ’ ಎಂದರು. ಅಲ್ಲದೇ ಉಪಚುನಾವಣೆ ಮುಗಿದ ಮೇಲೆ ಬಿಎಸ್‌ವೈಯವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುತ್ತಾರೆ. ಈ ಬಗ್ಗೆ ನನಗೆ ದೆಹಲಿ ಮೂಲಗಳಿಂದ ನಿಖರ ಮಾಹಿತಿಯಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ‘ಚುನಾವಣೆ ಮುಗಿದ ಬಳಿಕ ಸಿದ್ಧರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ’ ಎಂದಿತ್ತು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆ.ಪಿ. ಪಾರ್ಕ್‌ನಲ್ಲಿ ಸಿದ್ಧರಾಮಯ್ಯನವರ ರೋಡ್‌ಶೋ ಸಂದರ್ಭದಲ್ಲಿ ಕಾಂಗ್ರೆಸ್
ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮರಿ ನಡೆದು ಹೋಯಿತು. ಇದು ಪಕ್ಷಗಳ ನಡುವೆ ದೊಡ್ಡ ಮಟ್ಟದ ಆರೋಪ, ಪ್ರತ್ಯಾರೋಪ, ವಾಕ್ಸಮರಕ್ಕೆ ಕಾರಣವಾಯಿತು. ಇನ್ನು ರೈತ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಕೇಂದ್ರ ಸಚಿವ ಡಿ. ಸದಾನಂದ ಗೌಡ ಹೇಳಿದರೆ, ಇದಕ್ಕೆ ಬಿಜೆಪಿಯವರೇ ಕಾರಣ ಎಂದು ಸಿದ್ಧರಾಮಯ್ಯ ಹೇಳಿದರು.

ಚುನಾವಣಾ ಪ್ರಚಾರ ಕಣಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಯವರು ‘ನಾನು ಒಬ್ಬ ನಟ, ಮುನಿರತ್ನ ನಿರ್ಮಾಪಕ ರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ನನ್ನ ಹಾಗೂ ಅವರ ಸಂಬಂಧ ಮುಗಿದಿದೆ’ ಎಂದರು. ಈ ಮಧ್ಯೆ 2010ರಿಂದ ಡಿಎಂಕೆ ಮತ್ತು ೨೦೧೪ ರಿಂದ ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಮತ್ತು ನರೇಂದ್ರ ಮೋದಿಗೆ ವಾಚಮಾಗೋಚರ ಟೀಕಿಸುತ್ತಿದ್ದ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬಹುಭಾಷಾ ನಟಿ ತಮಿಳುನಾಡಿನ ಖುಷ್ಬೂ ಸುಂದರ್ ರಾಜರಾಜೇಶ್ವರಿ ನಗರ ಕ್ಷೇತ್ರದ ತಮಿಳು ಮತದಾರರನ್ನು ಸೆಳೆಯಲು ಪ್ರಚಾರಕ್ಕೆ ಬಂದರು. ಬಳಿಕ ದರ್ಶನ್, ಅಮೂಲ್ಯ, ತಾರಾ, ರಾಕ್‌ಲೈನ್ ವೆಂಕಟೇಶ್ ಮುಂತಾದ ಸಿನಿಮಾ ತಾರೆಯರು ಬಿಜೆಪಿ ಪರ ಮತಯಾಚಿಸಿದರು.

ಇನ್ನು ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚಿಸಿದ ಎಚ್.ಡಿ. ಕುಮಾರಸ್ವಾಮಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮಾತಾಡಿ, ‘ಮೈತ್ರಿ ಸರಕಾರದಲ್ಲಿ ತಾನು ಜಾರಿಗೊಳಿಸಿದ್ದ ಕಾಂಪಿಟ್ ವಿತ್ ಚೀನಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೈಜಾಕ್
ಮಾಡಿ ಅವರ ಸ್ವಂತ ಯೋಜನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಮತ್ತು ಈಗ ಅದನ್ನು ಆತ್ಮನಿರ್ಭರ ಭಾರತ ಎಂದು ಮೋದಿ ಹೇಳುತ್ತಿದ್ದಾರೆ’ ಎಂದು ಟೀಕಿಸಿದರೆ, ಶಿರಾದಲ್ಲಿ ಮಾತಾಡಿ ‘ನನಗೆ ವಿಷ ಕೊಡುತ್ತಿರೋ ಇಲ್ಲ ನಿಮ್ಮ ಕೈಯಿಂದ ಹಾಲು ಕೊಡು ತ್ತಿರೋ? ಶಿರಾ ಕ್ಷೇತ್ರದ ಜನತೆ ತೀರ್ಮಾನ ಮಾಡಿ’ ಎಂದು ಕೇಳಿಕೊಂಡರು.

ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ವಯಸ್ಸಾಗಿದ್ದು ದೇಹಕ್ಕೆ ಹೊರತು ರಾಜಕಾರಣದ ಉತ್ಸಾಹಕ್ಕಲ್ಲ ಎಂಬುದನ್ನು ನಿರೂಪಿಸಿದರು. ಸಚಿವ ಆರ್. ಅಶೋಕ್ ಚುನಾವಣಾ ಪ್ರಚಾರದಲ್ಲಿ,
‘ಡಿಕೆಶಿಯವರು ಮುಖ್ಯಮಂತ್ರಿಯಾಗುವ ಕನಸು ತಿರುಕನ ಕನಸು. ಆಗ ಜೋಡೆತ್ತುಗಳಾಗಿದ್ದ ಡಿಕೆಶಿ ಮತ್ತು ಕುಮಾರಣ್ಣನವರು ಈಗ ಕುಂಟೆತ್ತುಗಳಾಗಿದ್ದು, ಅದರ ಕೊಂಬು ಮುರಿದಿದೆ’ ಎಂದು ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟರು. ಶಿರಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಮುದಿ ಎತ್ತು ಎಂದು ಬಿಜೆಪಿಯವರು ಮೂದಲಿಸಿದರೆ, ಯಡಿಯೂರಪ್ಪ ಮತ್ತು ದೇವೇಗೌಡರು ಎಳಸು ಎತ್ತುಗಳೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ನನ್ನ ರಕ್ತ, ಉಸಿರು ಮತ್ತು ನನ್ನ ತಾಯಿ ಎಂದು ಹೇಳುತ್ತಿದ್ದ ಮುನಿರತ್ನ ಹಣ ಪಡೆದು ಬಿಜೆಪಿ ಸೇರಿಕೊಂಡರು ಮತ್ತು ಅವರು ತಾಯಿಗೆ ಮೋಸ ಮಾಡಿದರು ಎಂದು ಕಾಂಗ್ರೆಸ್ ಆರೋಪಿಸಿದರೆ ‘25 ವರ್ಷದ ಹಿಂದೆ ಮೃತರಾದ ನನ್ನ ತಾಯಿಯನ್ನು ಎಲ್ಲಿಂದ ಕರೆದುಕೊಂಡು ಬರಲಿ. ಅಲ್ಲದೇ ನಾನು ಬಿಜೆಪಿಯವರಿಂದ ಹಣ ಪಡೆದಿದ್ದೇ ಆದರೆ ಮಂಜುನಾಥನ ಮುಂದೆ ಆಣೆ ಮಾಡಿ ಹೇಳಲಿ’ ಎನ್ನುತ್ತಾ ಮುನಿರತ್ನ ಕಣ್ಣೀರು ಸುರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ‘ಮುನಿರತ್ನ ಸಿನಿಮಾ
ನಿರ್ಮಾಪಕರು. ಅವರಿಗೆ ನಟನೆ ಚೆನ್ನಾಗಿ ಗೊತ್ತಿದೆ’ ಎಂದು ಮೂದಲಿಸಿದರು. ಇದರ ಬೆನ್ನಲ್ಲೇ ‘ನಾನು ಕಳೆದ 5 ವರ್ಷಗಳ
ಹಿಂದೆ ಕಳೆದುಕೊಂಡಿರುವ ಅರಿಶಿನ – ಕುಂಕುಮವನ್ನು ಮತದ ರೂಪದಲ್ಲಿ ಭಿಕ್ಷೆಯಾಗಿ ನೀಡಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಟ್ಟರು.

ಇದರ ಮಧ್ಯೆ ‘ಬಿಜೆಪಿಯವರದ್ದು ನಾಯಿಪಾಡು’ ಎಂಬ ಕಾಂಗ್ರೆಸ್‌ನ ನಿಂದನೆಗೆ ಪ್ರತಿಯಾಗಿ ‘ವರುಣಾ ಕ್ಷೇತ್ರ ಬಿಟ್ಟು ಬಾದಾಮಿ
ಕ್ಷೇತ್ರಕ್ಕೆ ಓಡಿದವರದ್ದು ಯಾವ ಪಾಡು’ ಎಂದು ಸಿದ್ಧರಾಮಯ್ಯನವರನ್ನು ಎಚ್. ವಿಶ್ವನಾಥ್ ಪ್ರಶ್ನಿಸಿದರು. ಇಷ್ಟರಲ್ಲೇ ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಾ, ಮುನಿರತ್ನ ಅವರು ಮುಂದೆ ಮಂತ್ರಿಯಾಗಲಿದ್ದಾರೆ ಎಂದು ಆಶ್ವಾಸನೆ ನೀಡಿದರು.

ಇನ್ನು ಮತದಾರ ಪ್ರಭುಗಳು ಬಹಳ ಜಾಣ್ಮೆ ಮೆರೆದರು. ಪ್ರಾಮಾಣಿಕ ಮತ್ತು ಸ್ವಾಭಿಮಾನಿಗಳನ್ನು ಹೊರತುಪಡಿಸಿ ಉಳಿದ ಮತದಾರರು ಒಂದು ಓಟಿಗೆ 500 ರಿಂದ 5000 ರುಪಾಯಿಗಳಿಗೆ ಮಾರಾಟವಾಗಿ ಕುರುಡು ಕಾಂಚಾಣ ಇಣುಕಿದಲ್ಲೆಲ್ಲಾ ಅಪ್ಪಿ ಕೊಂಡರು. ಚುನಾವಣಾ ಪ್ರಚಾರ ಮುಗಿಯಿತು !