Monday, 18th November 2024

Pralhad Joshi: ಭಯೋತ್ಪಾದಕ ಪಕ್ಷ ಕಾಂಗ್ರೆಸ್ ಎನ್ನಬೇಕಿದ್ದ ಖರ್ಗೆ ಬಾಯ್ತಪ್ಪಿ ಬಿಜೆಪಿ ಎಂದಿದ್ದಾರೆ: ಜೋಶಿ

Pralhad Joshi

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು “ಕಾಂಗ್ರೆಸ್” ಎನ್ನುವ ಬದಲಾಗಿ ಬಾಯ್ತಪ್ಪಿ ಬಿಜೆಪಿ ಭಯೋತ್ಪಾದಕರ ಪಕ್ಷ ಎಂದಿದ್ದಾರೆ! ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿರುಗೇಟು ನೀಡಿದರು. ಹುಬ್ಬಳ್ಳಿಯಲ್ಲಿ ಇಂದು ರಾತ್ರಿ ಮಾಧ್ಯಮದವರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

ಖರ್ಗೆ ಅವರು ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದಿದ್ದಾರೆ. ಆದರೆ, ವಾಸ್ತವವಾಗಿ ಅವರು ತಮ್ಮ ಪಕ್ಷದಲ್ಲಿ ನಡೆಯುತ್ತಿರುವುದನ್ನು ಹೇಳಿರಬೇಕು ಎಂದು ಜೋಶಿ ತಿರುಗೇಟು ನೀಡಿದರು.

ಬಾಟ್ಲಾ ಹೌಸ್‌ ಘಟನೆಯಲ್ಲಿ ಭಯೋತ್ಪಾದಕ ಹತರಾಗಿದ್ದಕ್ಕೆ ಖುದ್ದು ಸೋನಿಯಾ ಗಾಂಧಿ ಅವರೇ ಕಣ್ಣೀರು ಹಾಕಿದ್ದರು. ಆದರೆ, ಪೋಲಿಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಮೃತಪಟ್ಟರೆ ಕನಿಷ್ಠ ಸಿಂಪತಿ ಸಹ ವ್ಯಕ್ತಪಡಿಸಲಿಲ್ಲ ಎಂದು ಟೀಕಿಸಿದರು.

ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್

ಇನ್ನು, ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ತೋರಿದ್ದೂ ಕಾಂಗ್ರೆಸ್ ಎಂದ ಅವರು, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಇರಿಸಿಕೊಂಡು ಎಂಥೆಂಥ ಭಯೋತ್ಪಾದಕರನ್ನು ಬೆಳೆಸಿದ್ದೀರಿ ಎಂಬುದು ಇಡೀ ದೇಶಕ್ಕೇ ಗೊತ್ತಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ. ಹರಿಪ್ರಸಾದ್: ಜೋಶಿ ತಿರುಗೇಟು

2004ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ (POTA) ರದ್ದುಗೊಳಿಸಿದ್ದು ಕಾಂಗ್ರೆಸ್, ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಇದೆಲ್ಲವನ್ನೂ ಬಹುಶಃ ಖರ್ಗೆ ಅವರು ಮರೆತಿರಬೇಕು ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎ (NIA) ತನಿಖೆಯಿಂದ ಹಿಂಪಡೆಯುವ ಮೂಲಕ ಕಾಂಗ್ರೆಸ್ ಪಾರ್ಟಿಯೇ ಇಸ್ಲಾಮಿಕ್ ಭಯೋತ್ಪಾದಕರ ಪಾರ್ಟಿ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದರು.

ಭಯೋತ್ಪಾದನೆ ನಿಗ್ರಹಿಸಿದ್ದೇ ಬಿಜೆಪಿ ಸರ್ಕಾರ

ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸಿದ್ದೇ ಬಿಜೆಪಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ ಎಂದು ಜೋಶಿ ಪ್ರತಿಪಾದಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರಿ ಯುವಕರ ಕೈಯಲ್ಲಿ ಕಲ್ಲುಗಳಿದ್ದವು. ಆದರೆ ಇಂದು ಅವರಿಗೆ ಉದ್ಯೋಗವಿದೆ. ಒಬ್ಬ ಹಿರಿಯ ನಾಯಕರಾಗಿ ಖರ್ಗೆಯವರಿಗೆ ತಾವೇನು ಹೇಳುತ್ತಿರುವೆ ಎಂಬುದರ ಮೇಲೆ ನಿಗಾ ಇರಬೇಕು ಎಂದು ಪ್ರಲ್ಹಾದ್‌ ಜೋಶಿ ಟಾಂಗ್ ಕೊಟ್ಟರು.

ತಮ್ಮ ನೇತೃತ್ವಕ್ಕೂ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಾರಥ್ಯದಲ್ಲಿ ಒಂದು ಕಾಲದಲ್ಲಿ 400 ಸ್ಥಾನಗಳನ್ನು ಗೆದ್ದು ಬೀಗಿದ ತಮ್ಮ ಪಕ್ಷ 25 ರಾಜ್ಯಗಳಲ್ಲಿ ಆಡಳಿತದಲ್ಲಿ. ಆದರೀಗ ವೋಟ್ ಬ್ಯಾಂಕ್‌ಗಾಗಿ ಮತಾಂಧ ಶಕ್ತಿಗಳನ್ನು ಬೆಂಬಲಿಸಿ ಯಾವ ಸ್ಥಿತಿಗೆ ಬಂದಿದೆ? 100 ಕ್ಷೇತ್ರಗಳಲ್ಲೂ ಗೆಲ್ಲಲಾಗಿಲ್ಲ. ಯಾವುದೇ ರಾಜ್ಯಗಳಲ್ಲಿ ನೋಡಿದರೂ ಪ್ರಾದೇಶಿಕ ಪಕ್ಷಗಳ ಕೈ ಹಿಡಿದುಕೊಂಡು ನಡೆಯುವಂತಾಗಿದೆ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಸರ್ಕಾರದಿಂದ ಆರ್ಥಿಕ ನಿರ್ವಹಣೆ ವೈಫಲ್ಯ; ಪ್ರಲ್ಹಾದ್‌ ಜೋಶಿ

ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ: ದೇಶದಲ್ಲಿ ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ. ಕಾಂಗ್ರೆಸ್ ಯಾವತ್ತೂ ದಲಿತ ವಿರೋಧಿಯಾಗೇ ವರ್ತಿಸುತ್ತಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಇಂಥ ಸ್ಥಿತಿಗೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.