ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖಂಡ ಬಾಬಾ ಸಿದ್ದಿಕಿ (Baba Siddique) ಅವರನ್ನು ಮುಂಬೈನಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹೊಟ್ಟೆ ಮತ್ತು ಎದೆಗೆ ಗುಂಡು ತಗುಲಿದ ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿದ್ದೀಕ್ ಅವರನ್ನು ಅವರ ಕಚೇರಿಯ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಎನ್ಸಿಪಿ ನಾಯಕನ ಕಚೇರಿಯ ಸಮೀಪವಿರುವ ರಾಮ ಮಂದಿರದ ಬಳಿ ರಾತ್ರಿ 9:15 ರಿಂದ 9:20 ರ ನಡುವೆ ಈ ಘಟನೆ ನಡೆದಿದೆ. ಸಿದ್ದೀಕ್ ಪಟಾಕಿ ಸಿಡಿಸುತ್ತಿದ್ದಾಗ, ಮೂವರು ದಾಳಿಕೋರರು ಮುಖಗಳನ್ನು ಕರವಸ್ತ್ರದಿಂದ ಮುಚ್ಚಿಕೊಂಡು ವಾಹನದಿಂದ ಹೊರಬಂದು . ಯಾವುದೇ ಮುನ್ಸೂಚನೆಯಿಲ್ಲದೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಒಂದು ಸಿದ್ದಿಕಿಯ ಎದೆಗೆ ಬಡಿದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು.
ದಾಳಿಯಾದ ತಕ್ಷಣ ಅಲ್ಲಿದ್ದವರು ಸಿದ್ದೀಕ್ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬರು ಉತ್ತರ ಪ್ರದೇಶ ಮೂಲದವರು ಮತ್ತು ಇನ್ನೊಬ್ಬರು ಹರಿಯಾಣ ಮೂಲದವರು. ಮೂರನೇ ಶಂಕಿತ ಇನ್ನೂ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಎನ್ಸಿಪಿ ನಾಯಕನ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರೂ ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ: GN Saibaba : ಮಾವೋವಾದಿ ನಂಟು ಪ್ರಕರಣದಿಂದ ಖುಲಾಸೆಗೊಂಡಿದ್ದ ದೆಹಲಿ ವಿವಿ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ನಿಧನ
ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಮತ್ತು ಅವರು ಮಧ್ಯರಾತ್ರಿ ಮುಂಬೈಗೆ ಮರಳಲಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.