Monday, 25th November 2024

Baba Siddique : ಗುಂಡಿನ ದಾಳಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಯಾರು? ಇಲ್ಲಿದೆ ಎಲ್ಲ ವಿವರ

Baba Siddique

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖಂಡ ಬಾಬಾ ಸಿದ್ದಿಕಿ (Baba Siddique) ಅವರನ್ನು ಶನಿವಾರ ಮುಂಬೈನಲ್ಲಿ ಹತ್ಯೆ ಮಾಡಲಾಗಿದೆ. ಬಾಂದ್ರಾ ಪೂರ್ವದಲ್ಲಿ ಅವರು ತಮ್ಮ ಕಾರಿನೊಳಗೆ ಕುಳಿತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್‌ ವರದಿಗಳು ತಿಳಿಸಿವೆ. 65 ವರ್ಷದ ಸಿದ್ದಿಕಿ ಮಹಾರಾಷ್ಟ್ರದ ಪ್ರಮುಖ ಮುಸ್ಲಿಂ ರಾಜಕೀಯ ನಾಯಕರಾಗಿದ್ದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯಕ್ಕಿಂತ ಹೆಚ್ಚಾಗಿ, ಸಿದ್ದಿಕಿ ತಮ್ಮ ಸಾಮಾಜಿಕ ವರ್ಚಸ್ಸಿಗೆ ಹೆಸರುವಾಸಿಯಾಗಿದ್ದರು. ಪ್ರತಿವರ್ಷ ಭರ್ಜರಿ ಇಫ್ತಾರ್ ಕೂಟಗಳನ್ನು ಆಯೋಜಿಸುವ ಮೂಲಕವೇ ಪ್ರಖ್ಯಾತಿ ಪಡೆದಿದ್ದಾರೆ.

ಬಾಬಾ ಸಿದ್ದೀಕಿ ಯಾರು?

ಸೆಪ್ಟೆಂಬರ್ 13, 1959 ರಂದು ಬಿಹಾರ ಪಾಟ್ನಾದಲ್ಲಿ ಜನಿಸಿದ ಬಾಬಾ ಸಿದ್ದಿಕಿ ಮುಂಬೈನಲ್ಲಿ ಬೆಳೆದವರು. 1977ರಲ್ಲಿ ಹದಿಹರೆಯದವರಾಗಿದ್ದಾಗ ಕಾಂಗ್ರೆಸ್ ಸೇರಿಕೊಂಡಿದ್ದರು. ಸ್ಥಳೀಯ ಮತದಾರರೊಂದಿಗೆ ಬಲವಾದ ಸಂಪರ್ಕದಿಂದಾಗಿ ಅವರು ಶೀಘ್ರವಾಗಿ ರಾಜಕೀಯ ಯಶಸ್ಸು ಗಳಿಸಿದ್ದರು.

ಬಾಬಾ ಸಿದ್ದೀಕ್ 1980 ರಲ್ಲಿ ಬಾಂದ್ರಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. ಮುಂದಿನ ಎರಡು ವರ್ಷಗಳಲ್ಲಿ ಅದರ ಮುಖ್ಯಸ್ಥರಾಗಿ ಆಯ್ಕೆಯಾದರು. 1988 ರಲ್ಲಿ, ಅವರು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷರಾದರು ಮತ್ತು 1992 ರಲ್ಲಿ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದರು.

1999ರಲ್ಲಿ, ಸಿದ್ದೀಕ್ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಯ ಶಾಸಕ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅವರ ತಳಮಟ್ಟದಲ್ಲಿ ಭಾರೀ ಬೆಂಬಲ ಮತ್ತು ನಾನಾ ಸಮುದಾಯಗಳಿಂದ ಮತದಾರರನ್ನು ಒಟ್ಟುಗೂಡಿಸುವ ಸಾಮರ್ಥ್ಯದ ಪರಿಣಾಮವಾಗಿ ಅವರಿಗೆ ಗೆಲವು ಸುಲಭವಾಗಿತ್ತು ಅವರು ಸತತ ಮೂರು ಬಾರಿ ಬಾಂದ್ರಾ ಪಶ್ಚಿಮವನ್ನು ಪ್ರತಿನಿಧಿಸಿದರು, 2014 ರವರೆಗೆ ಈ ಸ್ಥಾನವನ್ನು ಅಲಂಕರಿಸಿದ್ದರು.

ಶಾಸಕರಾಗಿದ್ದ ಅವಧಿಯಲ್ಲಿ, ಸಿದ್ದೀಕ್ ಅವರು ತಮ್ಮ ಕ್ಷೇತ್ರದ ಮೂಲಸೌಕರ್ಯಗಳನ್ನು ಸುಧಾರಿಸಲು, ಕೊಳೆಗೇರಿ ಪುನರ್ವಸತಿ, ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲು ವ್ಯಾಪಕವಾಗಿ ಕೆಲಸ ಮಾಡಿದರು. ಹೀಗಾಗಿ ಅವರಿಗೆ ಹೆಚ್ಚಿನ ಜನಬೆಂಬಲವಿತ್ತು.

ಬಾಬಾ ಸಿದ್ದೀಕ್ ಅವರ ಇಫ್ತಾರ್ ಕೂಟಗಳು

ಬಾಬಾ ಸಿದ್ದಿಕಿ ಅವರು ವಾರ್ಷಿಕ ಇಫ್ತಾರ್ ಕೂಟಗಳನ್ನು ಆಯೋಜಿಸಿದ್ದಕ್ಕಾಗಿ ವ್ಯಾಪಕವಾಗಿ ಜನಪ್ರಿಯತೆ ಪಡೆದುಕಂಡಿದ್ದರು. ಅವರ ರಾಜಕೀಯ ಜೀವನದ ಹೆಗ್ಗುರುತಾಯಿತು. ಈ ಕೂಟಗಳು ಸಾಂಸ್ಕೃತಿಕ ಸಾಮರಸ್ಯದ ದ್ಯೋತಕವಾಗಿದ್ದವು. ವಿವಿಧ ಪಕ್ಷಗಳ ರಾಜಕೀಯ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಅಲ್ಲಿ ಸೇರುತ್ತಿದ್ದರು.

ಇದನ್ನೂ ಓದಿ: GN Saibaba : ಮಾವೋವಾದಿ ನಂಟು ಪ್ರಕರಣದಿಂದ ಖುಲಾಸೆಗೊಂಡಿದ್ದ ದೆಹಲಿ ವಿವಿ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ನಿಧನ

ಶಾರುಖ್ ಮತ್ತು ಸಲ್ಮಾನ್ ನಡುವಿನ ಶೀತಲ ಸಮರ ಕೊನೆಗೊಂಡಿದ್ದು ಇದೇ ಇಫ್ತಾರ್‌ನಲ್ಲಿ. ಸೂಪರ್‌ಸ್ಟಾರ್‌ಗಳು ಪರಸ್ಪರ ಆತ್ಮೀಯ ಅಪ್ಪುಗೆಯ ಮೂಲಕ ಐದು ವರ್ಷಗಳ ‘ಶೀತಲ ಸಮರ’ವನ್ನು ಕೊನೆಗೊಳಿಸಿದ್ದರು. ಹೀಗಾಗಿ 2013 ರಲ್ಲಿ ಅವರು ಆಯೋಜಿಸಿದ್ದ ಇಫ್ತಾರ್ ಕೂಟವು ಚರ್ಚೆಯ ವಿಷಯವಾಯಿತು. ಇಬ್ಬರು ಖಾನ್ ಗಳ ನಡುವೆ ಶಾಂತಿ ಸ್ಥಾಪಿಸಲು ಮಧ್ಯಸ್ಥಿಕೆ ವಹಿಸಿದ ಕೀರ್ತಿ ಬಾಬಾ ಸಿದ್ದಿಕಿ ಅವರಿಗೆ ಸಲ್ಲುತ್ತದೆ.

ರಾಜಕೀಯ ಹಿನ್ನಡೆ

ಬಾಬಾ ಸಿದ್ದಿಕಿ ಮುಂಬೈ ರಾಜಕೀಯದಲ್ಲಿ ಪ್ರಮುಖ ಮುಖವಾಗಿದ್ದರೂ. 2014 ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಾಂದ್ರಾ ಪಶ್ಚಿಮ ಸ್ಥಾನ ಕಳೆದುಕೊಂಡರು. ಅದರು ದೊಡ್ಡ ಹಿನ್ನಡೆಯನ್ನು ಮಾಡಿತು. ಈ ಸೋಲಿನ ಹೊರತಾಗಿಯೂ, ಸಿದ್ದೀಕ್ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಕ್ಷದೊಳಗೆ ತೆರೆಮರೆಯಲ್ಲಿ ಕೆಲಸ ಮಾಡಿದರು. ಸಾಮಾಜಿಕ ಸೇವೆಯ ಮೂಲಕ ಪಾಲ್ಗೊಳ್ಳುತ್ತಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಬಾಬಾ ಸಿದ್ದಿಕಿ ಕಾಂಗ್ರೆಸ್ ತೊರೆದು ಎನ್‌ಸಿಪಿ ಅಜಿತ್ ಪವಾರ್ ಬಣಕ್ಕೆ ಸೇರಿದ್ದರು.