Wednesday, 23rd October 2024

Srivathsa joshi Column: ಆಕಳಿಕೆಯೆಂದರೆ ಬಾಯ್ತೆರೆದು ತಿಳಿಸಿದ ಪ್ರಾಮಾಣಿಕ ಅಭಿಪ್ರಾಯ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಳುಕು-ಅನುಮಾನಗಳಿಲ್ಲದೆ, ಯಾವುದೇ ಥರದ ಅಂಜಿಕೆ-ಅವಮಾನಗಳೂ ಇಲ್ಲದೆ, ಮೊದಲೇ ಹೇಳಿಬಿಡುತ್ತೇನೆ- ಇಂದಿನ ಈ ಅಂಕಣ ಬರಹವನ್ನು ಓದುತ್ತಿರುವಾಗಲೇ ಅಥವಾ ಓದಿ ಮುಗಿಸುವ ಹೊತ್ತಿಗೆ ನಿಮಗೆ ಆಕಳಿಕೆ ಬಂದಿರು ತ್ತದೆ! ಅಥವಾ, ಕನಿಷ್ಠಪಕ್ಷ ಹಾಗೆಂದು ಆರಂಭದಲ್ಲಿಯೇ ಪ್ರಾಮಾಣಿಕವಾಗಿ ಮತ್ತು ನಿಸ್ಸಂಕೋಚವಾಗಿ ಘೋಷಿಸಿದ ಹೆಗ್ಗಳಿಕೆ ಈ ಅಂಕಣ ಬರಹಕ್ಕೆ ಬರುತ್ತದೆ. ಬೇಕಿದ್ದರೆ ಇದನ್ನೊಂದು ಮುನ್ನೆಚ್ಚರಿಕೆ ಅಂತಲಾದರೂ ತಿಳಿದುಕೊಳ್ಳಿ ಅಥವಾ ಸಿಗರೇಟ್ ಪ್ಯಾಕ್ ಮೇಲೆ ಮುದ್ರಿಸಿರುವ ‘ಶಾಸನ ವಿಧಿಸಿದ ಎಚ್ಚರಿಕೆ’ ರೀತಿಯದೆಂದಾದರೂ ತಿಳಿದುಕೊಳ್ಳಿ. ‌

ಅಫ್ ಕೋರ್ಸ್, ಎಚ್ಚರಿಕೆ ಇದ್ದರೂ ಸಿಗರೇಟ್ ಸೇದುವವರಿಗೆ ಅದು ನಗಣ್ಯ. ಹಾಗೆಯೇ, ಆಕಳಿಕೆ ಬರಬಹುದು ಎಂದು ಎಚ್ಚರಿಸಿದ ಮೇಲೂ ಅಂಕಣವನ್ನು ಓದಿ ಮುಗಿಸುತ್ತೀರಾದರೆ ಅದು ನನ್ನ ಪುಣ್ಯ. ಹೇಗೂ ಇಂಗ್ಲಿಷ್‌ ನಲ್ಲೊಂದು ವಕ್ರತುಂಡೋಕ್ತಿ ಇದೆ, Yawning is an honest opinion openly expressed ಅಂತ. ಆಕಳಿಕೆಯೆಂದರೆ ಬಾಯ್ತೆರೆದು ತಿಳಿಸಿದ ಪ್ರಾಮಾಣಿಕ ಅಭಿಪ್ರಾಯ ಎಂದು ಅದರ ತಾತ್ಪರ್ಯ. ಅದೇ ಅರ್ಥದಲ್ಲಿ ನೀವು ಆಕಳಿಸಿ, ಪರವಾ ಇಲ್ಲ. ನಾನದನ್ನು ವಿನೀತ ಭಾವದಿಂದ ಕ್ರೀಡಾಸ್ಪೂರ್ತಿಯಿಂದಲೇ ಸ್ವೀಕರಿಸುತ್ತೇನೆಂದು ನಿಮಗೆ ಗೊತ್ತೇ ಇದೆ.

ದ್ರಾವಿಡ ಪ್ರಾಣಾಯಾಮದ ಪೀಠಿಕೆ ಸಾಕು. ಆಕಳಿಕೆ ಯಾರಿಗೆ ಬರುವುದಿಲ್ಲ ಹೇಳಿ? ಸೃಷ್ಟಿಕರ್ತ ಬ್ರಹ್ಮನೇ ಆಕಳಿಸಿದ ದಾಖಲೆಗಳು ಪುರಾಣಗಳಲ್ಲಿವೆ. ಬಹುಶಃ ಸೃಷ್ಟಿಕಾರ್ಯ ಮಾಡಿ ಮಾಡಿ ಮಾಡಿ ಮಾಡಿ… ಬೋರ್ ಹೊಡೆದು ಬ್ರಹ್ಮನೂ ಕೆಲವೊಮ್ಮೆ ಆಕಳಿಸುತ್ತಾನೆ. ಅಥವಾ ಬ್ರಹ್ಮನ ರಾಣಿ ಸರಸ್ವತಿಯೇನಾದರೂ ಟಿಪಿಕಲ್ ಹೆಂಡತಿ ಯಂತೆ ಗಂಡನ ಬಳಿ ಅನುದಿನವೂ ಬೋರ್‌ವೆಲ್ ಕೊರೆಯುವವಳಾದರೆ ಆ ಕಾರಣದಿಂದಲೂ ಬ್ರಹ್ಮನಿಗೆ ಆಕಳಿಕೆ ಬರುವು ದಿರಬಹುದು. ಯಾರಿಗೆ ಗೊತ್ತು, ಜಗತ್ತಿನಲ್ಲಿ ಹಲವಾರು ಬಡಪಾಯಿ ಗಂಡಂದಿರ ಪರಿಸ್ಥಿತಿಯಂತೆ ಬ್ರಹ್ಮನಿಗೂ ಬಾಯಿ ತೆರೆಯಲಿಕ್ಕೆ ಅದೊಂದೇ ಅವಕಾಶವೂ ಇರಬಹುದು.

ಕಾರಣಗಳೇನೇ ಇರಲಿ, ಬ್ರಹ್ಮನೇ ಆಕಳಿಸುತ್ತಾನಂತೆ ಅಂದಮೇಲೆ ನಮ್ಮ ನಿಮ್ಮ ಪಾಡೇನು ಅಲ್ಲವೇ? ಅಂದಹಾಗೆ ಬ್ರಹ್ಮ ಆಕಳಿಸಿದ ಪುರಾಣಕಥೆ ಯಾವುದು? ಸ್ವಲ್ಪ ತಾಳಿ. ಬ್ರಹ್ಮ ಆಕಳಿಸಿದ ಪುರಾಣಕಥೆ ಎಂದರೆ ಬೇರಾರದೋ ಕಥೆ ಕೇಳಿ ಬ್ರಹ್ಮ ಆಕಳಿಸಿದ್ದಲ್ಲ, ಬ್ರಹ್ಮನ ಆಕಳಿಕೆಯದೇ ಕಥೆ. ಅದನ್ನು ತಿಳಿಯಬೇಕಿದ್ದರೆ ಮೊದಲು ನಾವು ಬ್ರಹ್ಮನ
ದಿನಚರಿಯನ್ನು ಅರ್ಥಮಾಡಿಕೊಳ್ಳಬೇಕು. ಬ್ರಹ್ಮನ ‘ಒಂದು ದಿನ’ ಅಂದರೆ ಎಷ್ಟು ಮಾನವವರ್ಷಗಳು ಎಂದು ಯಾವಾಗಾದ್ರೂ ಲೆಕ್ಕಹಾಕಿದ್ದೀರಾ? ಇಲ್ಲವಾದರೆ ಈಗ ಅಂದಾಜು ಮಾಡಿಕೊಳ್ಳಿ. ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ- ಈ ನಾಲ್ಕು ಯುಗಗಳ ಒಂದು ಆವರ್ತನಕ್ಕೆ ಒಂದು ಮಹಾಯುಗ ಎಂದು ಹೆಸರು. ಕೃತಯುಗದ ಅವಧಿ 17 ಲಕ್ಷ 28 ಸಾವಿರ ವರ್ಷಗಳು. ತ್ರೇತಾಯುಗದ್ದು 12 ಲಕ್ಷ 96 ಸಾವಿರ ವರ್ಷಗಳು. ದ್ವಾಪರ ಯುಗ 8 ಲಕ್ಷ 64 ಸಾವಿರ ವರ್ಷಗಳು ಮತ್ತು ಕಲಿಯುಗದ ಅವಧಿ 4 ಲಕ್ಷ 32 ಸಾವಿರ ವರ್ಷಗಳು. ಇದಿಷ್ಟೂ ಸೇರಿ ಒಂದು ಮಹಾಯುಗ ಆಗುವುದು. ಇಂಥ 1008 ಮಹಾಯುಗಗಳೆಂದರೆ ಬ್ರಹ್ಮನಿಗೆ ಒಂದು ಹಗಲು. ಇದಕ್ಕೆ ಒಂದು ಕಲ್ಪ ಎಂದು ಹೆಸರು. ಇದನ್ನೇ 72 ಮಹಾಯುಗಗಳಿಗೆ ಒಂದು ಮನ್ವಂತರ, ಅಂಥ 14 ಮನ್ವಂತರಗಳು ಸೇರಿ ಒಂದು ಕಲ್ಪ ಎಂದು ಲೆಕ್ಕ ಮಾಡುವುದೂ ಇದೆ.

ಅಂತೂ ಬ್ರಹ್ಮನ ಒಂದು ಹಗಲೆಂದರೆ ಮಾನವಜಾತಿಗೆ ಕೋಟ್ಯಂತರ ವರ್ಷಗಳು. ಅಷ್ಟೇ ಅವಧಿಯ ರಾತ್ರಿಯೂ ಇರುತ್ತದೆ ಬ್ರಹ್ಮನಿಗೆ. ಅದನ್ನೂ ಸೇರಿಸಿದರೆ ಒಟ್ಟು ವರ್ಷಗಳ ಸಂಖ್ಯೆಯಲ್ಲಿ ಸೊನ್ನೆಗಳನ್ನು ಎಣಿಸುತ್ತಲೇ ನಮಗೆ ಆಕಳಿಕೆ ಬರಬಹುದು! ಒಮ್ಮೆ, ಒಂದು ಕಲ್ಪ ಮುಗಿಯುವ ಹೊತ್ತಿಗೆ ಆವತ್ತಿನ ದಿನವಿಡೀ ದುಡಿದು ದಣಿದ ಬ್ರಹ್ಮನಿಗೆ ನಿದ್ದೆಯ ಮಂಪರು ಬಂತಂತೆ (ಕಚೇರಿಯಲ್ಲಿ ಕೆಲಸದ ವೇಳೆ ನಿದ್ದೆ ಮಾಡಿ ಹಗಲುಗನಸು ಕಾಣುವ ಕೆಲಸಗಳ್ಳರ ಪೈಕಿಯವನಲ್ಲ ಬ್ರಹ್ಮ). ಕಣ್ಣುರೆಪ್ಪೆಗಳು ಸೇರಿಕೊಂಡವು. ಮಾತ್ರವಲ್ಲ, ಅವನಿಗೇ ಅರಿವಿಲ್ಲದಂತೆ ಲೈಟಾಗಿ ಒಂದು ಆಕಳಿಕೆಯೂ ಬಂತು! ಅಷ್ಟೇ ಆಗಿದ್ದರೆ ಅದೇನೂ ದೊಡ್ಡ ಸಂಗತಿಯಾಗುತ್ತಿರಲಿಲ್ಲ, ಬ್ರಹ್ಮನ ಆ ಆಕಳಿಕೆಯಿಂದಾಗಿ ಆದ ಪ್ರಮಾದವೇನೆಂದರೆ ಹಾಗೆ ತೆರೆದ ಬಾಯಿಯಿಂದ ವೇದಗಳು ಜಾರಿಹೋದವು. ಅವೇನು ಹಲ್ಲುಗಳ ಸೆಟ್ಟಾ ಹಾಗೆ ಬಾಯಿಯಿಂದ ಜಾರಿಬೀಳಲಿಕ್ಕೆ ಅಂತ ನನ್ನನ್ನು ಕೇಳಬೇಡಿ ಮತ್ತೆ! ಇವೆಲ್ಲ ಪುರಾಣಕಥೆಗಳು, ಹಾಗೆಲ್ಲ ಪ್ರಶ್ನೆ ಮಾಡುವುದು ಒಳ್ಳೆಯದಲ್ಲ. ಇರಲಿ, ಬ್ರಹ್ಮನ ಬಾಯಿಯಿಂದ ವೇದಗಳು ಜಾರುವುದನ್ನೇ ಹೊಂಚುಹಾಕುತ್ತ ಕುಳಿತಿದ್ದ ಹಯಗ್ರೀವನೆಂಬ ರಾಕ್ಷಸನು ಆ ವೇದಗಳನ್ನು ಅಪಹರಿಸಿದನು. ಆಮೇಲೆ ಮಹಾವಿಷ್ಣು ಮತ್ಸ್ಯಾವತಾ ರದಲ್ಲಿ ಹುಟ್ಟಿ ಆ ಅಸುರನನ್ನು ಸದೆಬಡಿದನು. ವೇದಗಳನ್ನು ಬ್ರಹ್ಮನಿಗೆ ಒಪ್ಪಿಸಿದನು. ಇದೇ ಬ್ರಹ್ಮನ ಆಕಳಿಕೆಯ ಕಥೆ. ಕೇವಲ ಒಂದು ಆಕಳಿಕೆಯಿಂದಾದ ಆಕಸ್ಮಿಕ ಎಷ್ಟೊಂದು ಗಂಭೀರವಾಯ್ತು ನೋಡಿ!

ಆದರೆ ಬ್ರಹ್ಮ ಒಂದೇ ಸಲ ಆಕಳಿಸಿದ್ದೇನಲ್ಲ. ಬ್ರಹ್ಮನ ಇನ್ನೊಂದು ಆಕಳಿಕೆಯ ಉಲ್ಲೇಖ ಬರುವುದು ಗಣೇಶಪುರಾ
ಣದಲ್ಲಿ. ಈ ಸಲ ಬ್ರಹ್ಮ ಆಕಳಿಸಿದಾಗ ಒಂದು ಆಸುರೀಶಕ್ತಿಯ ಸೃಷ್ಟಿಯಾಯ್ತು. ಆಕರ್ಷಕವಾದ ತೇಜಸ್ಸು ಮತ್ತು ಸುಂದರ ಮೈಮಾಟವಿದ್ದ ಬಾಲಕನೊಬ್ಬ ಜನ್ಮತಾಳಿದನು. ಆ ಅಸುರ ಬಾಲಕನಿಗೆ ಬ್ರಹ್ಮನೇ ‘ಸಿಂದೂರ’ ಎಂದು ಮುದ್ದಾದ ಹೆಸರಿಟ್ಟನು. ಅದೃಶ್ಯನಾಗಿರಬಲ್ಲ ಮತ್ತು ಎಲ್ಲಿ ಬೇಕೆಂದರಲ್ಲಿ ಸಂಚರಿಸಬಲ್ಲ ವರವನ್ನೂ ಅನುಗ್ರಹಿಸಿದನು. ಆ ಸಿಂದೂರನಾದರೋ ತೆಪ್ಪಗೆ ಇರಬೇಕೋ ಬೇಡವೋ? ದೊಡ್ಡಸ್ತಿಕೆಯಿಂದ ಮೆರೆದ ಆತ
ತ್ರಿಮೂರ್ತಿಗಳೆದುರಿಗೇ ತನ್ನ ದರ್ಪ ತೋರಿಸತೊಡಗಿದನು. ಆಮೇಲೆ ಸ್ವತಃ ಬ್ರಹ್ಮನೇ ಅವನಿಗೆ ಶಾಪ ಕೊಡಬೇಕಾಯಿತು.

ಗಣಪತಿಯಿಂದ ಸಿಂದೂರನ ಮೃತ್ಯುವಾಗುವುದು ಎಂದು ವಿಧಿನಿಯಮ ಬರೆಯಬೇಕಾಯಿತು. ಮುಂದೆ ನಮ್ಮೆಲ್ಲರ
-ವರಿಟ್ ದೇವರು ಎನಿಸಿದ ಗಣೇಶ ತನ್ನ ಒಂದು ಅವತಾರದಲ್ಲಿ ಸಿಂಧೂರನನ್ನು ಫಿನಿಷ್ ಮಾಡಿಬಿಟ್ಟನಂತೆ. ಇದು ಬ್ರಹ್ಮನ ಎರಡನೆಯ ಆಕಳಿಕೆ ಪ್ರಸಂಗದ ಸಾರಾಂಶ. ಬ್ರಹ್ಮನ ಮೂರನೆಯ ಆಕಳಿಕೆ ನನಗೆ ಗೊತ್ತಾದದ್ದು ಮೊನ್ನೆ
ಮೊನ್ನೆಯಷ್ಟೇ. ಟೊರೊಂಟೊದ ರಾಘು ಕಟ್ಟಿನಕೆರೆ ನೇತೃತ್ವದ ಯಕ್ಷಮಿತ್ರ ಬಳಗದವರು ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ಶಿವವಿಷ್ಣು ದೇವಾಲಯ ಸಭಾಂಗಣದಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರಸಂಗ ಆಡಿ ತೋರಿಸಿದರು. ತುಂಬ ಚೆನ್ನಾಗಿತ್ತು. ಅದರಲ್ಲಿ ಶ್ರೀಕೃಷ್ಣನೊಡನೆ ಸಂಭಾಷಿಸುತ್ತ ಜಾಂಬವಂತ ತನ್ನ ಪರಿಚಯ ಹೇಳಿಕೊಳ್ಳುತ್ತಾನೆ. ತಾನು ಬ್ರಹ್ಮನ ಆಕಳಿಕೆಯಿಂದ ಹುಟ್ಟಿದವನಾದ್ದರಿಂದ ಬ್ರಹ್ಮನ ಪುತ್ರನೆಂದೂ, ಕೃತಯುಗದಿಂದಲೂ ಬದುಕುಳಿ ದಿದ್ದೇನೆಂದೂ ತಿಳಿಸುತ್ತಾನೆ. ಅದು ನನ್ನಲ್ಲಿ ಬಹುಕಾಲದಿಂದ ಇದ್ದ ಒಂದು ಜಿಜ್ಞಾಸೆಗೆ ಉತ್ತರವೂ ಆಯಿತು.

ಸಪ್ತಚಿರಂಜೀವಿಗಳ ಯಾದಿಯಲ್ಲಿ ಜಾಂಬವಂತನ ಹೆಸರಿಲ್ಲದಿದ್ದರೂ ನಮ್ಮ ವರಕವಿ ಬೇಂದ್ರೆಯವರೇಕೆ ‘ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ ಕಲಿಯುಗದ ಕಲ್ಕೀನ ಕಂಡಾನ… ಜಾಂಬುನದಿ ದಂಡೆಯ ಜಂಬುನೇರಲ ಹಣ್ಣು ಕೃತಯುಗದ ಕೊನೆಗೀಂವ ಉಂಡಾನ’ ಎಂದರು ಅಂತ ನನ್ನಲ್ಲೊಂದು ಪ್ರಶ್ನೆ ಇತ್ತು. ಆಮೇಲೆ ನೋಡಿದರೆ ಪುರಾಣನಾಮ ಚೂಡಾಮಣಿ ಗ್ರಂಥದಲ್ಲೂ ಜಾಂಬವಂತನ ಬಗೆಗೆ ‘ಬ್ರಹ್ಮನು ಆಕಳಿಸಿದಾಗ ಆತನ ಬಾಯಿಯಿಂದ ಹೊರಬಂದವನು. ಮಹಾಪರಾಕ್ರಮಿ. ಭಲ್ಲೂಕಗಳಿಗೆ ಅರಸು. ಪ್ರತಿಭಾಶಾಲಿಗಳಿಗೆ ಅಗ್ರಗಣ್ಯ. ದೇವದಾ ನವರು ಪಾಲ್ಗಡಲನ್ನು ಕಡೆಯುವುದಕ್ಕಿಂತಲೂ ಮೊದಲೇ ಜನಿಸಿದವನಾದ್ದರಿಂದ ಎಷ್ಟೋಬಾರಿ ದೇವದಾನವ ಯುದ್ಧವನ್ನು ಕಣ್ಣಾರೆ ನೋಡಿದವನು. ಸಮುದ್ರಮಥನ ಕಾಲದಲ್ಲಿ ದೇವತೆಗಳಿಗೆ ಒತ್ತಾಸೆ ಮಾಡಿ ಅಮೃತವನ್ನು ಸವಿದವನಾದ್ದರಿಂದ ಮಹಾಬಲಶಾಲಿ. ಬಲಿ ಚಕ್ರವರ್ತಿಯ ಯಜ್ಞದಲ್ಲಿ ಓಷಧಿಗಳ
ಮೇಲ್ವಿಚಾರಣೆ ಈತನದ್ದಾಗಿತ್ತು.

ಪ್ರಾಯದಲ್ಲಿ ಎಷ್ಟೋ ಬಾರಿ ಭೂಪ್ರದಕ್ಷಿಣೆ ಮಾಡಿದವನು. ಒಂದು ದಿನವಾದರೂ ಕೈಲಾಸಕ್ಕೆ ಹೋಗದೆ ಶಿವನನ್ನು ಸಂದರ್ಶಿಸದೆ ಇದ್ದವನಲ್ಲ. ವಾಲಿಯು ಕಪಿರಾಜನಾದ ಬಳಿಕ ಆತನ ಸೇನಾಧಿಪತಿಯಾಗಿದ್ದು ವಾಲಿಯ ತರುವಾಯ ಸುಗ್ರೀವನಲ್ಲೂ ಗೌರವಪಾತ್ರನಾಗಿದ್ದನು. ಹನುಮಾದಿಗಳು ಸೀತಾನ್ವೇಷಣೆಗಾಗಿ ತೆಂಕಣ ದಿಕ್ಕಿಗೆ ಹೊರಟಾಗ ಈತನೂ ಅವರ ಸಂಗಡ ಹೋಗಿದ್ದನು. ಹನುಮಂತನೊಬ್ಬನೇ ಸಮುದ್ರವನ್ನು ದಾಟಿ ಹಿಂದಿರುಗಿ ಬರಬಲ್ಲವ ನೆಂದು ಅವನನ್ನು ಹುರಿದುಂಬಿಸಿದವನು. ರಾವಣಸೇನೆಯೊಂದಿಗೆ ಯುದ್ಧದಲ್ಲಿ ಲಕ್ಷ್ಮಣನು ಮೂರ್ಛೆತಪ್ಪಿ ಬಿದ್ದಾಗ ದ್ರೋಣಪರ್ವತದಿಂದ ಸಂಜೀವಿನಿ ಮೂಲಿಕೆಯನ್ನು ತಂದು ಉಪಚರಿಸುವಂತೆ ಆಂಜನೇಯನಿಗೆ ಸೂಚಿಸಿದವನು…’ ಅಂತೆಲ್ಲ ವಿವರಗಳಿವೆ.

ಅಂದರೆ ಬ್ರಹ್ಮನ ಮೊದಲೆರಡು ಆಕಳಿಕೆಗಳು ಮಾತ್ರ ಪ್ರಮಾದಕರ ಎನಿಸಿದವು. ಮೂರನೆಯದರಿಂದ ಲೋಕಕ್ಕೆಲ್ಲ ಒಳ್ಳೆಯದೇ ಆಯಿತು. ಬ್ರಹ್ಮನ ಹೊರತಾಗಿಯೂ ಪುರಾಣದ ದೇವ-ದಾನವ ಯಕ್ಷ-ಗಂಧರ್ವರೆಲ್ಲ ನಮ್ಮೆಲ್ಲರಂತೆ ಆಗೊಮ್ಮೆ ಈಗೊಮ್ಮೆ ಆಕಳಿಸುತ್ತಿದ್ದವರೇ. ಆಕಳಿಸದೆ ಇರುವ ಕುಂಭಕರ್ಣನನ್ನು ಊಹಿಸಲಿಕ್ಕಾದರೂ ಸಾಧ್ಯವೇ? ಇಂದ್ರನ ಮೇಲೆ ಯುದ್ಧಕ್ಕೆ ಬಂದ ವೃತ್ರಾಸುರನ ಕಥೆಯಲ್ಲೂ ಆಕಳಿಕೆಯ ಪಾತ್ರವಿದೆ. ಒಂದು ಹಂತದಲ್ಲಿ ವೃತ್ರಾಸುರನು ಇಂದ್ರನನ್ನು ಸಜೀವ ನುಂಗಿದ್ದನಂತೆ. ಆಗ ಅಲ್ಲಿದ್ದ ಮಹಾಸತ್ತ್ವಶಾಲೀ ತ್ರಿದಶರು ಸಂಭ್ರಾಂತರಾಗಿ ವೃತ್ರನಾಶಿನೀ ಜೃಂಭಿಕೆ(ಆಕಳಿಕೆ)ಯನ್ನು ಸೃಷ್ಟಿಸಿದರು.

ವೃತ್ರನು ಆಕಳಿಸಲು ಬಾಯಿ ತೆರೆದಾಗ ಇಂದ್ರನು ತನ್ನ ಅಂಗಾಂಗಗಳನ್ನು ಸಂಕ್ಷಿಪ್ತಗೊಳಿಸಿ ಹೊರ ಬಂದನು. ಅಂದಿನಿಂದ ಲೋಕದಲ್ಲಿ ಜೃಂಭಿಕೆಯು ಪ್ರಾಣಿಗಳಲ್ಲಿ ಸಂಶ್ರಿತವಾದಳು… ಎಂದು ಮಹಾಭಾರತದಲ್ಲೊಂದು ಉಪಕಥೆ, ಉದ್ಯೋಗ ಪರ್ವದಲ್ಲಿ ಶಲ್ಯನು ಯುಧಿಷ್ಠಿರನಿಗೆ ಹೇಳಿದ್ದಂತೆ. ಇದರಿಂದ ನಮಗೆ ಎರಡು ವಿಷಯಗಳು ತಿಳಿಯುತ್ತವೆ: ಆಕಳಿಕೆಗೆ ಸಂಸ್ಕೃತ ಪದ ಜೃಂಭಿಕಾ ಎಂದು, ಆಯುರ್ವೇದ ಗ್ರಂಥಗಳಲ್ಲಿ ಒಂದು ಸಾಮಾನ್ಯ ರೋಗ ಲಕ್ಷಣವೆಂದು ಉಲ್ಲೇಖಿತವಾಗಿರುವುದು ಅದೇ ಜೃಂಭಿಕಾ. ಮತ್ತು, ಭೂಲೋಕದಲ್ಲಿ ಜೀವಿಗಳೆಲ್ಲದಕ್ಕೂ ಜೃಂಭಿಕಾ ಸ್ವಾಭಾವಿಕವೇ ಆಗಿರುವುದು ಎಂದು.

ಸರಿ, ದೇವ-ದಾನವರ ಆಕಳಿಕೆಗಳನ್ನು ಅಲ್ಲಿಗೇ ಬಿಟ್ಹಾಕಿ ಈಗ ಮನುಷ್ಯನ ಆಕಳಿಕೆಯ ಮೇಲೊಂದಿಷ್ಟು ಕ್ಷ-ಕಿರಣ ಬೀರೋಣ. ಮೊದಲನೆಯದಾಗಿ, ಆಕಳಿಕೆಯದೊಂದು ಹಿರಿಮೆಯಿದೆ. ಏನೆಂದರೆ- ಸೀನು, ಬಿಕ್ಕಳಿಕೆ, ಕೆಮ್ಮು, ತೇಗು, ಗೊರಕೆಗಳೆಲ್ಲ ಇನ್ನೊಬ್ಬರಿಗೆ ಬರುತ್ತಿದ್ದರೆ ಅದನ್ನು ನೋಡಿ ನಮಗೂ ಬರಬೇಕೆಂದೇನಿಲ್ಲ; ಆದರೆ ಆಕಳಿಕೆ ಹಾಗಲ್ಲ. ಒಬ್ಬರು ಆಕಳಿಸುವುದನ್ನು ನೋಡಿದರೆ ನಮಗೂ ಆಕಳಿಕೆ ಬರುವ ಸಾಧ್ಯತೆ ಹೆಚ್ಚು. ಆ ಮಟ್ಟಿಗೆ ಆಕಳಿಕೆ ಸಾಂಕ್ರಾ ಮಿಕ ಎನ್ನಲಿಕ್ಕಡ್ಡಿಯಿಲ್ಲ. ಆರೀತಿ ಒಬ್ಬರ ಆಕಳಿಕೆ ನೋಡಿ ಇನ್ನೊಬ್ಬರಿಗೆ ಆಕಳಿಕೆ ಏಕೆ ಬರುತ್ತದೆ ಎಂಬ
ವಿಷಯದ ಬಗ್ಗೆ ಮನಃಶಾಸಜ್ಞರು, ವೈದ್ಯರು, ವಿಜ್ಞಾನಿಗಳು ಸಂಶೋಧನೆಗಳನ್ನೂ ನಡೆಸಿದ್ದಾರೆ. ಇಲ್ಲಿ ಅಮೆರಿಕದಲ್ಲಿ ನಮ್ಮ ವಾಷಿಂಗ್ಟನ್‌ನ ಅವಳಿನಗರವಾದ ಬಾಲ್ಟಿಮೊರ್‌ನಲ್ಲಿರುವ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್‌ನಲ್ಲಿ ಒಬ್ಬ ಆಕಳಿಕೆ ಪ್ರೊಫೆಸರರಿದ್ದಾರೆ, ಡಾ. ರಾಬರ್ಟ್ ಪ್ರೊವಿನ್ ಎಂದು ಅವರ ಹೆಸರು.‌ ‘ಆಕಳಿಕೆ ಪ್ರೊಫೆಸರ್’ ಎಂದರೆ ಆಕಳಿಸುತ್ತ ಪಾಠ ಮಾಡುವವರು ಅಥವಾ ಆಕಳಿಕೆ ಬರುವಂತೆ ಪಾಠ ಮಾಡುವವರು ಎಂದುಕೊಳ್ಳಬೇಡಿ. ಅವರು ಆಕಳಿಕೆಯ ವಿಷಯದಲ್ಲಿ ಉನ್ನತ ಸಂಶೋಧನೆ ನಡೆಸಿರುವವರಲ್ಲಿ ಅಗ್ರಗಣ್ಯರು.

ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಆಕಳಿಕೆ ಏಕೆ ಬರುತ್ತದೆ ಎನ್ನುವುದರಿಂದ ಹಿಡಿದು, ಅದು ಸಾಂಕ್ರಾ ಮಿಕವಾಗಿರುವುದರ ಕಾರಣವೇನು ಎಂಬ ವಿಷಯದಲ್ಲಿ ಪ್ರೌಢಪ್ರಬಂಧಗಳನ್ನು ಮಂಡಿಸಿರುವವರು.
ಡಾ.ಪ್ರೊವಿನ್ ವಿವರಿಸುವಂತೆ ಆಕಳಿಕೆಯೆಂದರೆ ಬಾಯಿ ಯನ್ನು ಸಾಧ್ಯವಾದಷ್ಟೂ ತೆರೆದು ಗಾಳಿಯನ್ನು ಒಳ ಸೇವಿಸಿ, ಬಾಯ್ಮುಚ್ಚುತ್ತಿದ್ದಂತೆ ಸ್ವಲ್ಪ ಪ್ರಮಾಣದಲ್ಲಿ ಗಾಳಿಯನ್ನು ಹೊರಬಿಡುವ ಒಂದು ಸಹಜ ಪ್ರಕ್ರಿಯೆ. ಈ ವಿವರಣೆಯಲ್ಲಿ ಹೊಸತೇನೂ ಇಲ್ಲ. ಬಹುಶಃ ಆಕಳಿಕೆಯ ಉದ್ದೇಶ ದೀರ್ಘಶ್ವಾಸದಂತೆ ಹೆಚ್ಚು ಆಮ್ಲಜನಕವನ್ನು ದೇಹದೊಳಕ್ಕೆ ಸೇರಿಸಿಕೊಳ್ಳುವುದಿರಬಹುದು ಎಂದು ನಾವಂದುಕೊಳ್ಳುತ್ತೇವೆ. ಆದರೆ ಡಾ. ಪ್ರೊವಿನ್ ಹೇಳುವು ದೇನೆಂದರೆ ಆಮ್ಲಜನಕದ ಪೂರೈಕೆ ಹೇರಳವಾಗಿರುವ ಸನ್ನಿವೇಶದಲ್ಲೂ ಆಕಳಿಕೆ ಬರುತ್ತದೆ. ಮನುಷ್ಯನಷ್ಟೇ ಅಲ್ಲ, ಪ್ರಾಣಿಗಳೂ ಆಕಳಿಸುತ್ತವೆ. ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳೆಲ್ಲ ಆಕಳಿಸುವುದನ್ನು ನಾವೆಲ್ಲ ನೋಡಿದ್ದೇವೆ. ಹಕ್ಕಿಗಳೂ, ಹಾವುಗಳೂ ಆಕಳಿಸುತ್ತವೆ, ಅಷ್ಟೇ ಏಕೆ ಮೀನುಗಳೂ ಆಕಳಿಸುತ್ತವೆ!

ಮೊಸಳೆಯಂತೂ ಆಕಳಿಸುವುದಕ್ಕೆ ಬಾಯ್ತೆರೆದಾಗ ಅದರ ಅಶ್ರುಗ್ರಂಥಿಗಳು ಅದುಮಿಕೊಂಡು ನೀರು ಜಿನುಗುವುದು. ಅದನ್ನೇ ನಾವು ಮೊಸಳೆಕಣ್ಣೀರು ಎನ್ನುವುದು. ಮನುಷ್ಯಪ್ರಭೇದದಲ್ಲಿ, ಭ್ರೂಣದಲ್ಲಿರುವ ಮಗು ಸುಮಾರು
ಹನ್ನೊಂದು ವಾರಗಳ ಪ್ರಾಯದ್ದಾದಾಗ ಆಕಳಿಕೆಯೂ ಅದರ ಒಂದು ಚಲನವಲನವಾಗಿರುತ್ತದೆ. ಮಗು ಚಿಕ್ಕದಿರುವಾಗ ನಿದ್ದೆಯಲ್ಲೂ ಆಕಳಿಸುವುದುಂಟು. ಸುಮಾರು ಎರಡು ವರ್ಷ ಪ್ರಾಯವಾದಾಗ ಚಿಕ್ಕಮಕ್ಕಳಿಗೂ ಆಕಳಿಕೆಯ ಸಾಂಕ್ರಾಮಿಕತೆ ಬರುತ್ತದೆ. ಅಂದರೆ ಒಬ್ಬರು ಆಕಳಿಸುವುದನ್ನು ಕಂಡಾಗ ಬರುವ ಆಕಳಿಕೆ. ಮಕ್ಕಳು ಸದಾ ಚಟುವಟಿಕೆಯಲ್ಲಿ ಇರುವುದರಿಂದ ಆಲಸ್ಯದ ಆಕಳಿಕೆಗಿಂತ ಆಡಿ ದಣಿದು ನಿದ್ದೆ ಆವರಿಸಿದಾಗ ಆಕಳಿಕೆ
ಹೆಚ್ಚು. ದೊಡ್ಡವರಿಗಾದರೆ, ಆಲಸ್ಯದಿಂದ ಆಕಳಿಕೆ ಬರುತ್ತದೆಯೆನ್ನುವ ವಾದವನ್ನು ಡಾ. ಪ್ರೊವಿನ್ ಸಮರ್ಥಿ ಸುತ್ತಾರೆ. 30 ನಿಮಿಷಗಳ ಭಾಷಣ ಕೊರೆತದ ವಿಡಿಯೊ ತೋರಿಸಿದಾಗ ಮತ್ತು 30 ನಿಮಿಷಗಳ ಸಂಗೀತನೃತ್ಯದ ವಿಡಿಯೊ ತೋರಿಸಿದಾಗ ಪ್ರೇಕ್ಷಕರಲ್ಲಿ ಆಕಳಿಕೆಯ ಪ್ರಮಾಣಗಳನ್ನು ಗುರುತು ಹಾಕಿದ ಅವರು, ಲವಲವಿಕೆಯಿಲ್ಲದ ಸಂಗತಿಗಳನ್ನು ಮನಸ್ಸಿನೊಳಗೆ ತುರುಕಿಸುವ ಪ್ರಯತ್ನ ನಡೆದಾಗ ಆಕಳಿಕೆಯ ಸಂಭವ ಹೆಚ್ಚು ಎಂದು ಸಾಬೀತುಪಡಿಸಿದ್ದಾರೆ.

ಆಕಳಿಕೆ ಸಂಶೋಧನೆಗಾಗಿ ಡಾ. ಪ್ರೊವಿನ್ ತಮ್ಮ ವಿದ್ಯಾರ್ಥಿಗಳಿಗೆ ಒಂದೊಂದು ‘ಆಕಳಿಕೆ ಡೈರಿ’ ಕೊಟ್ಟು ಪ್ರತಿ ಆಕಳಿಕೆಯ ಸಂದರ್ಭವನ್ನು ದಾಖಲಿಸುವಂತೆ ಸೂಚಿಸಿದ್ದರು. ನಿದ್ದೆ ಬರುವುದಕ್ಕೆ ಸ್ವಲ್ಪ ಮೊದಲು ಮತ್ತು ನಿದ್ದೆಯಿಂದೆದ್ದ ಬಳಿಕ ಹೆಚ್ಚು ಹೆಚ್ಚು ಆಕಳಿಕೆ ನಮೂದಾಗಿದ್ದುವು (ನಮ್ಮಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ
ಆಕಳಿಕೆ ಡೈರಿ ಕೊಟ್ಟರೆ, ಯಾವ್ಯಾವ ಪ್ರಾಧ್ಯಾಪಕರ ತರಗತಿಗಳಿಗೆ ಎಷ್ಟೆಷ್ಟು ಆಕಳಿಕೆ ದಾಖಲಾಗುತ್ತಿದ್ದವೋ ಏನೋ!). ಡೈರಿಯಿಂದ ತಿಳಿದುಬಂದ ಇನ್ನೊಂದು ಸಂಗತಿಯೆಂದರೆ ಸಾಮಾನ್ಯವಾಗಿ ಎಲ್ಲರೂ ಕೈ-ಕಾಲು-ಮೈಯನ್ನು ಸ್ಟ್ರೆಚ್ ಮಾಡುವಾಗ ಖಂಡಿತವಾಗಿಯೂ ಆಕಳಿಸುತ್ತಾರೆ.

ಆದರೆ ಆಕಳಿಸಿದಾಗಲೆಲ್ಲ ಸ್ಟ್ರೆಚ್ ಮಾಡುತ್ತಾರೆ ಎಂದೇನಿಲ್ಲ. ಆಕಳಿಸುವುದು ಒಂದು stereotyped action pattern ಎಂದು ಡಾ.ಪ್ರೊವಿನ್‌ರ ಅಭಿಪ್ರಾಯ. ಅಂದರೆ, ಊಹಿಸಬಲ್ಲ ಕ್ರಮವೊಂದರಲ್ಲಿ ಜರುಗುವ ಚಟುವಟಿಕೆ. ಆದರೆ ಆ ಚಟುವಟಿಕೆಯ ಉದ್ದೇಶ? ಒಂದು ನಮೂನೆಯಲ್ಲಿ ಸ್ಟ್ರೆಚಿಂಗ್‌ನ ಉದ್ದೇಶವೇ. ಆಕಳಿಸುವಾಗ ನಾವು ಬಾಯಿಯನ್ನು ಸ್ಟ್ರೆಚ್ ಮಾಡುವುದೇ ತಾನೆ? ಆದರೆ ಸಾಂಕ್ರಾಮಿಕತೆ ಏಕೆ? ಒಬ್ಬರು ಆಕಳಿಸುವುದನ್ನು ನೋಡಿದರೆ ನಮಗೂ ಆಕಳಿಕೆ ಬರುವುದೇಕೆ? ಈ ಬಗ್ಗೆ ಡಾ. ಪ್ರೊವಿನ್ ಸಂಗ್ರಹಿಸಿದ ಅಂಕಿ-ಅಂಶಗಳು ಸ್ವಾರಸ್ಯಕರವಾಗಿವೆ.

ವಿಡಿಯೊ ಚಿತ್ರವೊಂದರಲ್ಲಿ ವ್ಯಕ್ತಿಯೊಬ್ಬ ಐದು ನಿಮಿಷಗಳಲ್ಲಿ 30 ಸಲ ಆಕಳಿಸಿದ್ದನ್ನು ತೋರಿಸಿದಾಗ ಆ ವಿಡಿಯೊ ನೋಡಿದ ಗುಂಪಿನಲ್ಲಿ ಶೇ.55ರಷ್ಟು ಮಂದಿ ಆಕಳಿಸಿದರು. ಇನ್ನೊಂದು ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಐದು ನಿಮಿಷಗಳಲ್ಲಿ 30 ಸಲ ನಕ್ಕಿದ್ದನ್ನು ತೋರಿಸಿದಾಗ ಶೇ.೨೧ರಷ್ಟು ಮಂದಿಗಷ್ಟೇ ನಗು ಬಂತು. ಮತ್ತೊಂದು ಪ್ರಯೋಗದಲ್ಲಿ ಕುರುಡರಿಗೆ ಆಕಳಿಕೆಯ ಆಡಿಯೊ ಕ್ಯಾಸೆಟ್ ಕೇಳಿಸಿದಾಗ ಅವರೂ ಆಕಳಿಸತೊಡಗಿದರು.
ಹಾಗೆಯೇ ಆಕಳಿಕೆಯ ಬಗ್ಗೆ ಓದುತ್ತಿದ್ದ ಜನ, ಆಕಳಿಕೆಯ ಬಗ್ಗೆ ಯೋಚಿಸುತ್ತಿದ್ದ ಜನ ಸಹ ತಮಗೆ ಅರಿವಿಲ್ಲ ದಂತೆಯೇ ಆಕಳಿಸತೊಡಗಿದರು. ಒಟ್ಟಿನಲ್ಲಿ, ಆಕಳಿಕೆಯೆಂದರೆ ಬರೀ ಒಂದು ಕ್ರಿಯೆಯಲ್ಲ, ತದ್ರೂಪಿ ಕ್ರಿಯೆಯನ್ನು ಪ್ರಚೋದಿಸುವ ತಾಕತ್ತು ಅದಕ್ಕಿದೆ. ಹಾಗಾಗಿಯೇ ಬೇರೊಬ್ಬರು ಆಕಳಿಸುವುದನ್ನು ನೋಡಿದರೆ ನಾವೂ ಆಕಳಿಸುತ್ತೇವೆ!

ಈಗ ನಿಮಗೊಂದು ರಸಪ್ರಶ್ನೆ (ಅಯ್ಯೋ, ಪ್ರಶ್ನೆ ಬೇರೆ ಇದೆಯಾ ಅಂತ ಆಕಳಿಸಬೇಡಿ)! ರೋಮ್‌ನಲ್ಲಿ ರೋಮನ್ನನಾ
ಗಿರು ಎನ್ನುವ ಹಾಗೆ ರೋಮ್‌ನಲ್ಲಿ ರೋಮನ್ ಮಾದರಿಯಲ್ಲೇ ಆಕಳಿಸು ಎಂದು ಆದೇಶ ಕೊಡುವ Yawn a more
roman way ಎಂಬ ವಾಕ್ಯ. ಇದರಲ್ಲಿ ವಿಶೇಷತೆ ಏನಾದರೂ ನಿಮಗೆ ಗೋಚರಿಸಿತೇ? ಬೇಕಿದ್ದರೆ ವಾಕ್ಯವನ್ನು ಇನ್ನೊಮ್ಮೆ ನಿಧಾನವಾಗಿ ಎಡದಿಂದ ಬಲಕ್ಕೂ, ಬಲದಿಂದ ಎಡಕ್ಕೂ ಓದಿನೋಡಿ.