Saturday, 23rd November 2024

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊಡಿ; ಕೆನಡಾಕ್ಕೆ ಭಾರತ ಟಾಂಗ್‌

NIJJAR

ನವದೆಹಲಿ: ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್(Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮೋದಿ ಸರ್ಕಾರದ ವಿರುದ್ಧ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಆಧಾರರಹಿತ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾರತ ಕೆನಡಾಕ್ಕೆ ಸ್ಪಷ್ಟಪಡಿಸಿದೆ. ಅಲ್ಲದೇ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಪೂರೈಕೆ ಮಾಡಿ, ಮತ್ತು ಖಲಿಸ್ಥಾನಿ ಉಗ್ರರ ವಿರದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಭಾರತ ಆಗ್ರಹಿಸಿದೆ.

ಕೆನಡಾ ಪ್ರಧಾನಿ ಮತ್ತು ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಆರ್‌ಸಿಎಂಪಿಯ ಆರೋಪಗಳ ನಡುವೆ ವ್ಯತ್ಯಾಸಗಳಿರುವುದರಿಂದ ಸೂಕ್ತ ಸಾಕ್ಷ್ಯಾಧಾರಗಳನ್ನು ಪೂರೈಕೆ ಮಾಡಬೇಕು ಎಂದು ಭಾರತ ಒತ್ತಾಯಿಸಿದೆ. ಅಲ್ಲದೇ ಈ ಪ್ರಕರಣದಲಿ ಭಾರತದ ನಿಲುವನ್ನು ಜಸ್ಟಿನ್‌ ಟ್ರೂಡೋ ಸರ್ಕಾರದ ಉನ್ನತ ಭದ್ರತಾ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ಶನಿವಾರ ತಿಳಿಸಿದೆ.

ಆಸಿಯಾನ್ ಶೃಂಗಸಭೆಗಾಗಿ ಲಾವೋಸ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಭೇಟಿ ಮಾಡಿದ್ದಾರೆ. ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ಗುರುವಾರ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದಾರೆ. ಈ ವೇಳೆ ಟ್ರೂಡೋ ನಿಜ್ಜರ್‌ ಹತ್ಯೆ ಬಗ್ಗೆ ಚರ್ಚಿಸಲು ಮುಂದಾದಾಗ ಇದು ಸೂಕ್ತ ಸಮಯ ಅಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನಾವು ಏನು ಮಾತನಾಡಿದ್ದೇವೆ ಎಂಬುದರ ಕುರಿತು ನಾನು ವಿವರವಾಗಿ ಹೇಳುವುದಿಲ್ಲ, ಆದರೆ ಕೆನಡಿಯನ್ನರ ಸುರಕ್ಷತೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವುದು ಯಾವುದೇ ಕೆನಡಾದ ಸರ್ಕಾರದ ಮೂಲಭೂತ ಜವಾಬ್ದಾರಿಗಳಾಗಿವೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ ಎಂದು ಜಸ್ಟಿನ್ ಟ್ರುಡೊ ವಿಯೆಂಟಿಯಾನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆ ದಿನವನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೂಡ ಎನ್‌ಐಎ ಘೋಷಿಸಿತ್ತು.

ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಖಲಿಸ್ತಾನಿ ಉಗ್ರ, ಖಲಿಸ್ತಾನ್‌ ನಾಯಕ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು.

ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯ ಸಂಬಂಧ ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಭಾರತೀಯ ಮೂಲದ ಕರನ್‌ ಬ್ರಾರ್‌ (22), ಕಮಲ್‌ಪ್ರೀತ್‌ ಸಿಂಗ್‌ (22), ಕರಣ್‌ಪ್ರೀತ್‌ ಸಿಂಗ್‌ (28) ಮತ್ತು ಅಮನ್‌ದೀಪ್‌ ಸಿಂಗ್‌ (22) ಬಂಧಿತರು.

ಈ ಸುದ್ದಿಯನ್ನೂ ಓದಿ: Hardeep Singh Nijjar: ನಿಜ್ಜರ್‌ ಹತ್ಯೆ ತನಿಖಾ ವರದಿಗೆ ವೈಟಿಂಗ್‌ ಎಂದ ಕೆನಡಾ; ಮತ್ತೆ ಭಾರತದತ್ತ ಬೊಟ್ಟು ಮಾಡಿದ ಟ್ರುಡೊ