Friday, 22nd November 2024

Pralhad Joshi: ಬಿಜೆಪಿ ಶಾಸಕರ ಮನವಿ ಸ್ವೀಕರಿಸದೇ ಸಿಎಂ ದುರಹಂಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

Pralhad Joshi

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎಯಿಂದ ಹಿಂಪಡೆಯದಂತೆ ಬಿಜೆಪಿ ಶಾಸಕರು ಸಿಎಂಗೆ ಮನವಿ ಸಲ್ಲಿಸಲು ಮುಂದಾದರೆ ಸ್ವೀಕರಿಸಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅತ್ಯಂತ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಭದ್ರತೆ ನೆಪದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರನ್ನು ತಡೆಯುತ್ತಿದ್ದಾರೆ. ಆದರೆ, ಬಂಧಿಸಿ ಜೈಲಿಗಟ್ಟಿದರೂ ಸರಿ ಮನವಿ ಸಲ್ಲಿಸಿಯೇ ಸಿದ್ಧ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿಗೆ ಬಿಜೆಪಿ ಮನವಿ ಸಲ್ಲಿಸುವುದು ತಪ್ಪೇ? ಎಂದು ಪ್ರಶ್ನಿಸಿದ ಜೋಶಿ, ಸಿಎಂ ಸಿದ್ದರಾಮಯ್ಯ ಅವರು ಮನವಿ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸದಿದ್ದರೆ ಭಯೋತ್ಪಾದಕರಿಗೆ ಬೆಂಬಲ ಕೊಟ್ಟಂತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮನವಿ ಸ್ವೀಕರಿಸದೇ ಇದ್ದರೆ, ಮತಾಂಧ ಇಸ್ಲಾಮಿಕ್ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿರುವುದು ರುಜುವಾತು ಆದಂತಾಗುತ್ತದೆ ಎಂದು ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.‌

ಈ ಹಿಂದೆ ಜೆ. ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್ ಅವರಿದ್ದಾಗ ನಾವು ಮನವಿ ಸಲ್ಲಿಸಲಿಲ್ಲವೇ? ಅಷ್ಟೇ ಯಾಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್‌ನವರ ಮನವಿ ಸ್ವೀಕರಿಸಲಿಲ್ಲವೇ? ಎಂದು ಪ್ರಶ್ನಿಸಿದ ಪ್ರಲ್ಹಾದ್‌ ಜೋಶಿ, ಸಿಎಂ ಸಿಎಂ ಸಿದ್ದರಾಮಯ್ಯ ಅವರು ತೀವ್ರ ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಈ ಸುದ್ದಿಯನ್ನೂ ಓದಿ | Siddharth Vihar Trust: ಕೆಎಎಡಿಬಿ ಸೈಟ್‌ ವಿವಾದ; 5 ಎಕರೆ ಭೂಮಿ ವಾಪಸ್‌ ನೀಡಿದ ಖರ್ಗೆ ಕುಟುಂಬದ ಟ್ರಸ್ಟ್‌

ಸಿಎಂ ಸ್ಥಾನ ಉಳಿಸಿಕೊಳ್ಳಲು ವೋಟ್ ಬ್ಯಾಂಕ್ ರಾಜಕಾರಣ

ಮುಡಾ ಹಗರಣದಲ್ಲಿ ಸಿಎಂ ಸ್ಥಾನ ಕಳೆದುಕೊಳ್ಳುವುದು ಖಚಿತವಾಗುತ್ತಲೇ ಸಿದ್ದರಾಮಯ್ಯ ಅವರು ಗಾಂಧಿದ್ವಯರನ್ನು ಮೆಚ್ಚಿಸಿಕೊಳ್ಳಲು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಮುಡಾ ಹಗರಣ, ಹೋರಾಟದ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.‌