Saturday, 21st September 2024

ನಿತೀಶ್’ಗೆ‌ ಗೃಹ ಖಾತೆ, ಡಿಸಿಎಂ ತೆಕ್ಕೆಗೆ ಹಣಕಾಸು ಮತ್ತು ಕೈಗಾರಿಕೆ

ಪಾಟ್ನಾ: ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಿತೀಶ್ ಕುಮಾರ್‌ ಅವರು ತಮ್ಮ ಸಚಿವ ಸಂಪುಟದ ಸಹೋ ದ್ಯೋಗಿಗಳಿಗೆ ಖಾತೆಗಳನ್ನು ನೀಡಿದ್ದಾರೆ.

ಅದರಲ್ಲಿ ಗೃಹ ಖಾತೆಯನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಸಿಎಂ, ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳಿಗೆ, ಈ ಹಿಂದಿನ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್‌ ಮೋದಿ ನಿರ್ವಹಿಸಿದ್ದ ಖಾತೆಯನ್ನು ಸೇರಿ ಹಣಕಾಸು ಖಾತೆಯನ್ನು ತಾರ್‌ ಕಿಶೋರ್‌ ಪ್ರಸಾದ್‌ ಅವರಿಗೆ ವಹಿಸಿದ್ದಾರೆ. ರೇಣು ದೇವಿಯವರಿಗೆ ಮಹಿಳಾ ಕಲ್ಯಾಣ ಖಾತೆ ಜವಾಬ್ದಾರಿ ನೀಡಲಾಗಿದೆ.

ಇದನ್ನು ಹೊರತುಪಡಿಸಿ, ನಿತೀಶ್ ಅವರು, ಆಡಳಿತ, ಗುಪ್ತಚರ, ಚುನಾವಣೆ ಮುಂತಾದ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ತಾರ್‌ಕಿಶೋರ್‌ ಪ್ರಸಾದ್‌ ಅವರು ಹಣಕಾಸು, ವಾಣಿಜ್ಯ ತೆರಿಗೆ, ಪರಿಸರ ಮತ್ತು ಅರಣ್ಯ, ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ದಿ ಮುಂತಾದ ಖಾತೆಗಳ ಹೊಣೆ ನೀಡಲಾಗಿದೆ. ಹಿಂದಿನ ಡಿಸಿಎಂ ಮೋದಿ ಕೂಡ ಇದೇ ಖಾತೆಗಳನ್ನು ನಿಭಾಯಿಸಿದ್ದರು.

ಪಂಚಾಯತ್ ರಾಜ್, ಹಿಂದುಳಿದ ವರ್ಗಗಳ ಅಭಿವೃದ್ದಿ, ಕೈಗಾರಿಕೆ ಮುಂತಾದವುಗಳ ಹೊಣೆಯನ್ನು ಇನ್ನೊರ್ವ ಡಿಸಿಎಂ ರೇಣು ದೇವಿಯವರಿಗೆ ವಹಿಸಲಾಗಿದೆ.

ನಿತೀಶ್‌ ಕುಮಾರ್‌ ಅವರ ಸಂಯುಕ್ತ ಜನತಾ ದಳ ಪಕ್ಷದ ವಿಜಯ್‌ ಕುಮಾರ್‌ ಚೌಧರಿಯವರಿಗೆ ಗ್ರಾಮೀಣಾಭಿವೃದ್ದಿ, ಜಲ ಸಂಪನ್ಮೂಲ, ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ ಖಾತೆ ಹಾಗೂ ಬಿಜೇಂದ್ರ ಪ್ರಸಾದ್ ಯಾದವ್‌ರಿಗೆ ವಿದ್ಯುಚ್ಛಕ್ತಿ, ಯೋಜನೆ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ವಹಿಸಲಾಗಿದೆ. ಶಿಕ್ಷಣ ಖಾತೆ ಹೊಣೆಯನ್ನು ಮೇವಾಲಾಲ್‌ ಚೌಧರಿಗೆ ನೀಡಲಾಗಿದೆ. ಸಾರಿಗೆ ಸಚಿವರಾಗಿ ಶೀಲಾ ಕುಮಾರಿ ಕಾರ್ಯ ನಿರ್ವಹಿಸಲಿದ್ದಾರೆ.