ಬೆಂಗಳೂರು: ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಮೂರನೇ ಆರೋಪಿಯನ್ನು ಮುಂಬೈ ಪೊಲೀಸರ ತಂಡ ಭಾನುವಾರ ಬಂಧಿಸಿದೆ. ಆರೋಪಿಯನ್ನು 28 ವರ್ಷದ ಪ್ರವೀಣ್ ಲೋಂಕರ್ ಎಂದು ಗುರುತಿಸಲಾಗಿದೆ. ಆತನನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಧರ್ಮರಾಜ್ ಕಶ್ಯಪ್ ಮತ್ತು ತಲೆಮರೆಸಿಕೊಂಡಿರುವ ಶೂಟರ್ ಶಿವಕುಮಾರ್ ಗೌತಮ್ ಜತೆಗೆ ಕೊಲೆಯ ಸಂಚುಕೋರರಲ್ಲಿ ಈತನೂ ಒಬ್ಬನೆಂದು ನಂಬಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇಲ್ಲಿಯವರೆಗೆ ಸಿದ್ದಿಕ್ಕಿ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಶೂಟರ್‌ಗಳಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಅವರನ್ನು ಅಕ್ಟೋಬರ್ 21 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮತ್ತೊಬ್ಬ ಶೂಟರ್ ಪರಾರಿಯಾಗಿದ್ದಾನೆ. ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಶಂಕಿತನನ್ನು ಹುಡುಕಲು ಮುಂಬೈ ಪೊಲೀಸರು ಮಧ್ಯಪ್ರದೇಶ ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಸಿದ್ದೀಕಿ ಅವರನ್ನು ಬಾಂದ್ರಾದಲ್ಲಿರುವ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ.
ಬಾಬಾ ಸಿದ್ದೀಕ್ ಹತ್ಯೆಯಾಗಿದ್ದು ಹೇಗೆ?
66 ವರ್ಷದ ಎನ್‌ಸಿಪಿ ನಾಯಕನ ಮೇಲೆ ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಅವರ ಶಾಸಕ ಪುತ್ರ ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ದಿನದಂದು ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದು ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿದೆ. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Baba Siddique : ಸಲ್ಮಾನ್ ಮೇಲಿನ ದ್ವೇಷಕ್ಕೆ ಬಾಬಾ ಸಿದ್ದಿಕಿಯನ್ನು ಕೊಲ್ಲಿಸಿದನೇ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ?
ಬಾಬಾ ಸಿದ್ದಿಕಿ ಅವರ ಹತ್ಯೆಯು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸಲು ನಾಯಕರನ್ನು ಪ್ರೇರೇಪಿಸಿತು, ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕನ ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಾಬಾ ಸಿದ್ದೀಕ್ ಹತ್ಯೆ ತನಿಖೆ
ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಶೂಟರ್ಗಳಿಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮುಂಬೈನ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಸಂಜೆ ವರದಿ ಮಾಡಿದ್ದಾರೆ.