ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru News) ಜಿಲ್ಲೆಯ ಮುಳ್ಳಯ್ಯನಗಿರಿ (Mullayyanagiri), ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿಗಳು (Charmadi Ghat) ಸಂಭಾವ್ಯ ಭೂಕುಸಿತದ (Land Slide) ಅಪಾಯಕಾರಿ ತಾಣಗಳಾಗಿ ಪರಿಣಮಿಸಿವೆ ಎಂದು ಭೌಗೋಳಿಕ ಸರ್ವೆಯೊಂದು ತಿಳಿಸಿದೆ.
ಕೇರಳದ ವಯನಾಡು ಗುಡ್ಡ ಕುಸಿತ ದುರಂತದ ಬಳಿಕ ಕರ್ನಾಟಕದಲ್ಲಿಯೂ ಸಂಭಾವ್ಯ ಅಪಾಯಕರ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಯೋಲಾಜಿಕಲ್ ಸರ್ವೇ ತಂಡದ ತನಿಖೆಗೆ ಸರ್ಕಾರ ಆದೇಶ ನೀಡಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿದ ತಂಡ ವರದಿ ಸಲ್ಲಿಕೆ ಮಾಡಿದೆ. ವರದಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ಗೆ ವರದಿ ಸಲ್ಲಿಸಲಾಗಿದ್ದು, ವರದಿಯಲ್ಲಿ ಅನೇಕ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಅವೈಜ್ಞಾನಿಕ ಕಾಮಗಾರಿ, ವಾಹನಗಳ ಅತಿಯಾದ ದಟ್ಟಣೆ, ಅತಿಹೆಚ್ಚು ಮಳೆಯಿಂದ ಗುಡ್ಡ, ಭೂ ಕುಸಿತಗಳು ಸಂಭವಿಸುತ್ತಿವೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿ ಬಹಳ ಅಪಾಯಕಾರಿ ಪ್ರದೇಶಗಳಾಗಿ ಪರಿಣಮಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಶೇ. 80ರಷ್ಟು ಅವೈಜ್ಞಾನಿಕ ಕಾಮಗಾರಿಯಿಂದ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ಭೂಕುಸಿತದ ಭೀತಿ ಉಂಟಾಗಿದೆ ಎಂದು ವರದಿ ತಿಳಿಸಿದೆ.
88 ಅಪಾಯಕಾರಿ ಸ್ಥಳಗಳು
ಅಷ್ಟೇ ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ 88 ಅಪಾಯಕಾರಿ ಸ್ಥಳಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 88 ಅತ್ಯಂತ ಅಪಾಯಕಾರಿ ಸ್ಥಳಗಳಿವೆ ಎಂದು ಉಲ್ಲೇಖಿಸಿರುವ ವರದಿ, ಆ ಸ್ಥಳಗಳ ಹೆಸರು ಉಲ್ಲೇಖಿಸಿದೆ.
ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ, ಭೂ ಕುಸಿತ ಸಂಭವಿಸುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಮಾಡದೆ ಅವಾಂತರ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ. ಅತಿಹೆಚ್ಚು ಕಾಮಗಾರಿಗಳಿಂದ ಪಶ್ಚಿಮ ಘಟ್ಟಗಳ ಸಾಲಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ. ಒಂದು ವಾರ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಂಡ ಸರ್ವೇ ನಡೆಸಿತ್ತು. ಇದೀಗ ಅಂತಿಮವಾಗಿ ವರದಿ ಸಲ್ಲಿಕೆ ಮಾಡಿದೆ.
ಇತ್ತೀಚೆಗೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನು ರಾಜ್ಯ ಕ್ಯಾಬಿನೆಟ್ ತೆಗೆದುಕೊಂಡಿತ್ತು. ಪಶ್ಚಿಮ ಘಟ್ಟದ ಅನೇಕ ಪರಿಸರ ಸೂಕ್ಷ್ಮ ವಲಯಗಳನ್ನು ಅಭಿವೃದ್ಧಿ ಕಾಮಗಾರಿಗಳಿಂದ ಹೊರಗಿಡುವ ಈ ವರದಿಯ ನಿರಾಕರಣೆಯಿಂದ, ಪಶ್ಚಿಮ ಘಟ್ಟ ಅನೇಕ ಗ್ರಾಮಗಳು ನಿರಾಳವಾಗಿದ್ದವು. ಆದರೆ ಸಂಭಾವ್ಯ ಭೂಕುಸಿತದ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಜಕನಕ್ಕಿ ಗ್ರಾಮದ ಬಳಿ ಭೂಕುಸಿತ ಸಂಭವಿಸಿದೆ. ಸಂಪೂರ್ಣ ರಸ್ತೆ ಕುಸಿಯುವ ಆತಂಕದಲ್ಲಿವ ಸ್ಥಳೀಯರಿದ್ದಾರೆ. ಬಾಳೆಹೊನ್ನೂರಿನಿಂದ ಜಕನಕ್ಕಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಇದನ್ನೂ ಓದಿ: Shirur landslide: ಮೃತ ಅರ್ಜುನ್ ಕುಂಟುಂಬದ ಪರಿಸ್ಥಿತಿಯ ದುರ್ಬಳಕೆ; ಲಾರಿ ಮಾಲೀಕ ಮನಾಫ್ ವಿರುದ್ಧ ಎಫ್‌ಐಆರ್