Sunday, 24th November 2024

Mahakumbh Mela 2025:  ಐಡಿ ಇಲ್ಲದೆ ಪ್ರವೇಶವಿಲ್ಲ, ಉರ್ದು ಹೆಸರು ಬದಲಾವಣೆ, ಸನಾತನೇತರರ ಆಹಾರ ಮಳಿಗೆಗಳಿಗೆ ನಿಷೇಧ!

Mahakumbh Mela 2025

ಪ್ರಯಾಗ್‌ರಾಜ್‌ನಲ್ಲಿ ( Prayagraj) 2025ರ ಜನವರಿ 13ರಂದು ನಡೆಯಲಿರುವ ಮಹಾ ಕುಂಭ ಮೇಳಕ್ಕೆ (Mahakumbh Mela 2025) ಭರದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮಹಾಕುಂಭ (Mahakumbh) ಮೇಳಕ್ಕೆ ಸಂಬಂಧಿಸಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹಲವು ನಿಯಮಗಳನ್ನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ ಉರ್ದು ಪದಗಳಾದ ‘ಶಾಹಿ ಸ್ನಾನ್’ (Shahi Snan) ಮತ್ತು ‘ಪೇಶ್ವಾಯಿ’ (Peshwai) ಹೆಸರನ್ನು ‘ರಾಜ್ಸಿ ಸ್ನಾನ್’ ಮತ್ತು ‘ಚಾವ್ನಿ ಪ್ರವೇಶ’ ಎಂದು ಬದಲಾಯಿಸಲು ಮತ್ತು ಹಿಂದೂ ಧರ್ಮದಲ್ಲದವರು ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

2025ರ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಕುಂಭ ಪ್ರದೇಶಕ್ಕೆ ಪ್ರವೇಶ ಪಡೆಯುವ ಮೊದಲು ತಮ್ಮ ಗುರುತಿನ ಪುರಾವೆಯಾಗಿ ಆಧಾರ್ ಅಥವಾ ವೋಟರ್ ಐಡಿಯನ್ನು ತೋರಿಸಬೇಕಾಗುತ್ತದೆ. ಇದು ನಕಲಿ ಬಾಬಾಗಳ ಪ್ರವೇಶವನ್ನು ತಡೆಯಲು ರೂಪಿಸಲಾಗಿದೆ. ಇದರೊಂದಿಗೆ 13 ರೀತಿಯ ತಪಾಸಣೆ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಆಡಳಿತ ಮಂಡಳಿಯಾದ ಅಖಿಲ ಭಾರತೀಯ ಅಖಾರಾ ಪರಿಷತ್ (ABAP) ಕೈಗೊಳ್ಳಲಿದೆ.

ಮಹಾಕುಂಭವು 2025ರ ಜನವರಿ 13ರಂದು ಪ್ರಯಾಗರಾಜ್‌ನ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ದಡದಲ್ಲಿ ನಡೆಯಲಿದೆ.

ಕುಂಭಕ್ಕೆ ಸಂಬಂಧಿಸಿದ ಉರ್ದು ಪದಗಳ ಮರುನಾಮಕರಣ ಮತ್ತು ಸನಾತನೇತರರು ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸಬೇಕೆಂದು ಈಗಾಗಲೇ ಎಬಿಎಪಿ ಒತ್ತಾಯಿಸಿದೆ.

ನಕಲಿ ಬಾಬಾಗಳ ಪರಿಶೀಲನೆ

ಹಲವು ದೇಶಗಳು ಯುದ್ಧದಲ್ಲಿ ತೊಡಗಿಕೊಂಡಿವೆ. ಕೆಲವರು ಸನಾತನ ಧರ್ಮವನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸನಾತನ ವಿರೋಧಿ ಶಕ್ತಿಗಳನ್ನು ದೂರವಿಡುವುದು ಮತ್ತು ಕುಂಭಮೇಳದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸುವುದು ನಮ್ಮ ಜವಾಬ್ದಾರಿ. ಆದ್ದರಿಂದ, ಕುಂಭಮೇಳದಲ್ಲಿ ಪಾಲ್ಗೊಳ್ಳುವ ಸಂತರು ಮತ್ತು ದಾರ್ಶನಿಕರು ತಮ್ಮ ಆಧಾರ್ ಅಥವಾ ಗುರುತಿನ ಚೀಟಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಕುಂಭದಲ್ಲಿ ನಕಲಿ ಬಾಬಾಗಳ ಪ್ರವೇಶ ತಡೆಯಲು ಜಿಲ್ಲಾಡಳಿತ ಮತ್ತು ಇತರ ಕಾನೂನು ಜಾರಿ ಅಧಿಕಾರಿಗಳಿಗೆ ಸಂಬಂಧಿತ ಸಂತರ ಪಟ್ಟಿಯನ್ನು ಒದಗಿಸುವಂತೆ ಈಗಾಗಲೇ ಎಲ್ಲಾ ಅಖಾರಾಗಳಿಗೆ ಸೂಚಿಸಲಾಗಿದೆ ಎಂದು ಎಬಿಎಪಿ ಮುಖ್ಯಸ್ಥ ರವೀಂದ್ರ ಪುರಿ ಇತ್ತೀಚೆಗೆ ತಿಳಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ರವೀಂದ್ರ ಪುರಿ ಅವರ ಅಧ್ಯಕ್ಷತೆಯಲ್ಲಿ ದಾರಗಂಜ್, ಪ್ರಯಾಗರಾಜ್‌ನ ನಿರಂಜನಿ ಅಖಾರದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಇದರಲ್ಲಿ ಅಖಾರಗಳ ಮಹಾಮಂಡಳೇಶ್ವರರು ಭಾಗವಹಿಸಿದ್ದರು. ಸಂತರಿಗೆ ಗುರುತಿನ ಚೀಟಿ ನೀಡುವಂತೆ ಪಾಲಿಕೆ ಸೂಚಿಸಿದ್ದು, ಸಂತರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು ಎಂದು ದೃಢಪಡಿಸಿದರು.

ಎಬಿಎಪಿ ನಕಲಿ ಬಾಬಾಗಳ ಕುರಿತು ಧ್ವನಿ ಎತ್ತುತ್ತಿರುವುದು ಇದೇ ಮೊದಲೇನಲ್ಲ. 2024ರ ಜುಲೈ ತಿಂಗಳಲ್ಲಿ ಹತ್ರಾಸ್‌ನಲ್ಲಿ 121 ಜೀವಗಳನ್ನು ಬಲಿ ತೆಗೆದುಕೊಂಡ ದುರಂತದ ಬಳಿಕ ಮೋಸ ಮಾಡುವ ಸಂತರು ಮತ್ತು ದಾರ್ಶನಿಕರ ವಿರುದ್ಧ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲು ಕರೆ ನೀಡಲಾಗಿತ್ತು.

Mahakumbh Mela 2025

ಉರ್ದು ಹೆಸರು ಬದಲಾವಣೆ, ಸನಾತನೇತರರಿಗೆ ನಿಷೇಧ

ಇತ್ತೀಚೆಗೆ ನಡೆದ ಸಭೆಯಲ್ಲಿ ಹಲವು ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಲ್ಲಿ ಕುಂಭಮೇಳಕ್ಕೆ ಸಂಬಂಧಿಸಿದ ಉರ್ದು ಪದಗಳನ್ನು ಬದಲಾಯಿಸಬೇಕು ಎನ್ನುವುದು ಪಟ್ಟಿಯ ಅಗ್ರಸ್ಥಾನದಲ್ಲಿದೆ.

ಸಾಮಾನ್ಯವಾಗಿ ಕುಂಭಮೇಳಕ್ಕೆ ಸಂಬಂಧಿಸಿರುವ ‘ಶಾಹಿ’ ಮತ್ತು ‘ಪೇಶ್ವಾಯಿ’ ಪದಗಳನ್ನು ಸನಾತನ ಧರ್ಮದಲ್ಲಿ ಬೇರೂರಿರುವ ಹೆಸರುಗಳೊಂದಿಗೆ ಬದಲಾಯಿಸಲು ಪ್ರಸ್ತಾಪಿಸಲಾಯಿತು.

ಈ ಕುರಿತು ಅಂತಿಮ ಒಪ್ಪಿಗೆಗಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಪ್ರಸ್ತಾವನೆ ಇಡಲಾಗಿದೆ ಎಂದು ರವೀಂದ್ರ ಪುರಿ ಹೇಳಿದರು.

ಕುಂಭದಲ್ಲಿ ಸನಾತನೇತರರು ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಜ್ಯೂಸ್‌ನಲ್ಲಿ ಮೂತ್ರ ಬೆರೆಸುವುದು, ಆಹಾರದಲ್ಲಿ ಉಗುಳುವುದು ಸೇರಿದಂತೆ ಇತ್ತೀಚೆಗೆ ಹಲವು ಘಟನೆಗಳು ನಡೆದಿದ್ದು,ಇದರ ಪ್ರಸ್ತಾಪ ನಡೆಸಲಾಗಿದೆ. ಎಲ್ಲಾ ಹಿಂದೂಗಳು ಕುಂಭಮೇಳದಲ್ಲಿ ಇರುತ್ತಾರೆ. ಆದ್ದರಿಂದ ಅಪವಿತ್ರ ಮಾಡುವ ವಿಷಯಗಳನ್ನು ಸಹಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಸನಾತನೇತರರು ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸುವ ಔಪಚಾರಿಕ ನಿರ್ಣಯವನ್ನು ದೀಪಾವಳಿಯ ಅನಂತರ ಅಂಗೀಕರಿಸಲಾಗುವುದು ಮತ್ತು ಅನುಮೋದನೆಗಾಗಿ ಸಿಎಂ ಆದಿತ್ಯನಾಥ್ ಅವರಿಗೆ ಸಲ್ಲಿಸಲಾಗುವುದು ಎಂದು ಎಬಿಎಪಿ ಹೇಳಿದೆ.

Tumkur Dasara: ತುಮಕೂರು ದಸರಾ: ಸುದ್ದಿ ಮಾಧ್ಯಮಗಳಿಗೆ ಜಿಲ್ಲಾಧಿಕಾರಿಗಳಿಂದ ಅಭಿನಂದನೆ

ಇದಲ್ಲದೆ ಕ್ಷೌರಿಕರು, ಬಡಗಿಗಳು, ಚಮ್ಮಾರರು ಮತ್ತು ಕರ್ತವ್ಯದಲ್ಲಿರುವ ಸಿಬ್ಬಂದಿಗಳನ್ನು ಒಳಗೊಂಡಂತೆ ಸನಾತನ ಧರ್ಮದ ಅನುಯಾಯಿಗಳನ್ನು ಮಾತ್ರ ಕುಂಭದಲ್ಲಿ ನಿಯೋಜಿಸಬೇಕು. ಮಾಲೀಕರ ಹೆಸರನ್ನು ಪ್ರದರ್ಶಿಸುವ ಅಂಗಡಿಗಳಿಂದ ಮಾತ್ರ ಸರಕುಗಳನ್ನು ಖರೀದಿಸಲು ಭಕ್ತರಿಗೆ ಎಬಿಎಪಿ ಒತ್ತಾಯಿಸಿದೆ.

ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಭಕ್ತರು ತಮ್ಮ ಸೇವೆಗಳನ್ನು ತೆಗೆದುಕೊಳ್ಳುವ ಮೊದಲು ಅಂಗಡಿ, ದಾಬಾ ಅಥವಾ ರೆಸ್ಟೋರೆಂಟ್ ಒಳಗೆ ದೇವರ ವಿಗ್ರಹ ಅಥವಾ ಚಿತ್ರವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕುಂಭ ಪ್ರದೇಶದ ಬಳಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸುವಂತೆ ಎಂದು ಪರಿಷತ್ ಒತ್ತಾಯಿಸಿದೆ.