ಜೈಪುರ: ಬೇರೆಯವರ ವಸ್ತುಗಳನ್ನು ಕಳ್ಳತನ ಮಾಡುವ ಕಳ್ಳ ತುಂಬಾ ಕ್ರೂರ ಮನಸ್ಥಿತಿಯವನಾಗಿರುತ್ತಾನೆ ಎಂಬುದು ಎಲ್ಲರ ಭಾವನೆ. ಆದರೆ ಕಳ್ಳನಿಗೂ ಕೂಡ ಆತ್ಮಸಾಕ್ಷಿ ಇದೆ ಎಂಬುದಕ್ಕೆ ಬಿಕಾನೇರ್ನ ನಾಪಸರ್ ಪಟ್ಟಣದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಪೊಲೀಸರು ನಂಬರ್ ಪ್ಲೇಟ್ ಕಾಣೆಯಾದ ಸ್ಕಾರ್ಪಿಯೋ ಕಾರೊಂದನ್ನು ಪತ್ತೆ ಮಾಡಿದ್ದರು. ಕಾರಿನ ಮಾಲೀಕನ್ಯಾರು ಎಂಬ ಸುಳಿವನ್ನು ಈ ಕಾರಿನಲ್ಲಿರುವ ಕಳ್ಳನ ಕೈಬರಹದ ಟಿಪ್ಪಣಿಯಿಂದ ತಿಳಿದುಬಂದಿದೆಯಂತೆ. ಈ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ಜೈಪುರ ಬಿಕಾನೇರ್ ಹೆದ್ದಾರಿಯ ರಸ್ತೆಬದಿಯ ಹೋಟೆಲ್ ಬಳಿ ಸ್ಕಾರ್ಪಿಯೋ ಕಾರೊಂದನ್ನು ನಿಲ್ಲಿಸಲಾಗಿತ್ತು. ಕಾರನ್ನು ನೋಡಿದ ನಿವಾಸಿಯೊಬ್ಬರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಸ್ಕಾರ್ಪಿಯೋ ಕಾರಿನ ಹಿಂಭಾಗದ ಗಾಜಿಗೆ ಎರಡು ಕೈಬರಹದ ಟಿಪ್ಪಣಿಯನ್ನು ಅಂಟಿಸಿದ್ದರು. ಅದರಲ್ಲಿ “ಈ ಕಾರನ್ನು ದೆಹಲಿಯ ಪಾಲಂನಿಂದ ಕಳವು ಮಾಡಲಾಗಿದೆ. ಕ್ಷಮಿಸಿ ಎಂದು ಬರೆದು ಆ ಕಾಗದದಲ್ಲಿ ಕಾರಿನ ಸಂಖ್ಯೆ “ಡಿಎಲ್ 9 ಸಿಎ ಝಡ್ 2937” ಎಂದು ಬರೆಯಲಾಗಿತ್ತು, ಅದರೊಂದಿಗೆ ಅಂಟಿಸಲಾದ ಮತ್ತೊಂದು ಟಿಪ್ಪಣಿಯಲ್ಲಿ “ನಾನು ನನ್ನ ಭಾರತವನ್ನು ಪ್ರೀತಿಸುತ್ತೇನೆ” ಎಂದಿತ್ತು.
ವಿಂಡ್ ಸ್ಕ್ರೀನ್ ಮೇಲಿನ ಮೂರನೇ ಟಿಪ್ಪಣಿಯಲ್ಲಿ “ಈ ಕಾರನ್ನು ದೆಹಲಿಯಿಂದ ಕಳವು ಮಾಡಲಾಗಿದೆ. ದಯವಿಟ್ಟು ಪೊಲೀಸರಿಗೆ ಕೂಡಲೇ ಕರೆ ಮಾಡಿ ಮಾಹಿತಿ ನೀಡಿ” ಎಂದು ತಿಳಿಸಿತ್ತು. ಈ ಟಿಪ್ಪಣಿಯಲ್ಲಿ ಕಾರಿನ ಸಂಖ್ಯೆ ನಮೂದಿಸಿದ್ದರಿಂದ ಪೊಲೀಸರಿಗೆ ಅದರ ಮೂಲ ಮಾಲೀಕರನ್ನು ಕಂಡುಹಿಡಿಯಲು ಸಹಾಯವಾಗಿದೆ ಎನ್ನಲಾಗಿದೆ.
ಈ ಕಾರು ದೆಹಲಿಯ ಪಾಲಂ ಕಾಲೋನಿ ನಿವಾಸಿಯದ್ದು ಎಂಬುದಾಗಿ ಪೊಲೀಸರು ಈ ಟಿಪ್ಪಣಿಯಲ್ಲಿ ಬರೆದಿದ್ದ ಕಾರಿನ ನೋಂದಣಿ ಸಂಖ್ಯೆಯಿಂದ ತಿಳಿದುಕೊಂಡಿದ್ದಾರೆ. ಅಲ್ಲದೇ ಈ ಕಾರಿನ ಮಾಲೀಕರು ಅಕ್ಟೋಬರ್ 10 ರಂದು ತನ್ನ ಕಾರು ಕಳ್ಳತನವಾಗಿರುವ ಬಗ್ಗೆ ಎಫ್ ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಬಿಕಾನೇರ್ ದೆಹಲಿಯಿಂದ 450 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಈ ಕಾರನ್ನು ಯಾವುದೋ ಅಪರಾಧಕ್ಕಾಗಿ ಬಳಸಿರಬಹುದು ಮತ್ತು ನಂತರ ಅದನ್ನು ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.
ಇದನ್ನೂ ಓದಿ: ಎಂಬಿಬಿಎಸ್ ಕನಸು ನನಸಾಗಿಸಲು 64ನೇ ವರ್ಷಕ್ಕೆ ನೀಟ್ ಪರೀಕ್ಷೆ ಪಾಸಾದ ಎಸ್ಬಿಐ ಉದ್ಯೋಗಿ
ಪೊಲೀಸರು ಕಾರನ್ನು ಮಾಲೀಕ ವಿನಯ್ ಕುಮಾರ್ ಅವರಿಗೆ ವಾಪಸ್ ನೀಡಿದ್ದಾರೆ ಮತ್ತು ಈ ಕಾರನ್ನು ಅಪರಾಧಕ್ಕಾಗಿ ಬಳಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೆಹಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.