Saturday, 23rd November 2024

Ravi Hunj Column: ಪಂಥ ಶ್ರೇಷ್ಠತೆಯ ಕಸರತ್ತಿನಲ್ಲಿ ಅಸ್ಮಿತೆಗಾಗಿ ನಡೆದ ಹೋರಾಟ

ಬಸವ ಮಂಟಪ

ರವಿ ಹಂಜ್

(ಭಾಗ – 2)

ವೀರಶೈವದ ಮೂಲದ ಕುರಿತು ಇತಿಹಾಸವು ಆಧಾರಸಮೇತವಾಗಿ ಏನು ಹೇಳುತ್ತದೆ ಎಂಬುದನ್ನು ನಿನ್ನೆಯ ಸಂಚಿಕೆಯಲ್ಲಿ ಅವಲೋಕಿಸಿದೆವಲ್ಲವೇ? ಈಗ ವೀರಶೈವರ ಸಾಮಾಜಿಕ ವಿಕಾಸದತ್ತ ಕೊಂಚ ಗಮನಹರಿಸೋಣ.
ಕಾನಿಷ್ಕನ ಆಳ್ವಿಕೆಯಿದ್ದ ಕ್ರಿ.ಶ.೧೨೭ರ ಕಾಲಾವಧಿಯ ನಂತರ, ಮಾನವ ವಿಕಾಸದ ವಿವಿಧ ಕಾಲಘಟ್ಟಗಳಲ್ಲಿ ಈ
ಶೈವರು ಕಾಲಾನುಕ್ರಮವಾಗಿ ಅತಿಮಾರ್ಗಿಗಳು ಮತ್ತು ಮಂತ್ರಮಾರ್ಗಿಗಳು ಎಂದು ವಿಭಜನೆಗೊಂಡರು.

ಮಂತ್ರಮಾರ್ಗಿಗಳು ನಿಗೂಢವಾಗಿರುತ್ತಿದ್ದರು. ತಮ್ಮ ಸ್ವಂತ ಸುಖಲೋಲುಪತೆ ಅವರ ಗುರಿಯಾಗಿತ್ತು. ಮಂತ್ರ‌ ಮಾರ್ಗಿಗಳಲ್ಲಿನ ಪಂಗಡಗಳು- ಕಾಪಾಲಿಕ ಮತ್ತು ಅಘೋರಿ. ಈ ಪಂಥಗಳ ನಿಗೂಢತೆ, ಸಮಾಜ ವಿಕ್ಷಿಪ್ತತೆಯನ್ನು ಈಗಲೂ ಕಾಣಬಹುದು. ಆದರೆ ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು, ಸಮಾಜಮುಖಿಗಳು ಮತ್ತು ಸದಾ ಸಂಚಾರಿಗಳು. ಶೈವಧರ್ಮ ಪ್ರಸಾರ ಇವರ ಗುರಿ. ಇವರು ಒಂದು ನಿಶ್ಚಿತ ಸಮಾಜ ವ್ಯವಸ್ಥೆಯನ್ನು ಸಂಘಟಿಸಿ, ಅದನ್ನು ವಿಕಸಿತಗೊಳಿಸುತ್ತಾ ನಡೆದರು. ತಾವು ಎಲ್ಲಿ ಸಂಚರಿಸುತ್ತಾ ಹೋದರೋ ಅಲ್ಲ ಅತಿಮಾರ್ಗಿ ಗಳು ಮಠಗಳನ್ನು ಕಟ್ಟುತ್ತಾ ನಡೆದರು. ಮತ್ತದೇ ಶೈವ-ಬೌದ್ಧರ ಕರಂಡಕ-ಕರಡಿಗೆ ಚಿಂತನೆಯ ಕೊಡುಕೊಳ್ಳುವಿಕೆ ಯಂತೆ ಮಠಗಳನ್ನು ಕಟ್ಟುವ ಚಿಂತನೆ ಸಹ ಪರಸ್ಪರ ಅಳವಡಿಕೆಯಾಗಿರುವುದು ಕುತೂಹಲಕರ.

ಕಾಲಾನುಕ್ರಮದಲ್ಲಿ ಈ ಅತಿಮಾರ್ಗಿಗಳು ಅಧಿಕೃತವಾಗಿ ಪಾಶುಪತ, ಲಾಕುಳ ಮತ್ತು ಕಾಳಾಮುಖರೆಂದು ಕರೆಯ ಲ್ಪಟ್ಟರು. ಬ್ರಿಟಿಷ್ ವಿದ್ವಾಂಸ ಗ್ಯಾವಿನ್ ಫ್ಲಡ್‌ನ ‘ಆನ್ ಇಂಟ್ರೊಡಕ್ಷನ್ ಟು ಹಿಂದೂಯಿಸಂ’ ಸಂಶೋಧನಾ ಕೃತಿಯ ಪ್ರಕಾರ ಕ್ರಿ.ಶ. ಒಂದನೇ ಶತಮಾನದ ಅತಿಮಾರ್ಗಿಗಳು ಕಾಳಾಮುಖ ಪಾಶುಪತರೆಂದು ಗುರುತಿಸಲ್ಪ
ಟ್ಟಿದ್ದರು. ಈ ಸಂಚಾರಿ ಜಂಗಮರು ತಮ್ಮದೇ ಆದ ಒಂದು ವಲಸೆಯ ಪರಿಯನ್ನು ಅಳವಡಿಸಿಕೊಂಡಿದ್ದರು. ತಾವು
ಪ್ರತಿಸಾರಿ ಸಂಚರಿಸುವ ಸ್ಥಳಗಳಲ್ಲಿ ಮಠಗಳನ್ನು ನಿರ್ಮಿಸಿಕೊಂಡು ಅಲ್ಲ ನಿರ್ದಿಷ್ಟ ಕಾಲ ಬೀಡುಬಿಡುತ್ತಿದ್ದರು. ಈ
ಮಠಗಳು ಶೈವಪಂಥದ ಶಾಲೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಡೇವಿಡ್ ಲೊರೆಂಜೆನ್ ತಮ್ಮ ‘ದಿ ಕಾಪಾಲಿಕಾಸ್ ಆಂಡ್ ಕಾಳಾಮುಖಾಸ್: ಟು ಲಾ ಶೈವೈಟ್ ಸೆಕ್ಟ್ಸ್’ ಎಂಬ ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ.

ಕಾಲಕ್ಕನುಗುಣವಾಗಿ ಮಾನವಸಮಾಜ ವಿಕಾಸಗೊಂಡಂತೆ (ಅಲೆಮಾರಿತನದಿಂದ ನೆಲೆಮಾರಿಗಳಾದಂತೆ) ಜಂಗಮ ಕಾಳಾಮುಖರಲ್ಲಿ ಕೆಲವರು ಒಂದೆಡೆ ನೆಲೆ ನಿಲ್ಲಬಯಸಿರಬಹುದು. ಈ ರೀತಿ ನೆಲೆ ನಿಂತವರನ್ನೇ ಅವರವರ ಕಾಯಕಗಳಿಂದ ಗುರುತಿಸಿ ಒಕ್ಕಲಿಗ, ಗಾಣಿಗ, ಅಗಸ, ಕ್ಷೌರಿಕ, ಚಮ್ಮಾರ, ಕಮ್ಮಾರ, ಕುಂಬಾರ, ಗುಡಿಕಾರ,
ಅಕ್ಕಸಾಲಿ ಮತ್ತಿತರೆಯಾಗಿ ಕರೆಯಲ್ಪಟ್ಟರು. ಈ ರೀತಿಯ ವಿಕಾಸವು ಕೇವಲ ಭಾರತದಲ್ಲಷ್ಟೇ ಅಲ್ಲದೆ ಮಾನವಜ
ನಾಂಗವು ಎಲ್ಲಿ ಇದ್ದಿತೋ ಅ ಜಾಗತಿಕವಾಗಿ ಆಗಿದೆ. ಉದ್ಯೋಗಗಳು ಅಥವಾ ವೃತ್ತಿಗಳು ವರ್ಣಗಳ ವಿಶಾಲಾ
ರ್ಥದೊಳಗೇ ವಿಂಗಡಣೆಗೊಂಡು ವೃತ್ತಿಜಾತಿಗಳಾಗಿ ರೂಪುಗೊಳ್ಳುತ್ತಾ ಸಾಗಿದವು. ಏಕೆಂದರೆ ಸಾಕಷ್ಟು ಭಾರ
ತೀಯ ಜಾತಿಗಳು ಕುಶಲಕರ್ಮ ಅಥವಾ ವೃತ್ತಿಗಳೊಂದಿಗೆ ಸಂಯೋಗಗೊಂಡಿವೆ. ಅದೇ ರೀತಿ ಇತರೆ ನಾಗರಿಕತೆಗಳಲ್ಲಿ ಈ ವೃತ್ತಿಗಳು ಕುಲನಾಮವಾದವು. ಪುರೋಹಿತ-ಪ್ರೀ, ವೈಶ್ಯ-ಮರ್ಚಂಟ್/ಸ್ಮಿತ್, ಕ್ಷತ್ರಿಯ-ವಾರಿಯರ್, ಕುರುಬ -ಶೆಪರ್ಡ್, ಚಮ್ಮಾರ-ಶುಮಾಕರ್, ಮಠ-ಮೊನ್ಯಾಸ್ಟ್ರಿ, ಮಾಲಿ-ಗಾರ್ಡನರ್, ಕಮ್ಮತ-ಫಾರ್ಮರ್/ಫಾಲ್ಕನರ್/ ಗ್ರೋವರ್, ಬಡಿಗೇರ್-ವುಡ್‌ಮನ್/ವುಡ್‌ಸ್ಮಿತ್, ಈಡಿಗ-ಬ್ರ್ಯೂವರ್, ಗಾರೆ-ಮೇಸನ್ ಮುಂತಾದವು. ಈ ರೀತಿಯ ಕುಲನಾಮಗಳು ಬ್ರಿಟಿಷರಲ್ಲಿ ಮಾತ್ರವಲ್ಲದೆ ಸ್ಪ್ಯಾನಿಷ್, ಪೋರ್ಚುಗೀಸ್, ಆಫ್ರಿಕನ್ನರು, ಅರೇಬಿಯನ್ನರು ಮುಂತಾದವರಲ್ಲೂ ವಿಕಾಸಗೊಂಡಿವೆ.

ಅದೇ ರೀತಿ ಮಾತಾ-ಪಿತೃನಾಮವನ್ನು ಕುಲನಾಮವಾಗಿಸಿದ ಕಮಲಕ್ಕನವರ್, ವಿರೂಪಣ್ಣಾವರ್ ಎಂಬುವು ಜಾಗತಿಕವಾಗಿ ಮೆಕ್ ಡಾನಲ್ಡ್/ಡಾನಾಲ್ಡ್ ಸ್ಕಿ/ಲೌರಾನ್ಸ್ಕಿಯಾದರೆ, ಮೂಲಸ್ಥಳಗಳ ಕುಲನಾಮಗಳು ಹುಬ್ಳೀಕರ್, ಮೈಸೂರುಮಠ,‌ ಲಾಹೋರಿ, ಬಿಹಾರಿ ಮುಂತಾದವು. ಒಟ್ಟಾರೆ ಉದ್ಯೋಗ ಅಥವಾ ಮಾತಾಪಿತ ಅಥವಾ ಮೂಲಸ್ಥಳಗಳು ಜನಾಂಗೀಯ ಗುರುತಿನ ಸ್ಥಾನ ಗಳಿಸಿದವು. ನಾಗರಿಕತೆಗಳ ಜಾಗತೀಕರಣ ಮಾನವ ವಿಕಾಸ ದೊಂದಿಗೇ ಬೆಸೆದುಕೊಂಡಿದ್ದಿತು.

ಜಾಗತೀಕರಣವನ್ನು ವಿರೋಧಿಸುವವರು ಮಾನವವಿಕಾಸ ಮತ್ತು ಇತಿಹಾಸವನ್ನು ಅರಿಯಬೇಕು. ಏಕೆಂದರೆ ಇತಿಹಾಸ ಎಲ್ಲಾ ನಾಗರಿಕತೆಗಳ ಮೂಲ. ಇತಿಹಾಸವಿಲ್ಲದೆ ನಾಗರಿಕತೆ ಇಲ್ಲ. ವಿದೇಶಿ ನಾಗರಿಕತೆಗಳಲ್ಲಿ ಹುಟ್ಟಿ ನಿಂದ ಕುಲನಾಮವಿಟ್ಟುಕೊಳ್ಳುವ ಪದ್ಧತಿ ಇದ್ದಿತೇ ಹೊರತು, ಅದೇ ವೃತ್ತಿಯ ಇರಬೇಕೆಂಬ ನಿಯಮವೇನೂ ಇರಲಿಲ್ಲ. ಅಂತೆಯೇ ಹಿಂದೂ ಸಂಸ್ಕೃತಿಯಲ್ಲಿ ಕೂಡ ಹುಟ್ಟು ಏನಾಗಿದ್ದರೂ ವೃತ್ತಿಯು ವರ್ಣವನ್ನು ನಿರ್ಧರಿಸು ತ್ತಿದ್ದಿತು. ಕ್ರಮೇಣ ವೃತ್ತಿಗಳು ಜಾತಿಯೆಂದು ಗುರುತಿಸಿಕೊಳ್ಳುತ್ತ ಸಾಗಿದರೂ, ಅದೇ ವೃತ್ತಿಗಳ ತೊಡಗಿಕೊಳ್ಳಬೇಕೆಂಬ ನಿಯಮಗಳೇನೂ ಇರಲಿಲ್ಲ.

ಹೀಗೆ ಸಮಾಜದ ವಿಕಾಸಕ್ಕನುಗುಣವಾಗಿ ವೃತ್ತಿಗಳಿಂದ ವ್ಯಕ್ತಿಗಳು ಗುರುತಿಸಿಕೊಳ್ಳಲಾರಂಭಿಸಿ ಭಾರತದಲ್ಲಿ ಜಾತಿ ವಿಕಾಸಕ್ಕೆ ಮುನ್ನುಡಿಯಾಯಿತು. ಕಾಳಾಮುಖ ಸಹ ಇದಕ್ಕೆ ಹೊರತಾಗಿರಲಿಲ್ಲ. ವೃತ್ತಿಯೇತರವಾಗಿ ಕಾಳಾಮುಖ ರೆಲ್ಲರೂ ಒಂದೇ ಆಗಿದ್ದರು. ತಾತ್ವಿಕ ವಿಕಾಸ: ಇನ್ನು ಶೈವದ ಲಕುಲೀಶ ಎಂದರೆ ಒಂದು ಲಾಕುಲ (ಕೂಟ)ದ ಮುಖಂಡನೇ ಈಶ ಅಥವಾ ದೊಣ್ಣೆ (ತ್ರಿಶೂಲ)ಯನ್ನು ಹಿಡಿದವ ಎಂದು ಸಂಶೋಧಕರು ಗುರುತಿಸಿದ್ದಾರೆ.

ಸಂಶೋಧಕ ಎಚ್.ಎಚ್.ಡ್ಯಾನಿಯಲ್ ಇಂಗಲ್ಸ್ ಅರವತ್ತರ ದಶಕದ ಹರ್ಕ್ಯೂಲಿಸ್ ಮತ್ತು ಲಕುಲೀಶ ಪದಗಳ ಮತ್ತವುಗಳ ಶಬ್ದಾರ್ಥದ ಸಾಮ್ಯತೆಯ‌ ಮೇಲೆ ಎರಡೂ ಒಂದೇ ಎಂಬ ಅನುಮಾನವನ್ನು ವ್ಯಕ್ತಪಡಿಸಿzರಲ್ಲದೆ ಗ್ರೀಕ್ ಸಿನಿಕರಿಗೂ ಮತ್ತು ಪಾಶುಪತರಿಗೂ ಇರುವ ತಾತ್ವಿಕ ಸಾಮ್ಯತೆಯನ್ನು ಗುರುತಿಸುತ್ತಾರೆ. ಹಿಂದೂಗಳ ಮೇಲೆ ಗ್ರೀಕರ ಪ್ರಭಾವವಿದ್ದಂತೆ ಲಕುಲೀಶನ ಪ್ರಭಾವ ಗ್ರೀಕ್ ಸಂಸ್ಕೃತಿಯ ಮೇಲಾಗಿ ಹರ್ಕ್ಯೂಲಿಸ್ ಅನಾವರಣ ಗೊಂಡಿರ ಬಹುದು ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ.

ಇದಕ್ಕೆ ಪೂರಕವಾಗಿ ಹೂಣರು ತಮ್ಮ ನಾಣ್ಯಗಳ ಮೇಲಿನ ಹರ್ಕ್ಯೂಲಿಸ್ ಅನ್ನು ತೆಗೆದು ಶಿವನನ್ನು ಟಂಕಿಸಿದ ಉದಾಹರಣೆಯನ್ನು ಕೊಟ್ಟು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ಓದಿಗೆ ಹಾರ್ವರ್ಡ್ ಥಿಯಾ ಲಾಜಿಕಲ್ ರಿವ್ಯೂ 1962ರಲ್ಲಿ ಪ್ರಕಟಿಸಿರುವ ‘ಸಿನಿಕ್ಸ್ ಆಂಡ್ ಪಾಶುಪತಾಸ್: ದಿ ಸೀಕಿಂಗ್ ಆಫ್‌ ಡಿಸ್‌ಆನರ್’
ಲೇಖನವನ್ನು ಗಮನಿಸಬಹುದು.

ಅದಲ್ಲದೆ ಭಾರತೀಯ ತರ್ಕಶಾಸ್ತ್ರವಾದ ‘ನ್ಯಾಯ ಸೂತ್ರ’ವನ್ನು ರಚಿಸಿದ ಗೌತಮ ಸಹ ಭರೂಚದಲ್ಲಿ ವಾಸವಿ
ದ್ದು ಅಲ್ಲಿದ್ದ ಗ್ರೀಕರ ಸಿನಿಕ್ ಪಂಥದಿಂದ ಪ್ರಭಾವಿತಗೊಂಡಿರಬಹುದು ಎಂದು ಫರ್ರಾಂಡ್ ಸಾಯ್ರ್ 1938ರಲ್ಲಿ
ಪ್ರಕಟಿಸಿದ ತಮ್ಮ ‘ಡೈಯೋಜೀ ಆಫ್ ಸಿನೋಪ್: ಎ ಸ್ಟಡಿ ಆಫ್ ಗ್ರೀಕ್ ಸಿನಿಸಿಸಂ’ ಕೃತಿಯಲ್ಲಿ ಹೇಳಿದ್ದಾರೆ. ಈ
ಭರೂಚ ಪ್ರದೇಶವೇ ಲಕುಲೀಶರ ಆಡುಂಬೊಲ ಸಹ ಆಗಿತ್ತು. ಅದಲ್ಲದೆ ಕಾಳಾಮುಖ ಮತ್ತು ಪಾಶುಪತಗಳೆರಡೂ ನ್ಯಾಯ ಮತ್ತು ವೈಶೇಷಿಕ ಆಧ್ಯಾತ್ಮಿಕತೆಗೆ ಹೆಚ್ಚು ಹತ್ತಿರವಿದ್ದವು ಎಂದು ಈಗಾಗಲೇ ಸಾಕಷ್ಟು ಸಂಶೋಧನೆಗಳು ಸಾಬೀತುಪಡಿಸಿವೆ.

ಸಂಶೋಧಕರಾದ ಎಸ್.ಎನ್.ದಾಸ್ ‘ಹಿಸ್ಟರಿ ಆಫ್‌ ಇಂಡಿಯನ್ ಫಿಲಾಸಫಿ’ ಕೃತಿಯಲ್ಲಿ ಕಾಳಾಮುಖ ಅಥವಾ
ಪಾಶುಪತದ ಹರದತ್ತನ ‘ಪಾಶುಪತ ಗಣಕಾರಿಕಾ’ವೇ ಪರಿಷ್ಕೃತಗೊಂಡು ‘ಸಿದ್ಧಾಂತ ಶಿಖಾಮಣಿ’ ಆಗಿದೆ ಎಂದಿದ್ದಾರೆ.
ಕಾಳಾಮುಖರ ಬೊಂತೇಯಮುನಿ ‘ಕರ್ತೃ’ವು ನಿರಾಕಾರನೂ ನಿರಾಮಯನೂ ಆಗಿದ್ದಾನೆ ಎಂದಿದ್ದಾನೆ. ಬೊಂತೇ
ಯಮುನಿಯ ಸ್ಥಾವರ-ಕರ್ತೃ ವಾದವು ಪಾಶುಪತದಲ್ಲಿ ‘ಕಾರ್ಯಕಾರಣ ಸ್ಥಾವರ’ ಅಂದರೆ ಲೌಕಿಕ ಪ್ರಪಂಚದ
ಕಾರಣ ಸ್ಥಾವರ ಬೇಕು ಎಂದಾಗಿದೆ.

ಇನ್ನು ಕರ್ತೃ, ಸ್ಥಾವರ, ನಿರಾಕಾರ, ನಿರಾಮಯಗಳು ವಚನಗಳಲ್ಲಿ ಹಾಸುಹೊಕ್ಕಾಗಿವೆ. ಈ ಪಂಥಗಳು ತರ್ಕಶಾಸ್ತ್ರ, ಯೋಗ, ತಂತ್ರವನ್ನು ತಮ್ಮ ಆಧ್ಯಾತ್ಮಿಕ ತತ್ವಗಳಲ್ಲಿ ಅಳವಡಿಸಿಕೊಂಡಿವೆ. ತಾಂತ್ರಿಕ ಕುಂಡಲಿನೀ ಕ್ರಿಯೆಯ ವರ್ಣನೆಯನ್ನು ಅಲ್ಲಮನಲ್ಲದೇ ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತಿತರೆ ವಚನಕಾರರ ವಚನಗಳಲ್ಲಿ ಕಾಣಬಹುದು. ಹೀಗೆ ‘ಸಿದ್ಧಾಂತ ಶಿಖಾಮಣಿ’ ಗ್ರಂಥಕ್ಕೆ ಐತಿಹಾಸಿಕ ಪುರಾವೆಯ ಬೆಂಬಲ ಸಿಗುತ್ತದೆ. ಇನ್ನು ‘ಶಕ್ತಿ ವಿಶಿಷ್ಟಾದ್ವೈತ’ದ ‘ಶಕ್ತಿ’ ಎಂಬುದು ಕಾಳಾಮುಖರ ಛಾಪಾಗಿತ್ತು. ಕರ್ಣಾಟ ಸಾಮ್ರಾಜ್ಯಸ್ಥಾಪನೆಗೆ ಮಾರ್ಗ ದರ್ಶನ ನೀಡಿದ್ದ ಕ್ರಿಯಾ‘ಶಕ್ತಿ’, ಹೊಂಬಳದಲ್ಲಿನ ಕ್ರಿ.ಶ. 1189ರ ದತ್ತಿ ಶಾಸನದಲ್ಲಿನ ರುದ್ರ‘ಶಕ್ತಿ’, ಬಳ್ಳಿಗಾವೆ ಕೇದಾರೇಶ್ವರ ದೇವಸ್ಥಾನದ ಶಾಸನಲ್ಲಿರುವ ಕೇದಾರ‘ಶಕ್ತಿ’, ವಾಮ‘ಶಕ್ತಿ’, ಜ್ಞಾನ‘ಶಕ್ತಿ’ ಹೀಗೆ ಕಾಳಾಮುಖ ಸಾಧಕರ ಶಕ್ತಿ ಪಟ್ಟಿ ಬೆಳೆಯುತ್ತದೆ.

ಈ ಎಲ್ಲಾ ‘ಶಕ್ತಿ’ಗಳನ್ನು ಶಾಸನಗಳಲ್ಲಿ ಜಂಗಮ, ಲಿಂಗಾವತಾರ ಎಂದೂ ಕರೆಯಲಾಗಿದೆ. ‘ಜಂಗಮವೇ ಲಿಂಗ ವೆಂದರಿಯ ದವರ ತೋರದಿರು’ ಎಂದು ವಚನಕಾರರೇ ಜಂಗಮವನ್ನು ಮಾನ್ಯ ಮಾಡಿದ್ದಾರೆ. ಬಿಜ್ಜಳರಾ
ಯಚರಿತಗಳಲ್ಲಿ ಬಸವಣ್ಣನು ಮತಪ್ರಚಾರಕ್ಕಾಗಿ ಜಂಗಮರಿಗೆ ಸಾಕಷ್ಟು ಹಣವನ್ನು ಚೆಲ್ಲಿ ಕೋಶವನ್ನು ಖಾಲಿ
ಮಾಡಿದ್ದನು ಎಂದಿದೆ. ಈ ಹಿನ್ನೆಲೆಯಲ್ಲಿ ‘ಮತಪ್ರಚಾರಕ್ಕಾಗಿ ಕೋಶ’ ಎಂಬ ಇಂದಿನ ಪ್ರಜಾಪ್ರಭುತ್ವದ ಬುನಾದಿಯ ಅಳವಡಿಕೆಯು ಸಹ ಪ್ರಪಂಚದ ಪ್ರಥಮ ಸಂಸತ್ತಿನ ಕಂಡುಕೊಂಡ ನಿಯಮವಿರಬಹುದೇ ಎಂಬ ಕುಚೋದ್ಯ ಸಂಕಥನ ಮನದಲ್ಲಿ ಸುಳಿದರೆ ಅದು ತಪ್ಪಲ್ಲ.

“ಕಾಳಾಮುಖ ಸಂಪ್ರದಾಯದ ಗುರುಗಳು ನ್ಯಾಯ ಮತ್ತು ವೈಶೇಷಿಕ ತತ್ವಶಾಸ್ತ್ರಗಳಲ್ಲಿ ವಿಶೇಷ ಪರಿಣತರಾಗಿ
ದ್ದರು. ಅವರು ತಮ್ಮ ಹೆಸರುಗಳ ಕೊನೆಯಲ್ಲಿ ‘ಪಂಡಿತ’, ‘ಪಂಡಿತದೇವ’ ಎಂಬ ವಿಶೇಷಣಗಳನ್ನು ಹಚ್ಚಿಕೊಳ್ಳು ವುದು ವಾಡಿಕೆ. ಅವರು ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿರುತ್ತಿದ್ದರು. ಮಠ-ಮಂದಿರಗಳಿಗೆ ಅಧಿಪತಿ ಗಳಾಗಿರುತ್ತಿದ್ದರು.

ಅವರು ಉಳಿದ ವೈದಿಕ ಪುರೋಹಿತರಂತೆ ಇರಲಿಲ್ಲ. ಅವರು ಆಜೀವ ಬ್ರಹ್ಮಚಾರಿಗಳಾಗಿರುತ್ತಿದ್ದರು. ‘ಪರಮ ನೈಷ್ಠಿಕ’ರೆಂದೂ, ‘ತಪೋಧನ’ರೆಂದೂ ಪ್ರಸಿದ್ಧಿ ಪಡೆದಿದ್ದರು. ಅಪವಾದಕ್ಕೆ ಕೆಲವರು ಸಂಸಾರಿಗಳಾಗಿದ್ದರೆಂದೂ ತಿಳಿದುಬರುತ್ತದೆ. ಲಭ್ಯವಿದ್ದ ಬಸವಪೂರ್ವ ಶಾಸನಗಳಲ್ಲಿ ಅವರಿಗೆ ‘ಮಾಹೇಶ್ವರ’ರೆಂದು, ‘ಜಂಗಮ’ ರೆಂದು ಕರೆಯಲಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಬಳಸಿದ ‘ಜಂಗಮರು’ ಎಂಬ ಪದವು ಈ ಕಾಳಾಮುಖ
ಜಂಗಮರನ್ನೇ ನಿರ್ದೇಶಿಸುತ್ತದೆ. ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು (ಜಂಗಮರು)
ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು.

ಬಸವಣ್ಣನವರ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು (ಪುಟ-241). ಬಸವಣ್ಣನವರ ಪೂರ್ವದಲ್ಲಿ ಮತ್ತು ತದನಂತರ ಕೆಲವು ವರುಷ ಕಾಳಾಮುಖರು ಕರ್ನಾಟಕದ ಉತ್ತರ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿ ಗಳಾಗಿದ್ದರು. ಶಿವಮೊಗ್ಗ, ಧಾರವಾಡ, ಬೆಳಗಾವಿ ಜಿಗಳಲ್ಲೂ, ಆಂಧ್ರಪ್ರದೇಶದ ಉಸ್ಮಾನಾಬಾದ್ ಜಿಯಲ್ಲೂ ಅವರ
ಮಠಗಳಿದ್ದವು. ಶಾಸನಗಳ ಆಧಾರದ ಮೇಲೆ ಹೇಳುವುದಾದರೆ ಕ್ರಿ.ಶ 1250ರ ಹೊತ್ತಿಗೆ ಕಾಳಾಮುಖರ ಎಲ್ಲ
ಮಠಗಳು ವೀರಶೈವ ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ (ಪುಟ-239)” ಎಂದು
ಡೇವಿಡ್ ಲೋರೆಂಜನ್ ಸ್ಪಷ್ಟವಾಗಿ ದಾಖಲೆ ಸಮೇತ ತಮ್ಮ ‘ದಿ ಕಾಪಾಲಿಕಾಸ್ ಆಂಡ್ ಕಾಳಾಮುಖಾಸ್: ಟು ಲಾ
ಶೈವೈಟ್ ಸೆಕ್ಟ್ಸ್’ ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ.

ವಿಸ್ತರಣೆ: ಪಂಥ ವಿಸ್ತರಣೆಯು ಅಂದಿನ ಎಲ್ಲಾ ಪಂಥಗಳ ಗುರಿಯಾಗಿದ್ದಂತೆಯೇ ಕಾಳಾಮುಖರ ಪ್ರಮುಖ ಗುರಿ
ಯೂ ಪಂಥ ವಿಸ್ತರಣೆಯಾಗಿತ್ತು. ಅಂದಿನ ಸಾಕಷ್ಟು ಶೈವಪ್ರಭುತ್ವಗಳ (ಅದರಲ್ಲೂ ದಕ್ಷಿಣ ಭಾರತದ) ಆಧಿಪತ್ಯ ವಿಸ್ತರಣೆಯಲ್ಲಿ ಕಾಳಾಮುಖರು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ.

ಯುದ್ಧಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ವೀರೋಚಿತವಾಗಿ ಭಾಗವಹಿಸಿದ್ದಾರೆ. ರಾಜಗುರುಗಳೆಂದೂ ಮಾನ್ಯತೆ ಪಡೆದಿದ್ದಾರೆ. ಕಾಳಾಮುಖರು ತಮ್ಮ ಪಂಥವಿಸ್ತರಣೆಗೆ ಆಕ್ರಮಣಕಾರಿ ಪದ್ಧತಿಯನ್ನು ತುಸು
ಹೆಚ್ಚಾಗಿಯೇ ಅನುಸರಿಸುತ್ತಿದ್ದರು. ಇದರಲ್ಲಿ ಸವಾಲುವಾದ ಮತ್ತು ದಂಡನೆ ತಂತ್ರಗಳು ಪ್ರಮುಖವಾಗಿದ್ದವು. ಶೈವರಲ್ಲದವರಿಗೆ ಈ ಕಾಳಾಮುಖ ಶೈವರು ತಮ್ಮ ದೇವರುಗಳಿಗೆ ತಮ್ಮ ದೇಹದ ಅಂಗಾಂಗಗಳನ್ನು ಅರ್ಪಿಸುವ ಸವಾಲನ್ನು ಹಾಕುತ್ತಿದ್ದರು. ನಾವು ನಮ್ಮ ಕೈ, ಕಾಲು, ತಲೆಗಳನ್ನು ಶಿವನಿಗೆ ಅರ್ಪಿಸುವೆವು. ನೀವು ಕೂಡ ನಿಮ್ಮ ನಿಮ್ಮ ದೇವರುಗಳಿಗೆ ನಿಮ್ಮ ಅಂಗಾಂಗಗಳನ್ನು ಅರ್ಪಿಸಿ ಇಲ್ಲವೇ ಶೈವತ್ವವನ್ನು ಒಪ್ಪಿ ಎಂದು ಶೈವತ್ವವನ್ನು ಬಲವಂತವಾಗಿ ಹೇರುತ್ತಿದ್ದರು. ಏಳನೇ ಶತಮಾನದಲ್ಲಿ ಬಂದಿದ್ದ ಚೀನಿ ಯಾತ್ರಿಕ ಹುಯೆನ್ ತ್ಸಾಂಗ್
ಸಹ ಇಂಥ ಕಾಳಾಮುಖನೊಬ್ಬ ತನಗೆ ಸವಾಲು ಹಾಕಿ ಸೋತಿದ್ದನೆಂದು ದಾಖಲಿಸಿದ್ದಾನೆ.

ಈ ಸವಾಲುವಾದದ ಕೈ ಕತ್ತರಿಸಿಕೊಳ್ಳುತ್ತಿರುವ, ತಲೆ ಕತ್ತರಿಸಿಕೊಳ್ಳುತ್ತಿರುವ ಮೂರ್ತಸ್ವರೂಪಗಳನ್ನು ಶ್ರೀಶೈಲದ ದೇವಸ್ಥಾನವಲ್ಲದೆ ಶೈವ ಪರಂಪರೆಯ ಅನೇಕ ಗುಡಿಗಳ ಸುತ್ತಲೂ ಈಗಲೂ ನೋಡಬಹುದು. ಹಾವೇರಿ ಜಿಲ್ಲೆಯ ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಕೆತ್ತಿರುವ ಏಕಾಂತರಾಮನು ಜೈನರಿಗೆ ಸವಾಲೊಡ್ಡಿ ತನ್ನ ಶಿರಚ್ಛೇದ ಮಾಡಿಕೊಂಡು ಸವಾಲು ಗೆದ್ದ ಕತೆಯ ಶಿಲ್ಪ ಮತ್ತು ಶಾಸನ ಕಾಳಾಮುಖ-ವೀರಶೈವ -ಲಿಂಗಾಯತದ ಪ್ರಮುಖ ಕೊಂಡಿಯಾಗಿದೆ.

ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನವು ಕಾಳಾಮುಖ ಆಚಾರ್ಯನ ಮೂರನೇ ಕೊನೆಯ ಸಂತತಿಯ ಅಧಿಕಾರ ದಲ್ಲಿತ್ತು ಎಂದು ಅಲ್ಲಿನ ಶಾಸನವೇ ತಿಳಿಸುತ್ತದೆ. ಅಬಲೂರು ಶಾಸನ ಮತ್ತು ಚೆನ್ನಬಸವ ಪುರಾಣದಲ್ಲಿ ಬಂದಿರುವ ಏಕಾಂತರಾಮಯ್ಯನೇ ಏಕೋರಾಮರಾಧ್ಯ ಎನ್ನಲಾಗಿದೆ! ಶರಣ ಚಳವಳಿಯ ವಚನಗಳಲ್ಲಿಯೂ ಈ ಸವಾಲು ವಾದ ಅತ್ಯಂತ ಢಾಳಾಗಿ ಕಾಣಸಿಗುತ್ತದೆ. ಇತಿಹಾಸದ ಅನೇಕ ಶೈವ ಪರಂಪರೆಯ ಪ್ರಭುತ್ವಗಳು ಈ ಕಾಳಾಮುಖ ಶೈವರಿಂದ ಸಾಕಷ್ಟು ಸಹಾಯವನ್ನು ಪಡೆದಿವೆ. ಚೋಳರು ಇವರ ಗೌರವಾರ್ಥವಾಗಿ ಒಂದು ನೌಕೆಗೆ ಕಾಳಾಮುಖ ಎಂದು ಹೆಸರಿಸಿದ್ದರು ಎನ್ನಲಾಗುತ್ತದೆ. ಮಣಿರತ್ನಂರ ಇತ್ತೀಚಿನ ಸರಣಿಚಿತ್ರ ‘ಪೊನ್ನಿಯಿನ್ ಸೆಲ್ವನ್ 1/2’ರಲ್ಲಿ ಬರುವ ಕಾಳಾಮುಖ ಪಾತ್ರ ಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಇದು ಅಂದು ಪ್ರತಿಯೊಂದು ಮತಪಂಥಗಳು ತಮ್ಮ ತಮ್ಮ ಪಂಥವನ್ನು ಉಳಿಸಿಕೊಳ್ಳಲು ಮಾಡಲೇಬೇಕಿದ್ದ ಧರ್ಮ ಯುದ್ಧವಾಗಿತ್ತು. ಕೇವಲ ವೀರಶೈವ ಪಂಥವಲ್ಲದೆ ಹಿಂದೂ, ಜೈನ, ಬೌದ್ಧ, ವೈಷ್ಣವ ಮತ್ತೆ ಪಂಥಗಳೂ ಹೀಗೆ ಪಂಥ ಶ್ರೇಷ್ಠತೆಯ ಯುದ್ಧದಲ್ಲಿ ಅಸ್ತಿತ್ವಕ್ಕಾಗಿ, ಅಸ್ಮಿತೆಗಾಗಿ ಹೋರಾಡತೊಡಗಿದ್ದವು ಎಂಬುದು ಭಾರತದ ಇತಿಹಾಸದಾದ್ಯಂತ ಮೇಲ್ನೋಟಕ್ಕೇ ಕಾಣುವ ಐತಿಹಾಸಿಕ ಸತ್ಯ.

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)

ಇದನ್ನೂ ಓದಿ: Ravi Hanz Column: ತಲೆಮಾಸಿದ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆ !