Monday, 18th November 2024

HC Mahadevappa: ಬೌದ್ಧ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದ ಸಚಿವ ಮಹದೇವಪ್ಪ?

HC mahadevappa

ಬೆಂಗಳೂರು: ʼತಾನು ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿʼ ಸಮಾಜ ಕಲ್ಯಾಣ ಸಚಿವ ಡಾ.ಹೆಚ್​. ಸಿ ಮಹದೇವಪ್ಪ (HC Mahadevappa) ಘೋಷಣೆ ಮಾಡಿದ್ದಾರೆ ಎಂಬಂತೆ ಕಂಡುಬಂದಿರುವ ಅವರ ಸಾಮಾಜಿಕ ಜಾಲತಾಣ (Social Media) ಎಕ್ಸ್‌ ಪೋಸ್ಟ್‌ (ಟ್ವೀಟ್‌) ಇದೀಗ ಕುತೂಹಲ ಕೆರಳಿಸಿದೆ.

ನಿನ್ನೆ ಧಮ್ಮ ಚಕ್ರ ಪರಿವರ್ತನಾ ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಅವರು ಶುಭಾಶಯ ಕೋರಿ ಪೋಸ್ಟ್ ಮಾಡಿದ್ದರು. ಅದು ಹೀಗಿದೆ:

“ಹಿಂದೂ ಧರ್ಮ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ. ಹಾಗಾಗಿ ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ. ವ್ಯಕ್ತಿಯ ಬೆಳವಣಿಗೆಗೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ ಅತ್ಯಂತ ಮುಖ್ಯ. ಆದರೆ ನನ್ನ ಅನುಭವದಲ್ಲಿ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿರುವ ಹಿಂದೂ ಧರ್ಮವು ಸುಧಾರಣೆ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಮತ್ತು ಮುಂದೆ ಎಲ್ಲರೂ ಭಾರತದ ಮೂಲ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಿ ತನ್ನ 3.5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಬಾಬಾ ಸಾಹೇಬರ ಧಮ್ಮ ಚಕ್ರ ಪರಿವರ್ತನಾ ದಿನದಂದು ಎಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು.”

ಈ ಪೋಸ್ಟನ್ನು ನೋಡಿದ ತುಂಬಾ ಜನ, ಸಚಿವರು ಬೌದ್ಧ ಧರ್ಮಕ್ಕೆ ಸೇರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಹಾಗೇನೂ ಇಲ್ಲ, ಅವರು ಡಾ.ಅಂಬೇಡ್ಕರ್‌ ಅವರ ಮಾತುಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೋ ಅಥವಾ ಅಂಬೇಡ್ಕರ್‌ ಅವರ ಮಾತುಗಳನ್ನು ಮಾತ್ರ ಬರೆದಿದ್ದಾರೋ ಎಂದು ಸ್ಪಷ್ಟವಾಗದ ಕಾರಣ ಗೊಂದಲ ಉಂಟಾಗಿದೆ.

ಇದನ್ನೂ ಓದಿ: Tumkur News: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ರಾಜ್ಯಮಟ್ಟದ ಮಹಾಧಿವೇಶನ