ಚಿಕ್ಕಬಳ್ಳಾಪುರ: ದಸರಾ ವಿಜಯ ದಶಮಿ ಪ್ರಯುಕ್ತ ಭಾನುವಾರ ಜಿಲ್ಲಾ ಕೇಂದ್ರದಲ್ಲಿ ನೂರಾರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ನಗರದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಭಾರತಮಾತೆಗೆ ಜಯ ಘೋಷ ಮೊಳಗಿಸಿದರು.
ಪ್ರತಿ ವರ್ಷದಂತೆ ವಿಜಯದಶಮಿ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ವಿಜಯಯಾತ್ರೆಯನ್ನು ಚಿಕ್ಕಬಳ್ಳಾಪುರ ಶಾಖೆಯ ಸ್ವಯಂ ಸೇವಕರು ಶ್ರದ್ಧಾಭಕ್ತಿಯಿಂದ ನಡೆಸಿಗಮನ ಸೆಳೆದರು.
ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕರಸೇವಕರು ಜಮಾಯಿಸಿ ನಗರದ ನಗರಸಭೆ ಆವರಣ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ವಾಪಸಂದ್ರ ರಸ್ತೆ, ಬಿಬಿ ರಸ್ತೆ ಮೂಲಕ ನಗರದ ಮುಖ್ಯ ರಸ್ತೆಗಳಲ್ಲಿ ಆಕರ್ಷಕ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಕ್ಕಳು, ಯುವಕರು, ಹಿರಿಯರು ಸೇರಿ ಸಂಘದ ಗಣವೇಷದಾರಿಗಳಾಗಿ ಪಥ ಸಂಚಲನದಲ್ಲಿ ಶಿಸ್ತು ಬದ್ಧವಾಗಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಭಾರತಾಂಭೆಯ ಭಾವಚಿತ್ರವನ್ನು ಜೀಪಿನಲ್ಲಿ ಮೆರವಣಿಗೆ ನಡೆಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮೆರವಣಿಗೆ ನಡೆಸುವ ಮಾರ್ಗದಲ್ಲಿ ನಗರದ ಜನತೆ, ಸಾರ್ವಜನಿ ಕರು ಹೂ ಮಳೆ ಸುರಿದು ಅದ್ಧೂರಿ ಸ್ವಾಗತ ಕೋರಿದರು. ಅನೇಕ ಹಿರಿಯ ಬಿಜೆಪಿ ಮುಖಂಡರು, ನಗರಸಭಾ ಸದಸ್ಯರು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಬಿಗಿ ಪೊಲೀಸ್ ಭದ್ರತೆ: ಆರ್ಎಸ್ಎಸ್ ಸ್ವಯಂ ಸೇವಕರು ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಠಾಣೆ ಪೊಲೀಸರು ಬಿಗಿ ಪೊಲೀಸ್ ಭದ್ರತೆ ವಹಿಸಿದ್ದರು.