ನವದೆಹಲಿ: ಭಾರತೀಯ ಚುನಾವಣಾ ಆಯೋಗವು (EC) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ(Assembly Elections 2024)ಗಳ ದಿನಾಂಕ(Poll Dates) ಇಂದು ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ. ದೀಪಾವಳಿ, ಛತ್ ಮತ್ತು ದೇವ್ ದೀಪಾವಳಿ ಸೇರಿದಂತೆ ಮುಂಬರುವ ಹಲವಾರು ಹಬ್ಬಗಳ ಹಿನ್ನೆಲೆ ಚುನಾವಣಾ ಆಯೋಗವು ನವೆಂಬರ್ ಎರಡನೇ ವಾರದಲ್ಲಿ ಮತದಾನವನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ಇನ್ನು ಮಹಾರಾಷ್ಟ್ರ ವಿಧಾನಸಭೆಯ ಅವಧಿಯು ನವೆಂಬರ್ 26 ರಂದು ಮುಕ್ತಾಯಗೊಳ್ಳಲಿದ್ದು, ಜಾರ್ಖಂಡ್ ವಿಧಾನಸಭೆಯ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ 288 ಸ್ಥಾನಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜಾರ್ಖಂಡ್‌ನಲ್ಲಿ 81 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು ಇಂದು ಘೋಷಣೆ ಮಾಡಲಿದೆ.
ಮಹಾರಾಷ್ಟ್ರದ ಬಿಜೆಪಿ ಕಸರತ್ತು ಶುರು
2019 ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಸೋಮವಾರ, ಅದರ ಕೋರ್ ಕಮಿಟಿ ಸಭೆಯಲ್ಲಿ, ಪಕ್ಷವು ಚುನಾವಣೆಗೆ ಒಳಪಡುವ ರಾಜ್ಯದ ಎಲ್ಲಾ 288 ಸ್ಥಾನಗಳ ಬಗ್ಗೆ ಚರ್ಚಿಸಿದೆ. ಆದಾಗ್ಯೂ, ಬಿಜೆಪಿಯು 100 ಸ್ಥಾನಗಳಲ್ಲಿ ಸ್ಪರ್ಧಿಸುವುದು ಖಚಿತ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನಗಳ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ. ಈ ಕ್ಷೇತ್ರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿದ್ದು, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕಾಗುತ್ತದೆ.
ಬಿಜೆಪಿಯ ಮೂಲಗಳ ಪ್ರಕಾರ, ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಕೇಸರಿ ಪಕ್ಷವು ತನ್ನ ಹಾಲಿ ಶಾಸಕರಿಗೇ ಮತ್ತೊಮ್ಮೆ ಮಣೆ ಹಾಕುವು ಸಾಧ್ಯತೆ ದಟ್ಟವಾಗಿದೆ. ಮೊದಲ ಪಟ್ಟಿಯಲ್ಲಿ ಹಿರಿಯ ಶಾಸಕರು ಮತ್ತು ಹಾಲಿ ಸಚಿವರ ಹೆಸರು ಇರಬಹುದು ಎಂದು ಅಂದಾಜಿಸಲಾಗಿದೆ.
ಜಾರ್ಖಂಡ್‌ನಲ್ಲಿ JMM ಮಾಸ್ಟರ್ ಪ್ಲ್ಯಾನ್
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲಾ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ. ಸೋಮವಾರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕೇಂದ್ರ ಸಮಿತಿ ಸಭೆಯ ನಂತರ ಮಾತನಾಡಿದ ಸೊರೆನ್, ಪಕ್ಷದ ಚುನಾವಣಾ ಸಿದ್ಧತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ರಾಜ್ಯದಲ್ಲಿ ಮೈತ್ರಿಕೂಟವು ಮತ್ತೆ ಅಧಿಕಾರವನ್ನು ಪಡೆಯಲಿದೆ ಎಂದು ಪ್ರತಿಪಾದಿಸಿದರು.
2025ರ ಜನವರಿ 5ಕ್ಕೆ ವಿಧಾನಸಭೆಯ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
“ನಾನು ಇಂದು ಎಲ್ಲಾ ಕಾರ್ಯಕರ್ತರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಜೆಎಂಎಂ ಕೇಂದ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೇನೆ. ನಾವು ನಮ್ಮ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಿದ್ದೇವೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲಾ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಸೋರೆನ್ ಸಭೆಯ ನಂತರ ಹೇಳಿದರು.
ಈ ಸುದ್ದಿಯನ್ನೂ ಓದಿ: Pralhad Joshi: ಹರಿಯಾಣ, ಜಮ್ಮು-ಕಾಶ್ಮೀರ ಫಲಿತಾಂಶ ಮೋದಿ ಸಮರ್ಥ ನಾಯಕತ್ವಕ್ಕೆ ನಿದರ್ಶನ ಎಂದ ಜೋಶಿ