Sunday, 24th November 2024

IND vs NZ Test: ಬಲು ರೋಚಕ ಭಾರತ-ಕಿವೀಸ್‌ ಟೆಸ್ಟ್‌ ದಾಖಲೆ

ಬೆಂಗಳೂರು: ಮೂರು ವರ್ಷಗಳ ಬಳಿಕ ನ್ಯೂಜಿಲ್ಯಾಂಡ್‌(IND vs NZ Test) ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಮೊದಲ ಪಂದ್ಯ ನಾಳೆ(ಅಕ್ಟೋಬರ್ 16 ,ಬುಧವಾರ) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಉಭಯ ತಂಡಗಳ ದಾಖಲೆಯ ಇಣುಕು ನೋಟ ಹೀಗಿದೆ.

ಮುಖಾಮುಖಿ

ಭಾರತ ಮತ್ತು ನ್ಯೂಜಿಲ್ಯಾಂಡ್‌ ಇದುವರೆಗೆ 62 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 22 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲ್ಯಾಂಡ್‌ 13 ಪಂದ್ಯದಲ್ಲಿ ಗೆಲುವು ಸಾಧಿಸಿದೆ. 27 ಪಂದ್ಯಗಳು ಡ್ರಾ ಗೊಂಡಿದೆ. ಇತ್ತಂಡಗಳು ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯ ಆಡಿದ್ದು 2021ರಲ್ಲಿ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯವನ್ನು ಭಾರತ 372 ರನ್‌ ಅಂತರದಿಂದ ಗೆದ್ದು ಬೀಗಿತ್ತು. ಕೊನೆಯ 5 ಪಂದ್ಯಗಳ ಫಲಿತಾಂಶ ನೋಡುವುದಾದರೆ ಕಿವೀಸ್‌ ಮೂರು ಪಂದ್ಯ ಗೆದ್ದರೆ, ಭಾರತ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ರ ಡ್ರಾಗೊಂಡಿದೆ.

ಅತ್ಯಧಿಕ ರನ್‌

ಉಭಯ ತಂಡಗಳ ನಡುವಣ ಇದುವರೆಗಿನ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಹೆಸರಿನಲ್ಲಿದೆ. ದ್ರಾವಿಡ್‌ 15 ಪಂದ್ಯಗಳಿಂದ 1659 ರನ್‌ ಬಾರಿಸಿದ್ದಾರೆ. ಈ ವೇಳೆ ಅವರು ತಲಾ 6 ಶತಕ ಮತ್ತು ಅರ್ಧಶತಕ ಬಾರಿಸಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಸಚಿನ್‌ ತೆಂಡೂಲ್ಕರ್‌(1595) ಮತ್ತು ಬ್ರೆಂಡನ್‌ ಮೆಕಲಮ್‌(1224) ಕಾಣಿಸಿಕೊಂಡಿದ್ದಾರೆ.

ಅತ್ಯಧಿಕ ವಿಕೆಟ್‌

ಇತ್ತಂಡಗಳ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಆರ್‌.ಅಶ್ವಿನ್‌ ಹೆಸರಿನಲ್ಲಿದೆ. ಅವರು ಇದುವರೆಗೆ 9 ಪಂದ್ಯ ಆಡಿ 66 ವಿಕೆಟ್‌ ಕಿತ್ತಿದ್ದಾರೆ. 7/59 ಗರಿಷ್ಠ ವೈಯಕ್ತಿಕ ಸಾಧನೆಯಾಗಿದೆ. ರಿಚರ್ಡ್ ಹ್ಯಾಡ್ಲೀ(65) ಮತ್ತು ಬಿಶನ್ ಬೇಡಿ(57) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್‌ ಈ ಬಾರಿಯೂ ಸರಣಿಯನ್ನಾಡುತ್ತಿರುವ ಕಾರಣ ಅವರಿಗೆ ತಮ್ಮ ವಿಕೆಟ್‌ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶವಿದೆ.

ಇದನ್ನೂ ಓದಿ IND vs NZ Test: ದಾಖಲೆಯ ಹೊಸ್ತಿಲಲ್ಲಿ ಭಾರತ-ಕಿವೀಸ್‌ ಟೆಸ್ಟ್‌ ಸರಣಿ

ಚಿನ್ನಸ್ವಾಮಿಯಲ್ಲಿ ಭಾರತ ಅಜೇಯ

ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್​ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯ, ಬೆಂಗಳೂರಿನಲ್ಲಿ ನಡೆಯಲಿರುವ 25ನೇ ಟೆಸ್ಟ್​ ಪಂದ್ಯವೆನಿಸಿದೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ರಜತೋತ್ಸವ ಕಂಡ ಭಾರತದ ಅಪರೂಪದ ಸ್ಟೇಡಿಯಂಗಳ ಪಟ್ಟಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸೇರ್ಪಡೆಗೊಳ್ಳುತ್ತಿದೆ. 2012ರಲ್ಲಿ ಕಿವೀಸ್​ ಎದುರು ಬೆಂಗಳೂರಿನಲ್ಲಿ ಕೊನೆಯದಾಗಿ ಆಡಿದಾಗ ಭಾರತ ಈ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಇದುವರೆಗೆ ನ್ಯೂಜಿಲ್ಯಾಂಡ್‌​ ಎದುರು ಭಾರತ ಬೆಂಗಳೂರಿನಲ್ಲಿ ಒಟ್ಟು ಮೂರು ಟೆಸ್ಟ್​ ಪಂದ್ಯ ಆಡಿದ್ದು ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಜೇಯ ದಾಖಲೆ ಹೊಂದಿದೆ.