ಬೆಂಗಳೂರು: ಬೆಂಗಳೂರಿನಲ್ಲಿ (Bengaluru crime news) ಕಲಬುರಗಿ ಮೂಲದ ಕ್ಯಾಬ್ ಡ್ರೈವರ್ ಕುಟುಂಬದ ನಾಲ್ವರ ಆತ್ಮಹತ್ಯೆ (family self harming) ಘಟನೆ ನಿನ್ನೆ ನಡೆದಿತ್ತು. ಕುಟುಂಬದ ದುರಂತವನ್ನು ಕಂಡು ಜನರ ಮನ ಮರುಗಿತ್ತು. ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ ಕ್ಯಾಬ್ ಡ್ರೈವರ್ (Cab driver)ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿತ್ತು. ಆದರೆ ಪ್ರಾಥಮಿಕ ತನಿಖೆಯ ಬಳಿಕ ಬೇರೆಯದೇ ಸತ್ಯ ಹೊರಬಿದ್ದಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಯಡಿಯೂರಪ್ಪ ನಗರದಲ್ಲಿ ದುರಂತ ನಡೆದಿತ್ತು. ಮೃತರನ್ನು ಕಲಬುರಗಿ ಮೂಲದ ಕ್ಯಾಬ್ ಡ್ರೈವರ್ ಅವಿನಾಶ್, ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿತ್ತು.
5 ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್ ಸುಮಾರು 6 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರಂತೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಅವಿನಾಶ್ ಕುಟುಂಬಕ್ಕೆ ಆರ್ಥಿಕ ಸಮಸ್ಯೆಯಿತ್ತು. ಸಾಲ ಸೋಲ ಮಾಡಿಕೊಂಡ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಪತಿಯ ಆರ್ಥಿಕ ಸಂಕಷ್ಟದಿಂದ ಮನನೊಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ಗಂಡ ಅವಿನಾಶ್ ಕೆಲಸಕ್ಕೆ ಹೋದ ಬಳಿಕ ಮಮತಾ ತನ್ನ ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು ತಾನೂ ಕೂಡ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದಾರೆ ಎನ್ನಲಾಗಿದ್ದು, ನಂತರ ಸಂಜೆ ಅವಿನಾಶ್ ಹಲವು ಬಾರಿ ಕರೆ ಮಾಡಿದರೂ ಸಹ ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಹೇಳಿದ್ದಾರೆ. ಈ ವೇಳೆ ಅವರು ಅನೇಕ ಬಾರಿ ಮನೆಯ ಬಾಗಿಲು ಬಡಿದರೂ ತೆಗೆದಿಲ್ಲ.
ರಾತ್ರಿ 9 ಗಂಟೆ ವೇಳೆಗೆ ಅವಿನಾಶ್ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದ ಮನೆ ಬೀಗ ತೆಗೆದು ಒಳಹೋದಾಗ ಮಕ್ಕಳನ್ನು ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದುದು ಕಂಡುಬಂದಿತ್ತು. ಪತ್ನಿ ಮಕ್ಕಳ ಸಾವನ್ನು ಕಂಡ ಅವಿನಾಶ್ ಪತ್ನಿಯ ಮೃತದೇಹವನ್ನು ತೆಗೆದು ಅದೇ ಹಗ್ಗಕ್ಕೆ ತಾವೂ ಕೊರಳು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: Self Harming: ಮದರಸಾ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ