ವೀರೇಶ್ಎಸ್ ಕೆಂಭಾವಿ, ಯಾದಗಿರಿ
ಜಾನುವಾರುಗಳಲ್ಲಿ ಕಾಣಿಸಿಕೊಂಡ ಲಂಪಿ ಸ್ಕಿನ್ ರೋಗ
ವಾರದಲ್ಲಿ ನಾಲ್ಕು ಕರುಗಳ ಬಲಿ
ಕಳೆದ ಬಾರಿ ಗಣನೀಯ ಪ್ರಮಾಣದಲ್ಲಿ ಜಾನುವಾರುಗಳ ಸಾವು ನೋವಿಗೆ ಕಾರಣವಾಗಿದ್ದ ಚರ್ಮಗಂಟು (ಲಂಪಿ
ಸ್ಕಿನ್) ರೋಗ ಇದೀಗ ಮತ್ತೆ ಜಿಲ್ಲೆಯ ಜಾನುವಾರು ಗಳಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ನಾಲ್ಕು ಕರುಗಳು ಮೃತಪಟ್ಟಿರುವುದು ವರದಿಯಾಗಿದೆ.
ತಾಲೂಕಿನ ಕಂಚಗಾರಹಳ್ಳಿ ತಾಂಡದ ಹಲವು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು,
ತಾಂಡದ ರೈತ ಸೋಮು ರಾಠೋಡ ಎಂಬುವರ ನಾಲ್ಕು ಕರುಗಳು ರೋಗದಿಂದ ಬಲಿಯಾಗಿದ್ದು, ಬದುಕಿಗೆ
ಆಸರೆಯಾಗಿರುವ ಜಾನುವಾರುಗಳ ಸಾವಿನಿಂದ ಅನ್ನದಾತ ಕಂಗಾಲಾಗಿದ್ದಾನೆ.
೭೦ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮೂಲಕ ಉಪಜೀವನ ನಡೆಸುತ್ತಿರುವ ರೈತ ಸೋಮು ರಾಠೋಡ್
ಹೇಳುವಂತೆ ಮೊದಲಿಗೆ ಲಂಪಿ ಸ್ಕಿನ್ ರೋಗ ಮೊದಲು ಒಂದು ಕರುವಿನಲ್ಲಿ ಕಂಡುಬಂದಿದ್ದು, ದೇಹದ ತುಂಬೆಲ್ಲ
ಚರ್ಮ ಗಂಟು ಗಂಟಾಗಿದೆ. ರೈತ ಸೋಮು ಪಶು ವೈದ್ಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಿದರೂ, ಗುಣಮುಖ ವಾಗಿಲ್ಲ. ಬದಲಿಗೆ ರೋಗಕ್ಕೆ ತುತ್ತಾಗಿರುವ ಕರುವಿನಿಂದ ಇನ್ನೂ ಮೂರು ಕರುಗಳಿಗೆ ರೋಗ ಹರಡಿದೆ. ಹೀಗಾಗಿ ಒಂದೇ ವಾರದಲ್ಲಿ ರೋಗಕ್ಕೆ ತುತ್ತಾಗಿದ್ದ ನಾಲ್ಕು ಕರುಗಳು ಪ್ರಾಣ ಕಳೆದುಕೊಂಡಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಉಳುಮೆ ಮಾಡುವ ಹೋರಿ, ಹಾಲು ಕೊಡುವ ಹಸು, ಎಮ್ಮೆ ಸೇರಿದಂತೆ ಎಲ್ಲಾ ವಯೋಮಾನದ ಜಾನು ವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಒಂದಕ್ಕೆ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮತ್ತೊಂದಕ್ಕೆ ಬಂದಿರುತ್ತದೆ ರೋಗ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಸಾವಿಗೀಡಾರುವ ಹಸುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ರೋಗ ಹೇಗೆ ಹರಡುತ್ತದೆ
ಈ ಚರ್ಮಗಂಟು ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಅತಿ ವೇಗವಾಗಿ ಹರಡುತ್ತದೆ. ರೋಗ ಬಂದ ಹಸುವಿನ ಜೊತೆಗೆನೇ ಎಲ್ಲ ಹಸುಗಳನ್ನು ಮೇಯಿಸುವುದು, ಒಂದೇ ಕೊಟ್ಟಿಗೆಯಲ್ಲಿ ಕಟ್ಟುವು ದರಿಂದ ರೋಗ ಒಂದರಿಂದ ಒಂದಕ್ಕೆ ಅತಿ ವೇಗವಾಗಿ ಹರಡುತ್ತಿದೆ. ರೋಗ ಅಂಟಿಕೊಂಡರೇ ಜಾನುವಾರಿನ ದೇಹದ ತುಂಬೆಲ್ಲ ಗಂಟು ಗಂಟುಗಳು ಆಗುತ್ತವೆ.ನಿರ್ಲಕ್ಷ ಮಾಡಿದರೆ ದನಗಳು ಮೃತಪಡುವ
ಸಾಧ್ಯತೆಗಳು ಹೆಚ್ಚು.
ರೋಗದ ಪ್ರಮುಖ ಲಕ್ಷಣಗಳು
ಪ್ರಾಣಿಗಳ ಕಣ್ಣು ಮತ್ತು ಮೂಗಿನಿಂದ ನೀರು ಬರುತ್ತದೆ. ಮೂಗಿನಿಂದ ಊತ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ
ಪ್ರಾಣಿಗಳಿಗೆ ಜ್ವರ ಬರುತ್ತದೆ ಮತ್ತು ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಮೇವು ತಿನ್ನುವುದು, ನೀರು ಕುಡಿ ಯುವುದು ಕಡಿಮೆಯಾಗುತ್ತದೆ. ಪ್ರಾಣಿಗಳ ತಲೆ, ಕುತ್ತಿಗೆ, ಹಣೆ, ಎದೆ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳು ತ್ತವೆ. ಬಾಯಿ ಹುಣ್ಣುಗಳು ಉಂಟಾಗಿ ಆಹಾರ ತಿನ್ನಲು ಕಷ್ಟವಾಗುತ್ತದೆ. ಇದರಿಂದ ಪ್ರಾಣಿಗಳು
ಮೃತಪಡುವ ಸಾಧ್ಯತೆ ಇರುತ್ತದೆ.
*
ಹಾಲು ಕೊಡುವ ಹಸುಗಳು ಸಾವನ್ನಪ್ಪಿದರೆ ರೈತರ ಜೀವನ ಕ್ರಮವೇ ಏರುಪೇರಾಗುತ್ತದೆ. ಜಿಲ್ಲೆಯಲ್ಲಿ ಹಲವು ದಿನಗಳಿಂದ ಪಶುಪಾಲನೆ ಇಲಾಖೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ರೋಗಪೀಡಿತ ಜಾನುವಾರುಗಳಿಗೆ ಚುಚ್ಚುಮದ್ದು ಕೊಡಿಸಿ, ರೈತರ ನೆರವಿಗೆ ನಿಲ್ಲುವ ಕೆಲಸವಾಗುತ್ತಿಲ್ಲ.
- ಉಮೇಶ್ ಮುದ್ನಾಳ, ಸಾಮಾಜಿಕ ಹೋರಾಟಗಾರ
ಚರ್ಮಗಂಟು ರೋಗ ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುವ ರೋಗವಾಗಿದೆ. ಹೀಗಾಗಿ ರೋಗ ತೀವ್ರ ಸ್ವರೂಪ ಪಡೆಯುವ ಮುನ್ನ ಜಿಲ್ಲಾಧಿಕಾರಿಗಳು ಜಾನುವಾರು ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸ ಬೇಕು. ಜೊತೆಗೆ ಹಸು, ಕರುಗಳನ್ನ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು.- ಟಿ. ಎನ್. ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷರು