ಬೆಂಗಳೂರು: ಭಾರತ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಪ್ರವಾಸಿ ನ್ಯೂಜಿಲ್ಯಾಂಡ್ ತಂಡಕ್ಕೆ ಆಘಾತವೊಂದು ಎದುರಾಗಿದೆ. ಈಗಾಗಲೇ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾದ ಬೆನ್ನಲ್ಲೇ ತಂಡದ ಯುವ ವೇಗಿ ಬೆನ್ ಸಿಯರ್ಸ್(Ben Sears) ಸರಣಿಯಿಂದಲೇ ಹೊರಗುಳಿದಿದ್ದಾರೆ. ಮೊಣಕೈ ಗಾಯದಿಂದ ಚೇತರಿಕೆ ಕಾಣದ ಕಾರಣ ಅವರನ್ನು ಸರಣಿಂದ ಕೈ ಬಿಡಲಾಗಿದೆ.
ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಬೆನ್ ಸಿಯರ್ಸ್ ಮೊಣಕೈ ಗಾಯಕ್ಕೆ ಸಿಲುಕಿದ್ದರು. ಆದಾಗ್ಯೂ ಅವರನ್ನು ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲು ಕಿವೀಸ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಅವರ ಸ್ಥಾನಕ್ಕೆ ಜೇಕೊಬ್ ಡಫಿ(Jacob Duffy) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಜೇಕೊಬ್ ಡಫಿಗೆ ಇದು ಟೆಸ್ಟ್ ತಂಡದ ಚೊಚ್ಚಲ ಕರೆಯಾಗಿದೆ. ಕಿವೀಸ್ ಪರ 6 ಏಕದಿನ ಮತ್ತು 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಕೆಂಪು ಚೆಂಡಿನ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು 299 ವಿಕೆಟ್ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಸೆ ಜೀವಂತವರಿಸಿಕೊಳ್ಳಬೇಕಿದ್ದರೆ ನ್ಯೂಜಿಲ್ಯಾಂಡ್ಗೆ ಈ ಸರಣಿಯಲ್ಲಿ ಗೆಲುವು ಅತ್ಯಗತ್ಯ. ಸದ್ಯ ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರಷ್ಟೇ ಕಿವೀಸ್ಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪುವ ಅವಕಾಶ ಸಿಗಬಹುದು. ಅಗ್ರ ಸ್ಥಾನಿಯಾಗಿರುವ ಭಾರತಕ್ಕೂ ಫೈನಲ್ ಸ್ಥಾನ ಖಾತ್ರಿಪಡಿಸಬೇಕಿದ್ದರೆ ಸರಣಿ ಗೆಲುವು ಹೀಗಾಗಿ ಈ ಟೆಸ್ಟ್ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.
ನ್ಯೂಜಿಲ್ಯಾಂಡ್ ಪರಿಷ್ಕೃತ ತಂಡ
ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿ.ಕೀ), ಮೈಕೆಲ್ ಬ್ರೇಸ್ವೆಲ್ (ಮೊದಲ ಟೆಸ್ಟ್ ಮಾತ್ರ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಒ’ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಜಾಕೋಬ್ ಡಫಿ, ಇಶ್ ಸೋಧಿ (2ನೇ ಮತ್ತು 3ನೇ ಟೆಸ್ಟ್ ಮಾತ್ರ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ಮೊಹಮ್ಮದ್. ಸಿರಾಜ್, ಆಕಾಶ್ ದೀಪ್. ಪ್ರಯಾಣ ಮೀಸಲು: ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್, ಪ್ರಸಿದ್ಧ್ ಕೃಷ್ಣ.
ಸರಣಿ ವೇಳಾಪಟ್ಟಿ
ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು
ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ
ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ