ಜೈಪುರ: ಸಾಮಾನ್ಯವಾಗಿ ನಮ್ಮಲ್ಲಿ ಮನೆಗಳನ್ನು ಲಾಕ್ ಮಾಡದೆ ಎಲ್ಲಿಗೂ ಹೋಗುವುದಿಲ್ಲ. ಯಾಕೆಂದರೆ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡಬಹುದು ಎಂಬ ಭಯ. ಹಾಗೆಯೇ ಮನೆಯೊಳಗೆ ಇದ್ದಾಗ ಕೂಡ ಕಳ್ಳರ ಭಯದಿಂದ ಮನೆಯನ್ನು ಒಳಗಿನಿಂದ ಲಾಕ್ ಮಾಡುತ್ತೇವೆ. ಆದರೆ ರಾಜಸ್ಥಾನದ ಒಂದು ಗ್ರಾಮದಲ್ಲಿ ಜನರು ಮನೆಯನ್ನು ಲಾಕ್ ಮಾಡುವುದೇ ಇಲ್ಲವಂತೆ. ಹಾಗಾದ್ರೆ ಈ ಪ್ರವಾಸಿ ಗ್ರಾಮ(Tourist Place) ಯಾವುದು? ಅದರ ವಿಶೇಷತೆ ಏನು ಎಂಬುದನ್ನು ತಿಳಿಯೋಣ.
ರಾಜಸ್ಥಾನದ ಜನರ ಸಂಸ್ಕೃತಿ ಮತ್ತು ಜೀವನವು ಬಹಳ ವಿಶಿಷ್ಟವಾಗಿದೆ. ರಾಜಸ್ಥಾನಿಯವರ ಉಡುಗೆ-ತೊಡುಗೆ ಮತ್ತು ಆಹಾರ ಎಲ್ಲವೂ ಬಹಳ ವಿಶೇಷವಾಗಿದೆ. ಆದರೆ ಈ ವಿಶೇಷತೆಯ ಪಟ್ಟಿಗೆ ಈಗ ದೇವಮಾಲಿ ಗ್ರಾಮದ ಹೆಸರು ಕೂಡ ಸೇರಲಿದೆ. ದೇವಮಾಲಿ ಇದು ರಾಜಸ್ಥಾನದ ಬೇವಾರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಗ್ರಾಮವನ್ನು ಪ್ರವಾಸೋದ್ಯಮಿ ಸಚಿವಾಲಯ ಭಾರತದ ಅತ್ಯುತ್ತಮ ಪ್ರವಾಸಿ ಗ್ರಾಮವೆಂದು ಘೋಷಿಸಿದೆ. ನವೆಂಬರ್ 27ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರವು ಈ ಗ್ರಾಮಕ್ಕೆ ಪ್ರಶಸ್ತಿಯನ್ನು ನೀಡಲಿದೆ. ಹಾಗಾದರೆ ಈ ಹಳ್ಳಿಯ ವಿಶೇಷತೆಯನ್ನು ತಿಳಿದುಕೊಳ್ಳೋಣ.
ದೇವಮಾಲಿ ಗ್ರಾಮದ ವಿಶೇಷತೆ ಏನು?
ಈ ಹಳ್ಳಿಯಲ್ಲಿ ಯಾರ ಹೆಸರಿನಲ್ಲಿಯೂ ಭೂಮಿ ಇಲ್ಲ. ಸುಮಾರು 3 ಸಾವಿರ ಬಿಘಾಗಳಲ್ಲಿ ನೆಲೆಸಿರುವ ಈ ಗ್ರಾಮದ ಎಲ್ಲಾ ಭೂಮಿ ಆ ಗ್ರಾಮದ ಪ್ರಧಾನ ದೇವರಾದ ದೇವನಾರಾಯಣನ ಹೆಸರಿನಲ್ಲಿದೆ. ಹಾಗಾಗಿ ಇಲ್ಲಿನ ಜನರು ಗ್ರಾಮದ ಭೂಮಿಯ ಮೇಲೆ ಯಾವುದೇ ಹಕ್ಕಿಲ್ಲ. ಅವರು ದೇವರ ಹೆಸರಿನ ಭೂಮಿಯಲ್ಲಿ ಇದ್ದಾರೆ ಎಂದು ನಂಬುತ್ತಾರೆ. ಇಲ್ಲಿನ ಜನರು ತಮ್ಮ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ ಮತ್ತು ಅವರು ಸಂಪ್ರದಾಯಗಳಿಗೆ ಅಂಟಿಕೊಂಡಿದ್ದಾರೆ.
ಇದು ಮಾತ್ರವಲ್ಲ, ಈ ಗ್ರಾಮದಲ್ಲಿ ಒಂದೇ ಒಂದು ಪಕ್ಕಾ ಮನೆ ಇಲ್ಲ, ಆದರೆ ಎಲ್ಲಾ ಮನೆಗಳು ಮಣ್ಣಿನಿಂದ ಮಾಡಲಾಗಿದೆ ಮತ್ತು ಈ ಮನೆಗಳು ಹುಲ್ಲಿನ ಚಾವಣಿಯನ್ನು ಹೊಂದಿವೆ. ಹಾಗೆಯೇ ಇಲ್ಲಿ ಯಾರೂ ಮಾಂಸ ಮತ್ತು ಮೀನು ತಿನ್ನುವುದಿಲ್ಲ. ಯಾರೂ ಮದ್ಯವನ್ನು ಮುಟ್ಟುವುದಿಲ್ಲ. ಇದಲ್ಲದೆ, ಅಡುಗೆ ಅಥವಾ ಉರುವಲಿಗೆ ಸೀಮೆಎಣ್ಣೆ ಮತ್ತು ಬೇವಿನ ಮರವನ್ನು ಬಳಸುವುದನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಹಳ್ಳಿಯ ಇನ್ನೊಂದು ವಿಶೇಷತೆಯೆಂದರೆ ಇಲ್ಲಿಯವರೆಗೆ ಈ ಗ್ರಾಮದಲ್ಲಿ ಒಂದೇ ಒಂದು ಕಳ್ಳತನದ ಘಟನೆ ನಡೆದಿಲ್ಲ. ಈ ಕಾರಣಕ್ಕಾಗಿ, ಇಲ್ಲಿನ ಜನರು ಯಾರೂ ತಮ್ಮ ಮನೆಗಳಿಗೆ ಬೀಗ ಹಾಕುವುದಿಲ್ಲ.
ಇದನ್ನೂ ಓದಿ:ಎಂಬಿಬಿಎಸ್ ಕನಸು ನನಸಾಗಿಸಲು 64ನೇ ವರ್ಷಕ್ಕೆ ನೀಟ್ ಪರೀಕ್ಷೆ ಪಾಸಾದ ಎಸ್ಬಿಐ ಉದ್ಯೋಗಿ
ಗ್ರಾಮದ ಈ ವಿಶಿಷ್ಟ ಸಂಪ್ರದಾಯಗಳು ಮತ್ತು ಸಂಸ್ಕೃತಿಯಿಂದಾಗಿ ಇದನ್ನು ಈ ವರ್ಷ ಅತ್ಯುತ್ತಮ ಪ್ರವಾಸಿ ಗ್ರಾಮವನ್ನಾಗಿ ಮಾಡಲಾಗಿದೆ. ಒಮ್ಮೆ ನೀವು ಈ ಹಳ್ಳಿಗೆ ಭೇಟಿ ನೀಡಿ. ರಾಜಸ್ಥಾನಕ್ಕೆ ಹೋದಾಗ, ನೀವು ಈ ಹಳ್ಳಿಯ ಸಂಸ್ಕೃತಿಯನ್ನು ಕಣ್ಣಾರೆ ನೋಡಬಹುದು.