ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ (Channapatna Bypoll) ಟಿಕೆಟ್ ತಮಗೆ ದೊರೆಯುವುದಿಲ್ಲ ಎಂಬುದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (CP Yogeshwar) ಖಚಿತವಾದಂತಿದೆ. ಹೀಗಾಗಿ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ಅವರು ಬುಧವಾರ ಕ್ಷೇತ್ರದ ಬಿಜೆಪಿ (BJP) ಮುಖಂಡರು, ಕಾರ್ಯಕರ್ತರ ಸಭೆ ಕರೆದಿದ್ದಾರೆ.
ಯೋಗೇಶ್ವರ್ ಚನ್ನಪಟ್ಟಣದಲ್ಲಿ ಉಪಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಉಭಯ ಪಕ್ಷಗಳ ಹಗ್ಗ ಜಗ್ಗಾಟದ ಪರಿಣಾಮ ಇನ್ನೂ ಟಿಕೆಟ್ ಯಾರಿಗೆ ಎಂಬುದು ಇತ್ಯರ್ಥವಾಗಿಲ್ಲ. ಅತ್ತ ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಖಚಿತವಾಗಿಲ್ಲ. ಉಭಯ ಪಕ್ಷಗಳೂ ಕಾದುವ ನೋಡುವ ತಂತ್ರವನ್ನು ಅನುಸರಿಸುತ್ತಿವೆ.
ಇದರ ನಡುವೆಯೇ ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ತಮ್ಮ ಪುತ್ರನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಕಳೆದ ವಾರ ಕ್ಷೇತ್ರದಲ್ಲಿ ಬಿರುಸಿನ ಕಾರ್ಯಕ್ರಮಗಳನ್ನು, ಪಕ್ಷದ ಕಾರ್ಯಕರ್ತರ ಸಭೆಗಳನ್ನು ಅವರು ನಡೆಸಿದ್ದರು. ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ಕರೆದುಕೊಂಡು ಸುತ್ತಾಡಿದ್ದರು. “ಅಭ್ಯರ್ಥಿ ಯಾರು ಎಂದು ವರಿಷ್ಠರು ನಿರ್ಧರಿಸುತ್ತಾರೆ. ನೀವು ಕೆಲಸ ಮಾಡಿ” ಎಂದು ಕರೆ ನೀಡಿದ್ದರು. ಹೀಗಾಗಿ, ನಿಖಿಲ್ ಮೈತ್ರಿ ಪಕ್ಷಗಳಿಂದ ಕಣಕ್ಕಿಳಿಯಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿದೆ.
ಹೀಗಾಗಿ, ಟಿಕೆಟ್ ವಿಚಾರವಾಗಿ ಅಸಮಾಧಾನಗೊಂಡಿರುವ ಯೋಗೇಶ್ವರ್ ಬಂಡಾಯದ ಅಸ್ತ್ರ ಪ್ರಯೋಗಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ. ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ, ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದಾರೆ.
ಚನ್ನಪಟ್ಟಣ ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಯಾವುದೇ ಒಪ್ಪಂದ ಆಗಿಲ್ಲ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಪದಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿ ಬಲಿಷ್ಠವಾಗಿದೆ. ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಂಡು ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಆಗ್ರಹಿಸಿದ್ದಾರೆ. ಈ ನಡುವೆಯೇ ಯೋಗೇಶ್ವರ್ ಸಭೆ ಕರೆದಿರುವುದು ಕುತೂಹಲಕ್ಕೆ ಮೂಡಿಸಿದೆ.
ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದ ನಂತರ ಯೋಗೇಶ್ವರ್ ಸಾಕಷ್ಟು ಚುರುಕಾಗಿದ್ದರು. ಕ್ಷೇತ್ರದ ಉಪ ಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಅವರು ಹಲವು ಬಾರಿ ದೆಹಲಿಗೂ ಹೋಗಿ ಬಂದಿದ್ದರು. ಉಪಚುನಾವಣೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಕ್ಷೇತ್ರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದು, ಆದಷ್ಟು ಬೇಗ ಎನ್‌ಡಿಎ ಅಭ್ಯರ್ಥಿ ಹೆಸರು ಘೋಷಿಸುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದರು. ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬಂದ ಬಳಿಕ ಯೋಗೇಶ್ವರ್ ಸುಮ್ಮನಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದರು.
ಇದನ್ನೂ ಓದಿ: HD Kumaraswamy: ಚನ್ನಪಟ್ಟಣದಲ್ಲಿ ಮಗ ನಿಖಿಲ್ ಜೊತೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪ್ರಚಾರ ಆರಂಭ