Friday, 22nd November 2024

Election Commission: ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌; ಇಲ್ಲಿದೆ ಡಿಟೇಲ್ಸ್‌

EC

ನವದೆಹಲಿ: ಭಾರತೀಯ ಚುನಾವಣಾ ಆಯೋಗವು (Election Commission) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ(Assembly Elections 2024)ಗಳ ದಿನಾಂಕ(Poll Dates) ಇಂದು ಘೋಷಿಸಿದೆ. ಇಂದು ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಪತ್ರಿಕಾಗೋಷ್ಠಿ ನಡೆಸಿ ಎರಡೂ ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್‌ 20ರಂದು ಒಂದೇ ಹಂತದ ಮತದಾನದ ನಡೆಯಲಿದ್ದು, ನ.23ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಇನ್ನು ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ನವೆಂಬರ್‌ 13 ಮತ್ತು ಎರಡನೇ ಹಂತದ ಮತದಾನ ನವೆಂಬರ್‌ 20ರಂದು ನಡೆಯಲಿದೆ. ಇನ್ನು ಚುನಾವಣಾ ಫಲಿತಾಂಶ ನವೆಂಬರ್‌ 23 ರಂದು ಪ್ರಕಟವಾಗಲಿದೆ.

ಇನ್ನು ಮಹಾರಾಷ್ಟ್ರ ವಿಧಾನಸಭೆಯ ಅವಧಿಯು ನವೆಂಬರ್ 26 ರಂದು ಮುಕ್ತಾಯಗೊಳ್ಳಲಿದ್ದು, ಜಾರ್ಖಂಡ್ ವಿಧಾನಸಭೆಯ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ 288 ಸ್ಥಾನಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜಾರ್ಖಂಡ್‌ನಲ್ಲಿ 81 ಸ್ಥಾನಗಳಿಗೆ ಮತದಾನ ನಡೆಯಲಿದೆ.

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್‌

ಕರ್ನಾಟಕ ಸೇರಿದಂತೆ ದೇಶದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನ.13 ರಂದು ಉಪ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಹೇಳಿದ್ದಾರೆ. ಕರ್ನಾಟಕ ಮೂರು ಕ್ಷೇತ್ರಗಳಾದ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್‌ 13ರಂದು ಮತದಾನ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಮಹಾರಾಷ್ಟ್ರದ ಬಿಜೆಪಿ ಕಸರತ್ತು ಶುರು

2019 ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಸೋಮವಾರ, ಅದರ ಕೋರ್ ಕಮಿಟಿ ಸಭೆಯಲ್ಲಿ, ಪಕ್ಷವು ಚುನಾವಣೆಗೆ ಒಳಪಡುವ ರಾಜ್ಯದ ಎಲ್ಲಾ 288 ಸ್ಥಾನಗಳ ಬಗ್ಗೆ ಚರ್ಚಿಸಿದೆ. ಆದಾಗ್ಯೂ, ಬಿಜೆಪಿಯು 100 ಸ್ಥಾನಗಳಲ್ಲಿ ಸ್ಪರ್ಧಿಸುವುದು ಖಚಿತ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನಗಳ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ. ಈ ಕ್ಷೇತ್ರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿದ್ದು, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕಾಗುತ್ತದೆ.

ಬಿಜೆಪಿಯ ಮೂಲಗಳ ಪ್ರಕಾರ, ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಕೇಸರಿ ಪಕ್ಷವು ತನ್ನ ಹಾಲಿ ಶಾಸಕರಿಗೇ ಮತ್ತೊಮ್ಮೆ ಮಣೆ ಹಾಕುವು ಸಾಧ್ಯತೆ ದಟ್ಟವಾಗಿದೆ. ಮೊದಲ ಪಟ್ಟಿಯಲ್ಲಿ ಹಿರಿಯ ಶಾಸಕರು ಮತ್ತು ಹಾಲಿ ಸಚಿವರ ಹೆಸರು ಇರಬಹುದು ಎಂದು ಅಂದಾಜಿಸಲಾಗಿದೆ.

ಜಾರ್ಖಂಡ್‌ನಲ್ಲಿ JMM ಮಾಸ್ಟರ್‌ ಪ್ಲ್ಯಾನ್‌

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲಾ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ. ಸೋಮವಾರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕೇಂದ್ರ ಸಮಿತಿ ಸಭೆಯ ನಂತರ ಮಾತನಾಡಿದ ಸೊರೆನ್, ಪಕ್ಷದ ಚುನಾವಣಾ ಸಿದ್ಧತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ರಾಜ್ಯದಲ್ಲಿ ಮೈತ್ರಿಕೂಟವು ಮತ್ತೆ ಅಧಿಕಾರವನ್ನು ಪಡೆಯಲಿದೆ ಎಂದು ಪ್ರತಿಪಾದಿಸಿದರು.

ಈ ಸುದ್ದಿಯನ್ನೂ ಓದಿ: Pralhad Joshi: ಹರಿಯಾಣ, ಜಮ್ಮು-ಕಾಶ್ಮೀರ ಫಲಿತಾಂಶ ಮೋದಿ ಸಮರ್ಥ ನಾಯಕತ್ವಕ್ಕೆ ನಿದರ್ಶನ ಎಂದ ಜೋಶಿ