ನವ ದೆಹಲಿ: ಚುನಾವಣೋತ್ತರ ಸಮೀಕ್ಷೆಗಳಿಂದಾಗಿ ಚುನಾವಣಾ ವ್ಯವಸ್ಥೆ ವಿರೂಪಗೊಳ್ಳುತ್ತಿದೆ ಎಂದು ಚುನಾವಣಾ ಆಯೋಗ (Election Commission) ಮಂಗಳವಾರ ಅಭಿಪ್ರಾಯಪಟ್ಟಿದೆ. ಮತಗಟ್ಟೆ ಸಮೀಕ್ಷೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದೆ. ಚುನಾವಣೋತ್ತರ ಸಮೀಕ್ಷೆಗಳು ಮತ್ತು ನಿರೀಕ್ಷೆಗಳಿಂದಾಗಿ ವ್ಯವಸ್ಥೆಯಲ್ಲಿ ಲೋಪ ಉಂಟಾಗುತ್ತಿದೆ. ಇದು ಪತ್ರಿಕೆಗಳಿಗೆ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ಆತ್ಮಾವಲೋಕನದ ವಿಷಯವಾಗಿದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಳೆದ ಕೆಲವು ಚುನಾವಣೆಗಳಲ್ಲಿ ನಾವು ಗಮನಿಸಿದ ಹಾಗೆ ಎಕ್ಸಿಟ್ ಪೋಲ್ ವ್ಯವಸ್ಥೆಯನ್ನು ವಿರೂಪಗೊಳಿಸುತ್ತಿದೆ. ಮೊದಲನೆಯದಾಗಿ ಚುನಾವಣೋತ್ತರ ಸಮೀಕ್ಷೆಗಳು ಬರುತ್ತವೆ. ಆದರೆ ನಮಗೆ ಅದರ ಮೇಲೆ ನಿಯಂತ್ರಣ ಇರುವುದಿಲ್ಲ. ಅದರ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನುಡಿದರು.
ಸಮೀಕ್ಷೆಗಳಿಗೆ ಮಾದರಿಯೇನು? ಸಮೀಕ್ಷೆಗಳನ್ನು ಎಲ್ಲಿ ನಡೆಸಲಾಯಿತು. ಫಲಿತಾಂಶ ಹೇಗೆ ಬಂದಿತು ಮತ್ತು ಆ ಫಲಿತಾಂಶಕ್ಕೆ ಹೊಂದಿಕೆಯಾಗದಿದ್ದರೆ ಜವಾಬ್ದಾರಿಯೇನು ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರಶ್ನಿಸಿದರು. ಇದೇ ವೇಳೆ ಅವರು ಇಂಥ ಸಂಸ್ಥೆಗಳು ಸ್ವಯಂ ನಿಯಂತ್ರಣ ಮಾಡಬೇಕಾಗಿದೆ ಎಂದು ಹೇಳಿದರು.
ಆರಂಭಿಕ ಎಣಿಕೆ ಪ್ರವೃತ್ತಿಗಳ ಪ್ರಶ್ನೆ
ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾದ 15-30 ನಿಮಿಷಗಳಲ್ಲಿ ಟಿವಿ ಚಾನೆಲ್ ಗಳಲ್ಲಿ ತೋರಿಸಲಾಗುವ ಆರಂಭಿಕ ಪ್ರವೃತ್ತಿಗಳನ್ನು ಚುನಾವಣಾ ಆಯೋಗ ಪ್ರಶ್ನಿಸಿದೆ. ಚುನಾವಣೆ ಮುಗಿದ ಮೂರನೇ ದಿನದಂದು ಮತ ಎಣಿಕೆ ನಡೆಯುತ್ತದೆ. ಆ ವೇಳೆಯೆ ನಿಖರವಲ್ಲದ ಫಲಿತಾಂಶಗಳನ್ನು ಹೇಳಲಾಗುತ್ತದೆ. ಮತ ಎಣಿಕೆಯ ಆರಂಭಿಕ ಪ್ರವೃತ್ತಿಗಳನ್ನು ಎಕ್ಸಿಟ್ ಪೋಲ್ ಮೂಲಕ ಹೊಂದಿಕೆ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಬೆಳಿಗ್ಗೆ 9.30 ಕ್ಕೆ ವೆಬ್ಸೈಟ್ನಲ್ಲಿ ಫಲಿತಾಂಶಗಳನ್ನು ಹಾಕಲು ಪ್ರಾರಂಭಿಸುತ್ತೇವೆ. ಅದು ನೈಜ ಫಲಿತಾಂಶಗಳಿಗೆ ಹೊಂದಿಕೆಯಾಗುವುದಿಲ್ಲ. ಅವುಗಳು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನಿರೀಕ್ಷೆಗಳು ಮತ್ತು ನೈಜ ಸಂಖ್ಯೆಗಳ ನಡುವಿನ ಅಂತರ ಹತಾಶೆ ಉಂಟು ಮಾಡುತ್ತದೆ. ಈ ವಿಷಯದ ಬಗ್ಗೆ ಚರ್ಚೆಯ ಅಗತ್ಯವಿದೆ” ಎಂದು ಚುನಾವಣಾ ಆಯೋಗದ ಮುಖ್ಯಸ್ಥರು ಹೇಳಿದ್ದಾರೆ.
ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ತೋರಿಸಿದ್ದವು. ಬಿಜೆಪಿ 48 ಸ್ಥಾನಗಳೊಂದಿಗೆ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಈ ಫಲಿತಾಂಶವನ್ನು ವಿರೋಧಿಸಿತ್ತು.