Wednesday, 23rd October 2024

Election Commission : ಲೆಬನಾನ್‌ನಲ್ಲಿ ಪೇಜರ್ ಸ್ಫೋಟಿಸಿದಂತೆ ಇವಿಎಂಗಳನ್ನು ಮಾಡಬಹುದೇ? ಚುನಾವಣಾ ಆಯೋಗದ ಉತ್ತರವೇನು?

Election Commission

ಬೆಂಗಳೂರು: ಇವಿಎಂಗಳನ್ನು ಹ್ಯಾಕ್ ಮಾಡಬಹುದೇ ಎಂಬುದು ಭಾರತದಲ್ಲಿ ಒಂದು ವರ್ಗದ ಯಕ್ಷ ಪ್ರಶ್ನೆ. ಚುನಾವಣಾ ಆಯೋಗ ಇಲ್ಲ ಎಂದು ಪದೇ ಪದೆ ಉತ್ತರ ಹೇಳುತ್ತಿರುವ ನಡುವೆಯೂ ಅನುಮಾನ ಕೊನೆಯಾಗಿಲ್ಲ.ಇದೀಗ ಆ ಪ್ರಶ್ನೆಗೆ ಮತ್ತೊಂದು ತರ್ಕವನ್ನು ಮಂಡಿಸಲಾಗುತ್ತಿದೆ. ಲೆಬನಾನ್‌ನಲ್ಲಿ ಪೇಜರ್‌ಗಳನ್ನು ಸ್ಫೋಟ ಮಾಡಲು ಸಾಧ್ಯವಾದರೆ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಏಕೆ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುದು. ಜತೆಗೆ ಅವುಗಳನ್ನು ಸ್ಫೋಟಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮುಂದಾಗಿದೆ. ಈ ಪ್ರಶ್ನೆ ಮಂಗಳವಾರ ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನ ಸಭೆಯ ಚುನಾವಣೆ ದಿನಾಂಕ ಪ್ರಕಟಣೆ ವೇಳೆ ಮತ್ತೆ ಎದುರಾಯಿತು. ಈ ವೇಳೆ ಮುಖ್ಯ ಚುನಾವಣಾ ಆಯುಕ್ತರು (Election Commission) ಕೊಟ್ಟಿರುವ ಸರಳ ಉತ್ತರ ಈ ರೀತಿ ಇದೆ. “ಪೇಜರ್‌ಗಳು ನೆಟ್‌ವರ್ಜ್‌ ಸಂಪರ್ಕ ಹೊಂದಿವೆ, ಆದರೆ ಇವಿಎಂಗಳು ಸಂಪರ್ಕ ಹೊಂದಿಲ್ಲ.”

ಚುನಾವಣೆಯಲ್ಲಿ ಮತದಾನಕ್ಕಾಗಿ ಬಳಸಲಾಗುವ ಈ ಇವಿಎಂಗಳು ಯಾವುದೇ ಸಾಧನಕ್ಕೆ ಸಂಪರ್ಕ ಹೊಂದಿಲ್ಲದ ಕಾರಣ ಅವುಗಳನ್ನು ಹ್ಯಾಕ್ ಮಾಡಲು ಅಥವಾ ತಿರುಚಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ. ಇವಿಎಂಕ ಮಾಡಲು ವಿದ್ಯುತ್ ಸಂಪರ್ಕವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, “ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಬಳಸುವ ವ್ಯಕ್ತಿಗಳನ್ನು ಇಸ್ರೇಲ್ ಗುರಿಯಾಗಿಸಬಹುದಾದರೆ, ಇವಿಎಂಗಳ ಸುರಕ್ಷತೆಗೆ ಹೇಗೆ ?” ಎಂದು ಪ್ರಶ್ನಿಸಿದ್ದರು. ಇವಿಎಂ ಹ್ಯಾಕಿಂಗ್ ಆರೋಪವನ್ನು ಮತ್ತೊಮ್ಮೆ ತಳ್ಳಿಹಾಕಿದ ಸಿಇಸಿ ರಾಜೀವ್ ಕುಮಾರ್, ಇವಿಎಂಗಳನ್ನು ಯಾವುದೇ ಸಾಧನಕ್ಕೆ ಸಂಪರ್ಕಿಸಲಾಗಿಲ್ಲ ಮತ್ತು ಆದ್ದರಿಂದ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಪೇಜರ್ ಗಳು ಸಂಪರ್ಕ ಹೊಂದಿರುವುದರಿಂದ ಅವುಗಳನ್ನು ಸ್ಪೋಟಿಸಬಹುದು ಅಥವಾ ಇನ್ನೇನಾದರೂ ಮಾಡಬಹುದು ಎಂದು ಹೇಳಿದರು.

ಇವಿಎಂಗಳು ವರ್ಸಸ್‌ ಪೇಜರ್

ಬೀಪಪ್‌ ಎಂದೂ ಕರೆಯಲ್ಪಡುವ ಪೇಜರ್‌ ಕಿರು ಸಂದೇಶಗಳು ಅಥವಾ ಎಚ್ಚರಿಕೆಗಳನ್ನು ಸ್ವೀಕರಿಸಲು ಮತ್ತು ಪ್ರದರ್ಶಿಸಲು ಬಳಸುವ ಸಂವಹನ ಸಾಧನ. ಅವು ರೇಡಿಯೋ ತರಂಗಾಂತರದ ಮೂಲಕ ಕಾರ್ಯನಿರ್ವಹಿಸುತ್ತವೆ ಮತ್ತು ಕೇಳಬಹುದಾದ ಟೋನ್‌ಗಳು, ಕಂಪನಗಳು ಅಥವಾ ದೃಶ್ಯಗಳ ಮೂಲಕ ಬಳಕೆದಾರರನ್ನು ಎಚ್ಚರಿಸುತ್ತದೆ.

ಇವಿಎಂಗಳು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಹೈದರಾಬಾದ್‌ನ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಪೂರೈಸಿದ ಸಾಮಾನ್ಯ 7.5 ವೋಲ್ಟ್ ಆಲ್ಕಾಲೈನ್‌ ಪವರ್ ಪ್ಯಾಕ್‌ನೊಂದಿಗೆ (ತಲಾ 1.5 ವೋಲ್ಟ್‌ 5 ಎಎ ಗಾತ್ರದ ಸೆಲ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ) ಚಲಿಸುತ್ತವೆ.

ಇದನ್ನೂ ಓದಿ: Election Commission : ಮತಗಟ್ಟೆ ಸಮೀಕ್ಷೆಗಳ ವಿರುದ್ಧ ಚುನಾವಣಾ ಆಯೋಗ ಬೇಸರ; ಆತ್ಮಾವಲೋಕನಕ್ಕೆ ಕರೆ

ಒಂದು ಇವಿಎಂ ಎರಡು ಘಟಕಗಳನ್ನು ಒಳಗೊಂಡಿದೆ. ಒಂದು ಕಂಟ್ರೋಲ್ ಯೂನಿಟ್ ಮತ್ತು ಒಂದು ಬ್ಯಾಲೆಟ್ ಯೂನಿಟ್. ಮತದಾರ ತನ್ನ ಆಯ್ಕೆಯ ಅಭ್ಯರ್ಥಿ ಮತ್ತು ಚಿಹ್ನೆಯ ‘ಅಭ್ಯರ್ಥಿ’ ಗುಂಡಿಯನ್ನು (ನೀಲಿ ಬಟನ್) ಒತ್ತುವ ಮೂಲಕ ತನ್ನ ಮತ ಚಲಾಯಿಸಲು ಸಾಧ್ಯ.

ಯಾವುದೇ ತಿರುಚುವಿಕೆ ತಡೆಗಟ್ಟಲು ಇವಿಎಂ ಅನ್ನು ಯಾಂತ್ರಿಕವಾಗಿ ಮತ್ತು ವಿದ್ಯುನ್ಮಾನವಾಗಿ ರಕ್ಷಿಸಲಾಗಿದೆ. ಈ ಇವಿಎಂಗಳಲ್ಲಿ ಬಳಸಲಾದ ಪ್ರೋಗ್ರಾಂ, ಒನ್ ಟೈಮ್ ಪ್ರೋಗ್ರಾಮಬಲ್ / ಮಾಸ್ಕ್ಡ್ ಚಿಪ್ (ಹಾರ್ಡ್‌ವೇರ್‌) ಆಗಿರುತ್ತದೆ. ಹೀಗಾಗಿ ಅದನ್ನು ಬದಲಾಯಿಸಲು ಅಥವಾ ತಿರುಚಲು ಸಾಧ್ಯವಿಲ್ಲ ದು ಚುನಾವಣಾ ಆಯೋಗ ತನ್ನ ದಾಖಲೆಗಳಲ್ಲಿ ವಿವರಿಸಿದೆ. ಇವಿಎಂಗಳನ್ನು ತಂತಿ ಅಥವಾ ವೈರ್‌ಲೆಸ್‌ ವ್ಯವಸ್ಥೆ ಬೇರೆ ಯಾವುದೇ ಯಂತ್ರ ಅಥವಾ ವ್ಯವಸ್ಥೆಗೆ ಸಂಪರ್ಕಿಸಲಾಗುವುದಿಲ್ಲ. ಆದ್ದರಿಂದ, ಡೇಟಾ ತಿರುಚುವ ಸಾಧ್ಯತೆಯಿಲ್ಲ” ಎಂದು ಚುನಾವಣಾ ಆಯೋಗ ಹೇಳಿದೆ.