Monday, 18th November 2024

Khillari cattle: ಬರೋಬ್ಬರಿ 1.50 ಲಕ್ಷಕ್ಕೆ ಮಾರಾಟವಾದ ಖಿಲಾರಿ ತಳಿಯ ಕರು; ಏನಿದರ ವಿಶೇಷತೆ?

Khillari cattle

ಬೆಳಗಾವಿ: ಖಿಲಾರಿ ತಳಿಯ ಕರುವೊಂದು ಬರೋಬ್ಬರಿ 1.50 ಲಕ್ಷ ರೂಪಾಯಿಗೆ ಮಾರಾಟವಾಗಿ ಗಮನ ಸೆಳೆದಿದೆ. ಮೂರು ತಿಂಗಳ ಕರುವನ್ನು ದುಬಾರಿ ಬೆಲೆಗೆ ಖರೀದಿಸಿರುವ ಬೆಳಗಾವಿಯ ರೈತರೊಬ್ಬರು, ಕರುವಿಗೆ (Khillari cattle) ಬಣ್ಣ ಹಚ್ಚಿ ಮೆರವಣಿಗೆಯಲ್ಲಿ ಮನೆಗೆ ಕರೆತಂದಿದ್ದಾರೆ.

ಕರು ಹುಟ್ಟಿ ಕೇವಲ 95 ದಿನಗಳಷ್ಟೇ ಆಗಿದ್ದು, ಆಗಲೇ ಅದು 1.5 ಲಕ್ಷಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರು ಗ್ರಾಮದ ರೈತ ಅಶೋಕ ಜಂಬಗಿಯವರ ಖಿಲಾರಿ ಹಸು ಈ ಕರುವಿಗೆ ಜನ್ಮ ನೀಡಿತ್ತು. ಹುಟ್ಟಿದ ಮೂರೇ ತಿಂಗಳಿಗೆ ಭಾರಿ ಬೆಲೆಗೆ ಕರು ಮಾರಾಟವಾಗಿದೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರಿಯಪ್ಪ ಬರಮಪ್ಪ ಲಾಳಿ ಎಂಬುವವರು ಈ ಕರುವನ್ನು 1.5 ಲಕ್ಷ ನೀಡಿ ಖರೀದಿಸಿದ್ದು, ಕರುವಿಗೆ ಬಣ್ಣ ಬಳಿದು ಮೆರವಣಿಗೆ ಮಾಡಿಸುವ ಮೂಲಕ ಸ್ವಾಗತ ಕೋರಿದ್ದಾರೆ.

ಖಿಲಾರಿ ತಳಿಯ ವಿಶೇಷತೆ ಏನು?
ಖಿಲಾರಿ ಎಂಬುದು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆಯಿರುವ ಹಸುವಿನ ತಳಿಯಾಗಿದೆ. 95 ದಿನಗಳ ಈ ಖಿಲಾರಿ ಕರುವು ಬಲಿಷ್ಠವಾಗಿ ಬೆಳೆದಿದ್ದು ಬಿಗಿಯಾದ ಚರ್ಮವನ್ನು ಹೊಂದಿದೆ. ಬಿಳಿ ಬೂದು ಬಣ್ಣದ ಈ ಕರು ಬಲಿಷ್ಠ ಕುತ್ತಿಗೆ ಹೊಂದಿದೆ. ಈಗಾಗಲೇ 3.5 ಅಡಿ ಎತ್ತರ ಹೊಂದಿರುವ ಈ ಕರು ಉತ್ತಮ ಖಿಲಾರಿ ತಳಿ ಹೋರಿಯ ಗುಣಲಕ್ಷಣ ಹೊಂದಿದೆ.

ಮರಾಠಿಯಲ್ಲಿ ಖಿಲಾರ್ ಎಂದರೆ ಗುಂಪು, ಮಂದೆ ಎಂಬೆಲ್ಲ ಅರ್ಥಗಳಿವೆ. ಹಾಗೆ ಗುಂಪಿನಲ್ಲಿ ಸಾಕುವುದರಿಂದ ಇದಕ್ಕೆ ಖಿಲಾರಿ ಎಂಬ ಹೆಸರು ಬಂದಿದೆ. ನಾಲ್ಕೂವರೆಯಿಂದ ಐದು ಅಡಿ ಎತ್ತರದ ಖಿಲಾರಿ ಅತ್ಯಂತ ಪ್ರಸಿದ್ಧ ಕೆಲಸಗಾರ ತಳಿಯಾಗಿದೆ. ಬಲಯುತವಾದ ಕುತ್ತಿಗೆ, ಬಿಗಿ ಚರ್ಮ, ಸ್ವಲ್ಪ ಹಳ್ಳಿಕಾರಿನಂತೆ ಕಾಣುವ ಕೊಂಬು ಇವು ಖಿಲಾರಿಯ ಮೇಲ್ನೋಟಕ್ಕೆ ಗುರುತಿಸಬಹುದಾದ ಲಕ್ಷಣಗಳು.

ಇನ್ನು ಖಿಲಾರಿ ಹೋರಿಗಳಿಗೆ ಭಾರಿ ಬೇಡಿಕೆ ಇದ್ದು, ಬಯಲುಸೀಮೆ ಜಾನುವಾರು ಸಂತೆಗಳಲ್ಲಿ ಇವು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆ. ಖಿಲಾರಿಗಳು ಪ್ರತಿಷ್ಠೆಯ ಸೂಚಕವಾಗಿದ್ದು, ಅವುಗಳಿಗೆ ಹಾಕಿದ ಹಣ ಸುಲಭವಾಗಿ ವಾಪಸ್‌ ಬರುತ್ತದೆ ಎಂಬುವುದು ರೈತರ ನಂಬಿಕೆ. ಖಿಲಾರಿಗಳಿಗೋಸ್ಕರ ರಾಜ್ಯ ಸರ್ಕಾರ ಬಂಕಾಪುರದಲ್ಲಿ ಖಿಲಾರಿ ತಳಿ ಸಂವರ್ಧನಾ ಕೇಂದ್ರ ಆರಂಭಿಸಿದೆ.