Wednesday, 23rd October 2024

Bengaluru Rain : ಒಂದೇ ದಿನದ ಮಳೆಗೆ ಕೆರೆಯಾದ ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಕಿಡಿ

Bengaluru Rain

ಬೆಂಗಳೂರು: ಒಂದೇ ದಿನದ ಮಳೆಗೆ ಭಾರತದ ಸಿಲಿಕಾನ್ ಸಿಟ ಬೆಂಗಳೂರು (Bengaluru Rain) ಕೆರೆಯಂತೆ ಆಗಿದ್ದು, ಇಂಥ ದುಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರಕಾರದ ಕೆಟ್ಟ ನೀತಿಗಳೇ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್’ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: DK Shivakumar : ಮಳೆ ಹಿನ್ನೆಲೆ; ಬಿಬಿಎಂಪಿ ನಿಯಂತ್ರಣಾ ಕಚೇರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ, ಪರಿಶೀಲನೆ

ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

ಹೂಡಿಕೆದಾರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.