Friday, 22nd November 2024

Bomb threat: 2 ದಿನ..10 ವಿಮಾನಗಳಿಗೆ ಬಾಂಬ್‌ ಬೆದರಿಕೆ- ಇಂದು ತುರ್ತು ಸಭೆ ಕರೆದ ವಿಮಾನಯಾನ ಸಚಿವಾಲಯ

bomb threat

ನವದೆಹಲಿ: ದೇಶದಲ್ಲಿ ಹುಸಿಬಾಂಬ್‌ ಕರೆ(Bomb threat) ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಕಳೆದೆರಡು ದಿನಗಳಲ್ಲಿ ಬರೋಬ್ಬರಿ 10 ಭಾರತೀಯ ವಿಮಾನಗಳಿಗೆ ಹುಸಿ ಬಾಂಬ್‌ ಕರೆ ಬಂದಿದ್ದು ವಿಮಾನಗಳನ್ನು ತುರ್ತು ಭೂಸ್ಪರ್ಷ ಮಾಡಲಾಯಿತು. ಮಂಗಳವಾರ ಬೆದರಿಕೆ ಕರೆ ಬಂದ ಹಿನ್ನೆಲೆ ದೆಹಲಿಯಿಂದ ಚಿಕಾಗೋಗೆ 211 ಜನರಿದ್ದ ಏರ್ ಇಂಡಿಯಾ ವಿಮಾನವನ್ನು ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಇನ್ನು ಹಲವಾರು ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಸರಣಿ ಬಾಂಬ್ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಬುಧವಾರ ಉನ್ನತ ಮಟ್ಟದ ಸಭೆಯನ್ನು ಕರೆದಿದೆ.

10 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಒಂದೇ X ಖಾತೆಯಿಂದ ಬಂದಿವೆ, schizobomber777, ಅದನ್ನು ಈಗ ಸಸ್ಪೆಂಡ್‌ ಮಾಡಲಾಗಿದೆ. ಬೆದರಿಕೆ ಹಿನ್ನೆಲೆ ಏರ್‌ಪೋರ್ಟ್‌ಗಳಲ್ಲಿ ಭಾರೀ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರದಿಂದ ಅಯೋಧ್ಯೆ ಮೂಲಕ ಬೆಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX765, ದರ್ಭಾಂಗದಿಂದ ಮುಂಬೈಗೆ ಸ್ಪೈಸ್‌ಜೆಟ್ SG116, ಬಾಗ್ಡೋಗ್ರಾದಿಂದ ಬೆಂಗಳೂರಿಗೆ ಆಕಾಶ ಏರ್ ಫ್ಲೈಟ್ QP1373, ದೆಹಲಿಯಿಂದ ಚಿಕಾಗೋಗೆ ಏರ್ ಇಂಡಿಯಾ ವಿಮಾನ AI127, ಇಂಡಿಗೋ ವಿಮಾನ 6E98 ದಮ್ಮಾಮ್ (ಸೌದಿ ಅರೇಬಿಯಾ) ಲಕ್ನೋಗೆ, ಅಲಯನ್ಸ್ ಏರ್ ಫ್ಲೈಟ್ 9I650 ಅಮೃತಸರದಿಂದ ಡೆಹ್ರಾಡೂನ್, ಮತ್ತು ಮಧುರೈನಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX684 ಸೇರಿದಂತೆ ಹಲವಾರು ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ವಿಮಾನಗಳಲ್ಲಿ ಬಾಂಬ್‌ಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಹಲವಾರು ಖಾತೆಗಳನ್ನು ನಾವು ಗುರುತಿಸಿದ್ದೇವೆ ಮತ್ತು ಅಮಾನತುಗೊಳಿಸಿದ್ದೇವೆ. ಲಂಡನ್ ಮತ್ತು ಇತರ ದೇಶಗಳಿಂದ ಕೆಲವು ಬೆದರಿಕೆಗಳು ಬಂದಿವೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಮಗೆ ಹಲವಾರು ವಲಯಗಳಲ್ಲಿ ಬಾಂಬ್ ಬೆದರಿಕೆಗಳು ಬಂದಿವೆ. ನಾವು ಎಲ್ಲಾ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅದರ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸಲು ಬೆದರಿಕೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅಂತಹ ಬೆದರಿಕೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ, ಏಕೆಂದರೆ ಅವುಗಳು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿವೆ ಎಂದು ಮತ್ತೊಬ್ಬ ಹಿರಿಯ ಭದ್ರತಾ ಅಧಿಕಾರಿ ಹೇಳಿದ್ದಾರೆ. ನಾವು ಬೆದರಿಕೆಯನ್ನು ಸ್ವೀಕರಿಸಿದ ನಂತರ, ಮುಂದಿನ ಕಾರ್ಯವಿಧಾನಕ್ಕಾಗಿ ನಾವು ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಭದ್ರತಾ ಅಧಿಕಾರಿಗೆ ತಿಳಿಸುತ್ತೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Bomb scare : ಮಂಗಳವಾರ ಒಂದೇ ದಿನ ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ!