ನವದೆಹಲಿ: ಕೇಂದ್ರ ಸರಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ದೀಪಾವಳಿ ಹಬ್ಬ(Diwali Festival)ಕ್ಕೂ ಮುನ್ನವೇ ಗುಡ್ನ್ಯೂಸ್ ದೊರೆತಿದೆ. ಕೇಂದ್ರ ಸರಕಾರ ತುಟ್ಟಿ ಭತ್ಯೆ (DA Hike)ಯನ್ನು ಶೇ. 3ರಷ್ಟು ಹೆಚ್ಚಿಸಲು ಮುಂದಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆಗೆ ಅಸ್ತು ಎನ್ನಲಾಗಿದೆ. ಇದರೊಂದಿಗೆ ಕೇಂದ್ರ ಸರಕಾರಿ ನೌಕರರ ಒಟ್ಟಾರೆ ತುಟ್ಟಿ ಭತ್ಯೆ ಹಾಲಿ ಶೇ. 50ರಿಂದ ಶೇ. 53ಕ್ಕೆ ಏರಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ನಲ್ಲಿ 3% ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. 10 ಲಕ್ಷಕ್ಕೂ ಹೆಚ್ಚು ಫಲಾನುಭವಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ.
ತಿಂಗಳಿಗೆ ರೂ 18,000 ಗಳಿಸುವ ಉದ್ಯೋಗಿ ಹೆಚ್ಚುವರಿ ರೂ 540 ಅನ್ನು ಟೇಕ್-ಹೋಮ್ ಪೇ ಆಗಿ ಪಡೆಯುತ್ತಾನೆ. ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಘೋಷಿಸಲಾಗುವ ಡಿಎ ಪರಿಷ್ಕರಣೆಯ ವಿಳಂಬವು ನೌಕರರ ಸಂಘಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿತು.
ಈ ಡಿಎ ಹೆಚ್ಚಳವು 7ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸಾವಿರಾರು ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನ ನೀಡಲಿದೆ. ಕಳೆದ ಮಾರ್ಚ್ 7ರಂದು ಈ ವರ್ಷದ ಮೊದಲ ಡಿಎ ಹೆಚ್ಚಳ ಪ್ರಕಟಿಸಿತ್ತು. ಆ ಸಂದರ್ಭದಲ್ಲಿ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಈ ಏರಿಕೆ ಮಾಡಲಾಗಿತ್ತು. ಕೇಂದ್ರ ಸರಕಾರ ವರ್ಷದಲ್ಲಿ ಎರಡು ಬಾರಿ, ಅಂದರೆ ಜನವರಿ ಹಾಗೂ ಜುಲೈನಲ್ಲಿ ತುಟ್ಟಿ ಭತ್ಯೆ ಏರಿಕೆ ಮಾಡುತ್ತದೆ. ಆದರೆ, ಸಾಮಾನ್ಯವಾಗಿ ಇದನ್ನು ಅಧಿಕೃತವಾಗಿ ನಂತರದ ತಿಂಗಳುಗಳಲ್ಲಿ ಘೋಷಿಸಲಾಗುತ್ತದೆ. ಡಿಎ ಏರಿಕೆಯಾದರೆ, ಕೇಂದ್ರ ಸರಕಾರಿ ನೌಕರರ ಟೇಕ್-ಹೋಮ್ ವೇತನದಲ್ಲಿ ಹೆಚ್ಚಳವಾಗಲಿದೆ.
ಡಿಎ ಏರಿಕೆಯಾದಲ್ಲಿ ಕೇಂದ್ರ ಸರಕಾರಿ ನೌಕರರ ಟೇಕ್-ಹೋಮ್ ವೇತನದಲ್ಲಿ ಹೆಚ್ಚಳವಾಗಲಿದೆ. ಉದಾಹರಣೆಗೆ ತಿಂಗಳಿಗೆ 55,200 ರೂ. ಮೂಲ ವೇತನ ಪಡೆಯುವ ಕೇಂದ್ರ ಸರಕಾರಿ ನೌಕರರ ಪ್ರಕರಣವನ್ನು ತೆಗೆದುಕೊಂಡರೆ, ಶೇ. 50ರಷ್ಟು ಡಿಎ ಲೆಕ್ಕದಲ್ಲಿ ಅವರ ತುಟ್ಟಿ ಭತ್ಯೆ 27,600 ರೂ. ಆಗುತ್ತದೆ. ಇದೀಗ ಡಿಎಯನ್ನು ಶೇ. 53ಕ್ಕೆ ಏರಿಕೆ ಮಾಡಿದರೆ, ಇದು 29,256 ರೂ. ಆಗಲಿದೆ. ಹೀಗಾಗಿ ತುಟ್ಟಿ ಭತ್ಯೆ ಶೇ. 3ರಷ್ಟು ಹೆಚ್ಚಿಸಿದರೆ ಮುಂಬರುವ ತಿಂಗಳಲ್ಲಿ ಅವರ ಸಂಬಳವನ್ನು (29,256 – 27,600 = 1,656 ) 1,656 ರೂ.ನಷ್ಟು ಹೆಚ್ಚಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: PM Kisan Samman: ಪಿಎಂ ಕಿಸಾನ್ ನಿಧಿ 18ನೇ ಕಂತಿನ ₹20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ