ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (MLA Munirathna) ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬೆಳಗ್ಗೆ ಬಿಡುಗಡೆಯಾದರು. ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಾಸಕನಿಗೆ (MLA Munirathna) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳ ಬಳಿಕ ಸೆರೆವಾಸದಿಂದ ಮುಕ್ತಿ ಲಭಿಸಿದೆ.
ಜೈಲಿನಿಂದ ಶಾಸಕ ಬಿಡುಗಡೆಯಾದ ಹಿನ್ನೆಲೆ ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ನಿವಾಸದೆದುರು ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುನಿರತ್ನ ಅವರಿಗೆ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿ, 1 ಲಕ್ಷ ರೂ. ಪರ್ಸನಲ್ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿತ್ತು.
ಈ ಸುದ್ದಿಯನ್ನೂ ಓದಿ | MUDA Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ. ಮರಿಗೌಡ ರಾಜೀನಾಮೆ
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನವಾಗಿದ್ದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಅ.5ರಂದು ನ್ಯಾಯಾಂಗ ಬಂಧನ ಅವಧಿಯನ್ನು 14 ದಿನ ವಿಸ್ತರಿಸಿ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿತ್ತು. ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರಿಗೆ ಸುತ್ತಿಕೊಂಡಿತ್ತು. ಆದತೆ, ಈ ಪ್ರಕರಣದಲ್ಲಿ ಅವರಿಗೆ ಮಂಗಳವಾರ ಬೇಲ್ ಮಂಜೂರಾದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.
ಏನಿದು ಪ್ರಕರಣ?
2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು.
ಘಟನೆ ಸಂಬಂಧ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ FIR ದಾಖಲಾಗಿತ್ತು. ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ, ವಿಜಯ್ ಕುಮಾರ್, ಕಿರಣ್, ಲೋಹಿತ್, ಮಂಜುನಾಥ್, ಲೋಕಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಖಾಸಗಿ ರೆಸಾರ್ಟ್ನಲ್ಲಿ ಅತ್ಯಾಚಾರ ಮಾಡಿರುವುದಾಗಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದರು.