Friday, 22nd November 2024

World Food Day 2024: ಇಂದು ವಿಶ್ವ ಆಹಾರ ದಿನ; ಸುಸ್ಥಿರ ಪದ್ಧತಿಗಳಿಂದ ಮಾತ್ರವೇ ನಮಗೆ ಉಳಿವು!

World Food Day 2024

ಸುಸ್ಥಿರವಾದ ಒಳ್ಳೆಯ ಅಭ್ಯಾಸಗಳು ದೀರ್ಘ ಕಾಲದವರೆಗೆ ಬದುಕನ್ನು ಹಸನಾಗಿಸಬಲ್ಲವು. ಅದರಲ್ಲೂ ಸವಾಲೊಡ್ಡುವಂಥ ಸನ್ನಿವೇಶಗಳು ಎದುರಾದಾಗ ಇಂಥ ಒಳ್ಳೆಯ ಅಭ್ಯಾಸಗಳೇ ರಕ್ಷೆಯಾಗಿ ಕಾಯುತ್ತವೆ. ಉದಾ: ಜಗತ್ತಿನೆಲ್ಲೆಡೆ ಹವಾಮಾನ ವಿಪರೀತವಾಗಿ ಏರುಪೇರಾಗಿರುವಾಗ ಆಹಾರ ಧಾನ್ಯಗಳನ್ನು ಬೆಳೆಯುವುದೇ ಸವಾಲೆನಿಸಿದೆ. ಇಂಥ ಸನ್ನಿವೇಶದಲ್ಲಿ ಸುಸ್ಥಿರವಾದ ಕೃಷಿಪದ್ಧತಿಗಳು ಹಾಗೂ ಆಹಾರ ಅಭ್ಯಾಸಗಳು ನಮ್ಮ ಮುಂದಿನ ಹಲವು ತಲೆಮಾರುಗಳನ್ನು ಕಾಪಾಡಬಲ್ಲವು. ಆಹಾರದ ಸುತ್ತಮುತ್ತಲಿನ ಇಂಥ ಎಲ್ಲ ತಿಳಿವಳಿಕೆಗಳನ್ನು ಜನರಲ್ಲಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್‌ 16 ರಂದು ವಿಶ್ವ ಆಹಾರ ದಿನವನ್ನು (World Food Day 2024) ಆಚರಿಸಲಾಗುತ್ತದೆ.

ಆಹಾರ ಮತ್ತು ಕೃಷಿ ಸಂಸ್ಥೆಯು 1979ರಲ್ಲಿ ಜಾಗತಿಕವಾಗಿ ಈ ಜಾಗೃತಿ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ. ವಿಶ್ವದೆಲ್ಲೆಡೆ ಕಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯನ್ನು ಕೊನೆಗೊಳಿಸುವ ಘನವಾದ ಉದ್ದೇಶ ಇದರ ಹಿಂದಿದೆ. ಹವಾಮಾನ ವೈಪರಿತ್ಯ, ಆರ್ಥಿಕ ಅಸಮತೋಲನ, ಸಂಘರ್ಷಗಳು ಮುಂತಾದ ಕಾರಣಗಳಿಂದ ಜಗತ್ತಿನೆಲ್ಲೆಡೆ ಕಾಡುತ್ತಿರುವ ಆಹಾರ ಅಭದ್ರತೆ ಮತ್ತು ಪೌಷ್ಟಿಕಾಂಶಗಳ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಇದಕ್ಕಾಗಿ ಸುಸ್ಥಿರವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನೂ ಸಾರುವುದು ಇಂದಿನ ಉದ್ದೇಶ.

ಆಹಾರ ಮತ್ತು ಕೃಷಿ ಸಂಸ್ಥೆ ಜನ್ಮ ತಾಳಿದ್ದು 1945ರಲ್ಲಿ. ನಂತರ, 1979ರಲ್ಲಿ ಆಹಾರ ದಿನದ ಘೋಷಣೆಯಾದ ಬಳಿಕ, ಈವರೆಗೆ ಸುಮಾರು 150 ಕ್ಕೂ ಹೆಚ್ಚು ದೇಶಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ಅಪೌಷ್ಟಿಕತೆಯಿಲ್ಲದ, ಶೂನ್ಯ-ಹಸಿವಿನ ವಿಶ್ವದ ಸೃಷ್ಟಿಗೆ ಶ್ರಮಿಸುವುದು ಇಲ್ಲಿನ ಗುರಿ. ಹಾಗಾಗಿಯೇ ಈ ಬಾರಿಯ ಘೋಷವಾಕ್ಯ- “ಉತ್ತಮ ಬದುಕು ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು”. ವಿಶ್ವದ ಪ್ರತಿಯೊಬ್ಬರಿಗೂ ಘನತೆಯಿಂದ ಒಳ್ಳೆಯ ಆಹಾರ ದೊರೆಯಬೇಕೆಂಬ ಧ್ಯೇಯವನ್ನು ಎಲ್ಲರೂ ಅರಿತಾಗಲೇ ಇದನ್ನು ಸಾಧಿಸಲು ಸಾಧ್ಯ.

ಸವಾಲುಗಳೇನು?

ಮುಖ್ಯವಾದ ಸವಾಲೆಂದರೆ ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಆಹಾರವನ್ನು ಉತ್ಪಾದಿಸುವುದು. 2050 ರ ವೇಳೆಗೆ ಜಗತ್ತಿನ ಜನಸಂಖ್ಯೆ 9.9 ಶತಕೋಟಿ ತಲುಪುವ ಅಂದಾಜಿದೆ. ಇಷ್ಟೊಂದು ಅಗಾಧ ಸಂಖ್ಯೆಯ ಜನರ ಹೊಟ್ಟೆ ತುಂಬಿಸುವುದಕ್ಕೆ, ಈಗಾಗಲೇ ಉತ್ಪಾದನೆಯಾಗುತ್ತಿರುವ ಆಹಾರ ಧಾನ್ಯಗಳಲ್ಲಿ ಶೇ. 60 ರಷ್ಟು ಏರಿಕೆಯಾಗುವ ಅನಿವಾರ್ಯತೆಯಿದೆ. ಆದರೆ ಜಗತ್ತು ಈಗಾಗಲೇ ಅತೀವ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಹೈರಾಣಾಗಿದೆ. ಇವುಗಳ ಜತೆಗೆ, ಫಲವತ್ತಾದ ಕೃಷಿ ಭೂಮಿ ನಶಿಸುತ್ತಿರುವುದು, ಅಗತ್ಯವಾದ ನೀರಿನ ಸೆಲೆ ಕ್ಷೀಣಿಸುತ್ತಿರುವುದು ವಿಶ್ವದೆಲ್ಲೆಡೆ ಕಾಣುತ್ತಿರುವ ವಿದ್ಯಮಾನ. ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ಅಧಿಕ ಇಳುವರಿಯನ್ನು ತೆಗೆಯುವುದೇ ಅತಿದೊಡ್ಡ ಸವಾಲು. ಆದರೆ ಈ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೆ ಹಸಿವು, ಅಪೌಷ್ಟಿಕತೆಯಿಂದ ಜಗತ್ತು ನರಳುವುದನ್ನು ನೋಡಬೇಕಾದೀತು.

ಈ ಸುದ್ದಿಯನ್ನೂ ಓದಿ | Stock Market: ಷೇರುಪೇಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ

ಆಹಾರ ಪದ್ಧತಿ

ಕೃಷಿ ಪದ್ಧತಿ ಸುಸ್ಥಿರವಾಗಿದ್ದರಷ್ಟೇ ಸಾಲದು, ಜನರು ಅಳವಡಿಸಿಕೊಂಡಿರುವ ಆಹಾರ ಪದ್ಧತಿಯೂ ಸಮರ್ಪಕವಾಗಿರುವುದು ಅಗತ್ಯ. ಆರೋಗ್ಯಕರ ಆಹಾರದ ಅಭ್ಯಾಸಗಳನ್ನು ರೂಢಿಸಿಕೊಳ್ಳದಿದ್ದರೆ ಎಷ್ಟೇ ಒಳ್ಳೆಯ ಬೆಳೆಗಳನ್ನು ಕೃಷಿ ವಲಯ ಬೆಳೆದರೂ, ಅವೆಲ್ಲ ವ್ಯರ್ಥವಾಗಬಹುದು. ಇಷ್ಟಾಗಿಯೂ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಕಾರಣ, ಅಸಮರ್ಪಕ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಟ್ಟಿಟ್ಟಿದ್ದು. ವಿಟಮಿನ್‌ ಮತ್ತು ಖನಿಜಗಳ ಕೊರತೆಯಿಂದಾಗಿ ಬರಬಹುದಾದ ರೋಗಗಳನ್ನು ತಡೆಯಲು ಸಾಧ್ಯವಾಗದೆ ಹಲವಾರು ತಲೆಮಾರುಗಳು ಸಮಸ್ಯೆಯ ಸುಳಿಗೆ ಸಿಲುಕಬಹುದು. ರೋಗನಿರೋಧಕ ಶಕ್ತಿ ಕ್ಷೀಣಿಸಬಹುದು. ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ಹಾಗಾಗಿ ಸಮತೋಲನೆಯಿಂದ ಕೂಡಿದ ಆಹಾರ ಪದ್ಧತಿಯನ್ನು ಅನುಸರಿಸುವಂತೆ ತಿಳುವಳಿಕೆ ಮೂಡಿಸುವುದು ವಿಶ್ವ ಆಹಾರ ದಿನದ ಧ್ಯೇಯಗಳ ಸಾಲಿನಲ್ಲಿದೆ.