Friday, 25th October 2024

Online Betting apps: ಆನ್‌ಲೈನ್ ರಮ್ಮಿ, ಬೆಟ್ಟಿಂಗ್‌ ಆ್ಯಪ್‌ಗಳ ನಿಷೇಧಕ್ಕೆ ಆಗ್ರಹ; ನಮ್ಮ ಕರ್ನಾಟಕ ಸೇನೆ ಪ್ರತಿಭಟನೆ

Online Rummy

ಕಲಬುರಗಿ: ಆನ್‌ಲೈನ್‌ ರಮ್ಮಿ ಸೇರಿ ಇನ್ನಿತರ ಆನ್‌ಲೈನ್ ಗೇಮ್‌ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳನ್ನು (Online Betting apps) ನಿಷೇಧ ಮಾಡಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು. ಯುವ ಜನರ ಬಾಳು ಹಾಳು ಮಾಡುತ್ತಿರುವ ಆನ್‌ಲೈನ್‌ ಗೇಮ್‌ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳನ್ನು ಅನ್ನು ತಕ್ಷಣವೇ ಬ್ಯಾನ್ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ನಮ್ಮ ಕರ್ನಾಟಕ ಸೇನೆ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸುಧೀಂದ್ರ ಎಂ.ಇಜೇರಿ ಅವರ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಅಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆನ್‌ಲೈನ್ ರಮ್ಮಿ ಗೇಮ್‌ಗೆ ಅನುಮತಿ ನೀಡಿದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಆನ್‌ಲೈನ್ ಗೇಮ್‌ ಹಾಗೂ ಬೆಟ್ಟಿಂಗ್ ವೆಬ್‌ಸೈಟ್ ಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಆನ್‌ಲೈನ್‌ ಗೇಮ್‌ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳಿಂದ ಎಷ್ಟೋ ಕುಟುಂಬಗಳು ಬೀದಿಪಾಲಾಗುತ್ತಿವೆ. ಚಲನಚಿತ್ರ ನಟ, ನಟಿಯರು ಸೇರಿ ಇನ್ನಿತರ ಸೆಲೆಬ್ರೆಟಿಗಳು ಆನ್‌ಲೈನ್‌ ಗೇಮ್‌ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳ ಜಾಹೀರಾತುಗಳಿಂದ ಹಿಂದೆ ಸರಿಯಬೇಕು. ಇವುಗಳಿಂದ ಯುವಕರ ಜೀವನ ಹಾಳಾಗುತ್ತಿದೆ. ಆನ್‌ಲೈನ್‌ ಗೇಮ್‌ ಮತ್ತು ಬೆಟ್ಟಿಂಗ್‌ ಆ್ಯಪ್‌ಗಳ ನಿಷೇಧ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ನಮ್ಮ ಕರ್ನಾಟಕ ಸೇನೆ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸುಧೀಂದ್ರ ಎಂ.ಇಜೇರಿ ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನೂ ಓದಿ | BBK 11: ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ?: ಜಗದೀಶ್-ರಂಜಿತ್​ರನ್ನು ಮನೆಯಿಂದ ಹೊರ ಹಾಕಿದ ಬಿಗ್ ಬಾಸ್